ಸಂಜೆವಾಣಿ ವಾರ್ತೆ
ಗಂಗಾವತಿ, ಅ.24: ಶರನ್ನವರಾತ್ರಿ ಅಂಗವಾಗಿ ತಾಲೂಕಿನ ಐತಿಹಾಸಿಕ ಪ್ರಸಿದ್ಧ ಹೇಮಗುಡ್ಡದ ಶ್ರೀ ದುರ್ಗಾಪರಮೇಶ್ವರಿ ದೇವಿಯ ಮೂರ್ತಿಯನ್ನು ಆನೆ ಮೇಲೆ ಅಂಬಾರಿ ಜಂಬೂ ಸವಾರಿ ಅದ್ದೂರಿಯಾಗಿ ನಡೆಯಿತು.
ಮಾಜಿ ಸಂಸದರಾದ ಹೆಚ್.ಜಿ ರಾಮುಲು ಹಾಗೂ ಕುಟುಂಬವರ್ಗದವರು ಒಂಬತ್ತು ದಿನಗಳ ಕಾಲ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮ ಕೈಗೊಳ್ಳುವ ಮೂಲಕ ಪೂಜಾ ಕಾರ್ಯವನ್ನು ನೆರವೇರಿಸಿದರು. ಕೊನೆಯದಿನದಂದು ಶ್ರೀ ದುರ್ಗಾ ಪರಮೇಶ್ವರಿ ದೇವಿ ಮೂರ್ತಿಯನ್ನು ಆನೆ ಮೇಲೆ ಅಂಬಾರಿ ಮೆರವಣಿಗೆ ಅದ್ದೂರಿಯಾಗಿ ಚಾಲನೆ ನೀಡಿದರು. ನಂತರ ಸಂಸದ ಕರಡಿ ಸಂಗಣ್ಣ ಮಾತನಾಡಿ ಪ್ರತಿ ವರ್ಷ ಹೆಮಗುಡ್ಡದ ಶ್ರೀ ದುರ್ಗಾಪರಮೇಶ್ವರಿ ದೇವಿ ದಸರಾ ಉತ್ಸವ ಅದ್ದೂರಿಯಾಗಿ ನಡೆಯುತ್ತಿದೆ. ಮೈಸೂರಿನಲ್ಲಿ ನಡೆಯುವ ದಸರಾ ಮೆರವಣಿಗೆ ತರನೇ ಕೊಪ್ಪಳ ಜಿಲ್ಲೆಯ ಹೇಮಗುಡ್ಡದಲ್ಲಿ ಆನೆ ಮೇಲೆ ಅಂಬಾರಿ ಮೆರವಣಿಗೆ ನಡೆಯುತ್ತಿರುವುದು ಈ ಭಾಗದ ಜನರ ಪುಣ್ಯವಾಗಿದೆ. ಆ ದೇವಿಯ ಸಕಲ ಭಕ್ತರ ಕಷ್ಟವನ್ನು ಪರಿಹರಿಸಿ ಮಳೆ ಬೆಳೆ ನೀಡಿ ಆರ್ಶಿವಾದಿಸಲಿ ಎಂದರು. ಇದಕ್ಕೂ ಮೊದಲು ದೇವಿ ಸನ್ನಿದಾನದಲ್ಲಿ ಉಚಿತ ಸಾಮೂಹಿಕ ವಿವಾಹಗಳು ಜರುಗಿದವು.
ಈ ವೇಳೆ ಮಾಜಿ ವಿಧಾನ ಪರಿಷತ್ ಸದಸ್ಯ ಹೆಚ್.ಆರ್ ಶ್ರೀನಾಥ, ಕರಿಣ್ಣ ಸಂಗಡಿ, ಸಿದ್ದಪ್ಪ ನೀರಲೂಟಿ, ಜೋಗದ ಹನುಮಂತಪ್ಪ ನಾಯಕ, ಸೇರಿದಂತೆ ಅನೇಕರು ಸಾವಿರಾರು ಭಕ್ತರ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.