ಅದ್ದೂರಿಯಾಗಿ 75ನೇ ಸ್ವಾತಂತ್ರ್ಯ ದಿನ ಆಚರಿಸಲು ತೀರ್ಮಾನ

ಚಾಮರಾಜನಗರ, ಜು.28:- ಜಿಲ್ಲೆಯಲ್ಲಿ ಜಿಲ್ಲಾಡಳಿತದ ವತಿಯಿಂದ ಆಗಸ್ಟ್ 15ರಂದು ಸ್ವಾತಂತ್ರ್ಯ ದಿನ ಆಚರಣೆ ಕಾರ್ಯಕ್ರಮವನ್ನು ಅದ್ದೂರಿಯಾಗಿ ಎಲ್ಲರ ಸಹಕಾರದೊಂದಿಗೆ ಹಮ್ಮಿಕೊಳ್ಳಲು ನಿರ್ಧರಿಸಲಾಯಿತು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸ್ವಾತಂತ್ರ್ಯ ದಿನಾಚರಣೆ ಸಂಬಂಧ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರ ಅಧ್ಯಕ್ಷತೆಯಲ್ಲಿ ಕರೆಯಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಭಾರತ ಸ್ವಾತಂತ್ರ್ಯದ 75ನೇ ಸಂಭ್ರಮದ ಹಿನ್ನೆಲೆಯಲ್ಲಿ ಈ ಬಾರಿಯ ಸ್ವಾತಂತ್ರ್ಯ ದಿನ ಆಚರಣೆ ಮಹೋತ್ಸವವನ್ನು ಅತ್ಯಂತ ಅರ್ಥಪೂರ್ಣವಾಗಿ ಆಯೋಜಿಸಲು ತೀರ್ಮಾನ ತೆಗೆದುಕೊಳ್ಳಲಾಯಿತು.
ಭಾರತ ಸ್ವಾತಂತ್ರ್ಯದ 75ರ ಸಂಭ್ರಮದ ಭಾಗವಾಗಿ ಹರ್‍ಘರ್‍ತಿರಂಗಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಆಗಸ್ಟ್ 13 ರಿಂದ 15ರವರೆಗೆ ಎಲ್ಲಾ ಸರ್ಕಾರಿಕಚೇರಿ, ಶಾಲಾ-ಕಾಲೇಜು, ಸಂಸ್ಥೆಗಳು, ಮನೆ ಮನೆಯಲ್ಲೂ ರಾಷ್ಟ್ರ ಧ್ವಜ ಹಾರಿಸಿ ದೇಶಭಕ್ತಿ ವ್ಯಕ್ತಪಡಿಸುವ ಅಭಿಯಾನವನ್ನು ಯಶಸ್ವಿಯಾಗಿ ನಡೆಸುವ ಬಗ್ಗೆಯೂ ನಿರ್ಧಾರ ತೆಗೆದುಕೊಳ್ಳÀಲಾಯಿತು.
ಸಭೆಯ ಆರಂಭದಲ್ಲಿ ಮಾತನಾಡಿದ ವಿವಿಧ ಸಂಘಟನೆಗಳ ಮುಖಂಡರು ಜಿಲ್ಲೆಯಲ್ಲಿ ಸ್ವಾತಂತ್ರ್ಯದ 75ರ ಕಾರ್ಯಕ್ರಮವನ್ನು ಅತ್ಯಂತ ಸಂಭ್ರಮ ಹಾಗೂ ವೈವಿದ್ಯಮಯವಾಗಿ ಏರ್ಪಡಿಸಬೇಕು. ಸ್ವಾತಂತ್ರ್ಯದ ಮಹತ್ವ, ಇತಿಹಾಸದ ಕುರಿತು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ರೂಪಿಸಬೇಕು. ಶಾಲಾ ಕಾಲೇಜುಗಳಲ್ಲಿ, ಬ್ಯಾಂಕುಗಳು, ಸರ್ಕಾರಿ ಕಚೇರಿಗಳು, ಎಲ್ಲ ಸಂಘ ಸಂಸ್ಥೆ, ಉದ್ಯಮ ಸ್ಥಳಗಳಲ್ಲಿ ಧ್ವಜಾರೋಹಣ ನೆರವೇರಿಸಬೇಕು. ಈ ಹಿಂದೆ ಬ್ಯಾಂಕುಗಳು ರಾಷ್ಟ್ರೀಯ ಕಾರ್ಯಕ್ರಮಗಳನ್ನು ಆಚರಿಸುವಲ್ಲಿ ನಿರ್ಲಕ್ಷ್ಯತೋರಿವೆ. ಹೀಗಾಗಿ ಕಟ್ಟು ನಿಟ್ಟಿನ ಸೂಚನೆ ನೀಡಬೇಕುಎಂದರು.
