ಗಬ್ಬೂರು,ಮಾ.೨೮- ಕಲ್ಪತರು ನಾಡಿನ ಪ್ರಸಿದ್ಧ ಧಾರ್ಮಿಕ ಹಾಗೂ ಲಿಂಗಸೂಗುರು ತಾಲೂಕಿನ ನಾಡಿನ ನೀರಲಕೇರಿ ಸುಕ್ಷೇತ್ರದಲ್ಲಿ ಷ.ಬ್ರ. ವೈರಾಗ್ಯಚಕ್ರವರ್ತಿ ದೇಶಿಕೇಂದ್ರ ಬಸವಲಿಂಗ ಶಿವಯೋಗಿಯವರ ಮಹಾ ರಥೋತ್ಸವವು ಸೋಮವಾರ ಚೆನ್ನಯ್ಯ ತಾತ ಹೇಮನೂರು ಅವರ ನೇತ್ರತ್ವದಲ್ಲಿ ನೂರಾರು ಭಕ್ತರ ಸಮ್ಮುಖದಲ್ಲಿ ಅತ್ಯಂತ ವೈಭವದಿಂದ ನೆರವೇರಿತು.
ಬಸವಲಿಂಗ ಶಿವಯೋಗಿಯವರ ರಥವನ್ನು ವಿವಿಧ ರೀತಿಯ ಆಕರ್ಷಕ ಹೂವುಗಳು,ಬಾಳೆಕಂದು,ಮಾವಿನ ತೋರಣ,ಬಣ್ಣ ಬಣ್ಣದ ವಸ್ತ್ರ,ಬಾವುಟಗಳಿಂದ ಶೃಂಗರಿಸಿ ಕ್ಷೇತ್ರಾಧಿಪತಿಯವರಾದ ಬಸವಲಿಂಗ ಶಿವಯೋಗಿಯವರ ಮೂರ್ತಿಯನ್ನು ಚೆನ್ನಯ್ಯ ತಾತ ನೇತೃತ್ವದಲ್ಲಿ ರಥದಲ್ಲಿ ಕುಳ್ಳಿರಿಸಿ ವಿಶೇಷ ಪೂಜಾ ವಿಧಿವಿಧಾನಗಳು ಮುಗಿದ ನಂತರ ನೆರೆದಿದ್ದ ಭಕ್ತ ಸಮೂಹ ರಥವನ್ನು ಎಳೆದರು.
ಹರಿಕೆ ಹೊತ್ತ ಭಕ್ತ ಸಮೂಹ ಜಾತ್ರೆಯಲ್ಲಿ ಪಾಲ್ಗೊಂಡು ಹೂವು,ದವನಪತ್ರೆ- ಬಾಳೆಹಣ್ಣು ಸೇರಿಸಿ ಭಕ್ತಿಯಿಂದ ರಥಕ್ಕೆ ಎಸೆಯುವ ಮ?ಲಕ ತಮ್ಮ ಇಷ್ಟಾರ್ಥ ಈಡೇರುವಂತೆ ಪ್ರಾರ್ಥಿಸಿದರು.ರಥೋತ್ಸವ ನಂತರ ಚೆನ್ನಯ್ಯ ತಾತ ಹೇಮನೂರು ಅವರು ಸಂಜೆವಾಣಿ ಪತ್ರಿಕೆಯೊಂದಿಗೆ ಮಾತನಾಡಿ ಬಸವಲಿಂಗ ಶಿವಯೋಗಿಯವರ ಕೃಪೆ ಹಾಗೂ ಹಿರಿಯ ಗುರುಗಳ ತಪೋಶಕ್ತಿಯಿಂದ ಮುಂದಿನ ದಿನಮಾನಗಳಲ್ಲಿ ನಾಡಿಗೆ ಉತ್ತಮ ಮಳೆ ಬೆಳೆಯಾಗಲಿದೆ.ಜಾತ್ರೆಗಳಿಂದ ಜನರು ದೇವರಲ್ಲಿ ಹೆಚ್ಚು ಭಕ್ತಿ ಇಟ್ಟುಕೊಳ್ಳುವ ಮೂಲಕ ಧಾರ್ಮಿಕ ಭಾವನೆ ಮೂಡಲಿವೆ.
ಜಾತ್ರೆ ಸಮಯದಲ್ಲಿ ಒಂದಡೆ ಸೇರುವ ಮೂಲಕ ಸಂಬಂಧ ಹೆಚ್ಚು ಗಟ್ಟಿಗೊಳ್ಳುತ್ತವೆ.ಎಲ್ಲರೂ ದೇವರು, ಗುರುಹಿರಿಯರಲ್ಲಿ ಹೆಚ್ಚು ನಂಬಿಕೆ,ಮಾರ್ಗದರ್ಶನ,ತತ್ವಾದರ್ಶ ಅಳವಡಿಸಿಕೊಂಡು ಜೀವನದಲ್ಲಿ ಸ್ವಾಭಿಮಾನಿ-ಸಾಮರಸ್ಯದ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಿದ್ದು ಈ ದಿಕ್ಕಿನಲ್ಲಿ ಭಕ್ತಿ ಕೋಟಿ ಸಾಗಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಪ್ರಥಮ ದರ್ಜೆ ಗುತ್ತಿಗೆದಾರರಾದ ಕರಿಯಪ್ಪ ವಜ್ಜಲ್ ಲಿಂಗಸೂಗುರು,ಶಿವಮ್ಮ ಗಂಡ ಅಮರಪ್ಪ( ರಾಯಚೂರು) ನೀರಲಕೇರಿ, ಗುರನಾಥ ರಡ್ಡಿ ಅರ್ಚಕರು, ಬಸನಗೌಡ ಹೇಮನೂರು, ಸಿ.ಆರ್.ನಾಯಕ ಹೇಮನೂರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.