ಅದ್ದೂರಿಯಿಂದ ಭಕ್ತ ಕನಕದಾಸರ ಜಯಂತ್ಯುತ್ಸವ

ಕಲಬುರಗಿ,ನ.9: ನಗರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಜಿಲ್ಲಾ ಕುರುಬಗೊಂಡ ಸಂಘದ ಸಂಯುಕ್ತ ಆಶ್ರಯದಲ್ಲಿ ನಗರದಲ್ಲಿ ಸಂತ ಶ್ರೇಷ್ಠ ಭಕ್ತ ಕನಕದಾಸರ ಜಯಂತ್ಯುತ್ಸವವನ್ನು ಅದ್ದೂರಿಯಿಂದ ಆಚರಿಸಲಾಗುವುದು ಎಂದು ಕರ್ನಾಟಕ ಪ್ರದೇಶ ಕುರುಬರ ಸಂಘದ ಜಿಲ್ಲಾಧ್ಯಕ್ಷ ಗುರುನಾಥ್ ಎಸ್. ಪೂಜಾರಿ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 10 ಗಂಟೆಗೆ ನಗರದ ಗಂಜ್ ನಗರೇಶ್ವರ್ ಶಾಲೆಯಿಂದ ಸಿದ್ಧರಾಮಾನಂದ್ ಮಹಾಸ್ವಮೀಜಿಗಳು, ಕೇಂದ್ರ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷರು ಮತ್ತು ಜಿಲ್ಲಾಧಿಕಾರಿಗಳು ಪೂಜೆ ಮಾಡುವ ಮೂಲಕ ಮೆರವಣಿಗೆಗೆ ಚಾಲನೆ ನೀಡುವರು ಎಂದರು.
ಬೆಳಿಗ್ಗೆ ಜರುಗುವ ಕಾರ್ಯಕ್ರಮದಲ್ಲಿ ಜಿಲ್ಲೆಯ ಸಮಗ್ರ ನಾಗರಿಕರು, ಕನಕದಾಸರ ಅಭಿಮಾನಿಗಳು, ವಿವಿಧ ಕಲಾ ತಂಡಗಳು, (ಡೊಳ್ಳು ಕುಣಿತ, ಲೇಜಿಮ್, ದ್ವಿಚಕ್ರವಾಹನಗಳ ರ್ಯಾಲಿ) ನಗರದ ವಿವಿಧ ಬಡಾವಣೆಗಳಿಂದ (ಧನಗರಗಲ್ಲಿ, ಶಿವಾಜಿ ನಗರ, ಚೆನ್ನವೀರ ನಗರ, ವಿವಿಧ ಗ್ರಾಮಗಳಿಂದ) ಜಿಲ್ಲಾ ಯುವ ಘಟಕದ ಪದಾಧಿಕಾರಿಗಳು, ಜಿಲ್ಲಾ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣರ ಪದಾಧಿಕಾರಿಗಳು, ವಿವಿಧ ಸಂಘಟನೆಗಳು, ನೌಕರರ ಪದಾಧಿಕಾರಿಗಳು, ಸಮಾಜದ ಹಿರಿಯ ಹಾಗೂ ಯುವ ಮುಖಂಡರು, ಅಭಿಮಾನಿಗಳು, ಗಣ್ಯರು ಭಾಗವಹಿಸಿ, ಮಧ್ಯಾಹ್ನ 2 ಗಂಟೆಗೆ ಎಸ್.ಎಂ. ಪಂಡಿತ್ ರಂಗಮಂದಿರದ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಅವರು ಮನವಿ ಮಾಡಿದರು.
ವಿಶೇಷ ಕಲಾ ತಂಡದವರು ಭಾಗವಹಿಸುವವರು ಪ್ರಧಾನ ಕಾರ್ಯದರ್ಶಿಗಳಾದ ಮಲ್ಲಿಕಾರ್ಜುನ್ ಸಿ. ಮುಡಬೂಳ್ ಅವರ ಮೊಬೈಲ್ ನಂಬರ್ 9902661324ಗೆ ಸಂಪರ್ಕಿಸಲು ಅವರು ಕೋರಿದರು. ಸುದ್ದಿಗೋಷ್ಠಿಯಲ್ಲಿ ಸಾಯಬಣ್ಣ ಸಿ. ಪೂಜಾರಿ, ರವಿಗೊಂಡ್ ಬಿ. ಕಟ್ಟಿಮನಿ, ಪರಮೇಶ್ವರ್ ಆಲಗೂಡ್ ಮುಂತಾದವರು ಉಪಸ್ಥಿತರಿದ್ದರು.