ವಿದ್ಯಾರ್ಥಿಗಳನ್ನು ಸ್ವಾತಂತ್ರೋತ್ಸವಕಾರ್ಯಕ್ರಮದಲ್ಲಿ ಜವಾಬ್ದಾರಿಯುತವಾಗಿ ಕರೆ ತಂದು ಕಳುಹಿಸಿಕೊಡಬೇಕು. ಜಿಲ್ಲೆಯ ಸ್ವಾತಂತ್ರ್ಯ ಹೋ ರಾಟಗಾರರ ಬಗ್ಗೆಯೂ ತಿಳಿವಳಿಕೆ ಮೂಡಿಸಬೇಕು. ಧ್ವಜಸಂಹಿತೆ ಹಾಗೂ ನಿಯಮಾನುಸಾರ ಕಾರ್ಯಕ್ರಮಗಳನ್ನು ಏರ್ಪಡಿಸುವ ನಿಟ್ಟಿನಲ್ಲಿ ಎಲ್ಲರಿಗೂ ಸೂಕ್ತ ನಿರ್ದೇಶನ ನೀಡಬೇಕು. ಜಿಲ್ಲೆಯಲ್ಲಿ ಆಚರಿಸುವ ಸ್ವಾತಂತ್ರೋತ್ಸವ ಕಾರ್ಯಕ್ರಮಗಳಿಗೆ ನಮ್ಮೆಲ್ಲರ ಸಂಪೂರ್ಣ ಸಹಕಾರವಿದೆ ಎಂದು ಮುಖಂಡರು ತಿಳಿಸಿದರು.
ಇದೇ ವೇಳೆ ಜಿಲ್ಲೆರೂಪುಗೊಂಡು 25 ವರ್ಷಗಳು ತುಂಬುತ್ತಿರುವ ಹಿನ್ನೆಲೆಯಲ್ಲಿ ವಿಶೇಷವಾಗಿ ಪ್ರತ್ಯೇಕ ದಿನದಂದು ಅರ್ಥಪೂರ್ಣವಾಗಿ ಕಾರ್ಯಕ್ರಮ ಆಯೋಜನೆ ಮಾಡಬೇಕು. ಈ ನಿಟ್ಟಿನಲ್ಲಿ ಪ್ರತ್ಯೇಕವಾಗಿ ಚರ್ಚೆ ಮಾಡಬೇಕೆಂಬ ಸಲಹೆಯನ್ನು ಮುಖಂಡರು ತಿಳಿಸಿದರು.
ಎಲ್ಲಾ ಮುಖಂಡರ ಸಲಹೆ, ಅಭಿಪ್ರಾಯ ಆಲಿಸಿದ ಜಿಲ್ಲಾಧಿಕಾರಿಚಾರುಲತಾ ಸೋಮಲ್ ಅವರು ಮಾತನಾಡಿ ಎಲ್ಲರ ಅಭಿಪ್ರಾಯ ಸಲಹೆ ಅನುಸಾರ ಅದ್ದೂರಿಯಾಗಿ ಸ್ವಾತಂತ್ರ್ಯ ದಿನ ಆಚರಣೆ ಕಾರ್ಯಕ್ರಮ ಏರ್ಪಾಡು ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗುವುದು. ಈ ಬಾರಿ 75ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಆಗಸ್ಟ್ 13 ರಿಂದ 15ರವರೆಗೆ ಮೂರು ದಿನಗಳ ಕಾಲ ನಗರ, ಗ್ರಾಮೀಣ ಪ್ರದೇಶಗಳ ಮನೆಗಳು, ಸರ್ಕಾರಿ ಕಚೇರಿ, ಬ್ಯಾಂಕುಗಳು, ಶಾಲಾ ಕಾಲೇಜು, ಸಂಘ ಸಂಸ್ಥೆಗಳು ಸೇರಿದಂತೆ ವಿವಿಧೆಡೆ ಹರ್‍ಘರ್ ತಿರಂಗಾ ಅಭಿಯಾನದಡಿ ರಾಷ್ಟ್ರಧ್ವಜ ಹಾರಿಸಿ ದೇಶಾಭಿಮಾನ ಮೂಡಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ನಡೆಸಲಾಗುವುದು. ಇದಕ್ಕೆ ಎಲ್ಲರ ಸಹಕಾರ ಅಗತ್ಯವೆಂದು ತಿಳಿಸಿದರು.
ಪಥ ಸಂಚಲನ, ಇನ್ನಿತರ ರಾಷ್ಟ್ರಪ್ರೇಮ ಅಭಿವ್ಯಕ್ತಪಡಿಸುವ ಕಾರ್ಯಕ್ರಮಗಳನ್ನು ಅಚ್ಚು ಕಟ್ಟಾಗಿ ಆಯೋಜಿಸಲಾಗುವುದು. ಕಾರ್ಯಕ್ರಮದ ಸುಗಮ ನಿರ್ವಹಣೆಗೆ ಸಮಿತಿಗಳು ಇರಲಿದ್ದು ಪೂರ್ಣ ಪ್ರಮಾಣದಲ್ಲಿ ಯಶಸ್ವಿಯಾಗಿ ಎಲ್ಲವೂ ಕೈಗೊಳ್ಳಲು ನಿರ್ದೇಶನ ನೀಡಲಾಗುವುದು. ಜಿಲ್ಲೆಗೆ 25 ವರ್ಷತುಂಬುತ್ತಿರುವ ಹಿನ್ನೆಲೆಯಲ್ಲಿ ಕಾರ್ಯಕ್ರಮ ಆಯೋಜನೆ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಚರ್ಚಿಸಿ ಮುಂದಿನ ಹಂತದ ತೀರ್ಮಾನ ತೆಗೆದುಕೊಳ್ಳುವುದಾಗಿ ಜಿಲ್ಲಾಧಿಕಾರಿಯವರು ತಿಳಿಸಿದರು.