ಅದ್ದೂರಿಯಾಗಿ ಜರುಗಿದ “ಊರಮ್ಮದೇವಿ ಜಾತ್ರೆ”


ಸಂಜೆವಾಣಿ ವಾರ್ತೆ
ಹೊಸಪೇಟೆ ಏ3: ಹೊಸಪೇಟೆಯ 34ನೇ ವಾರ್ಡ್‍ನಲ್ಲಿರುವ ಹೊಸಪೇಟೆಯ ಶ್ರೀ ಗ್ರಾಮ ದೇವತೆ ಊರಮ್ಮ ದೇವಿ ಜಾತ್ರಾ ಮಹೋತ್ಸವದ ಪ್ರಯುಕ್ತ ಮಂಗಳವಾರ ಸಂಜೆ ವಿವಿಧ ಕಲಾ ತಂಡಗಳೊಂದಿಗೆ ಅದ್ದೂರಿಯಾಗಿ  ಗ್ರಾಮದೇವತೆ  ಊರಮ್ಮ ದೇವಿಯ  ಜಾತ್ರೆ ಜರುಗಿತು.
ಪ್ರತೀ ಐದು ವರ್ಷಕ್ಕೊಮ್ಮೆ ನಡೆಯುವ ಜಾತ್ರೆ ಅಂಗವಾಗಿ ಜಂಬೂನಾಥ ರಸ್ತೆಯ ದೇವಿಯ ಬಾವಿಯಿಂದ ಆರಂಭಗೊಂಡ ಶೋಭಾ ಯಾತ್ರೆ ಮೇನ್ ಬಜಾರ್, ಪಾದಗಟ್ಟಿ ಆಂಜನೇಯ ದೇವಸ್ಥಾನ, ಹಳೇ ಬಸ್ ನಿಲ್ದಾಣ,  ರಾಮಾ ಟಾಕೀಸ್, ವಾಲ್ಮೀಕಿ ಸರ್ಕಲ್ ಮಾರ್ಗವಾಗಿ ಏಳುಕೇರಿಗಳು ಸೇರಿದಂತೆ ಬಹತೇಕ ಹಳೇ ಗ್ರಾಮದಲ್ಲಿ  ಸುತ್ತಿತು ಮೆರವಣಿಗೆ ರಾತ್ರಿ 11 ಗಂಟೆ ವರೆಗೆ ನಡೆಯಿತು.
ಡೊಳ್ಳು ಕುಣಿತ, ತಾಸೆ, ವೀರಗಾಸೆ, ಗಾರುಡಿ, ಶ್ರೀಕೃಷ್ಣ ಗಾರುಡಿ, ಭಜನೆ, ಶಂಖವಾದ್ಯ, ನಂದಿಕೋಲು, ಜಗ್ಗಲಗಿ ಸೇರಿದಂತೆ 48 ಕಲಾ ತಂಡಗಳು ಊರಮ್ಮ ದೇವಿ ಉತ್ಸವ ಮೂರ್ತಿಯ ಶೋಭಾ ಯಾತ್ರೆಗೆ ಮೆರಗು ನೀಡಿದವು.
ಶಾಸಕ ಹೆಚ್.ಆರ್.ಗವಿಯಪ್ಪ, ಯುವ ಮೋರ್ಚಾ ಬಿಜೆಪಿ ರಾಜ್ಯ ಖಜಾಂಚಿ ಸಿದ್ಧಾರ್ಥ ಸಿಂಗ್, ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಚ್.ಎನ್,ಎಫ್.ಮೊಹಮ್ಮದ್ ಇಮಾಮ್ ನಿಯಾಜಿ, ಕಾಂಗ್ರೆಸ್ ಯುವ ಮುಖಂಡ ಎಚ್.ಜಿ.ವಿರೂಪಾಕ್ಷಿ ಸೇರಿದಂತೆ ಸ್ಥಳೀಯ ಮುಖಂಡರು ಹಾಗೂ ನೂರಾರು ಮಹಿಳೆಯರು ಪೂರ್ಣಕುಂಭದೊಂದಿಗೆ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಶೋಭಾ ಯಾತ್ರೆ ದೇವಸ್ಥಾನಕ್ಕೆ ಮರಳುವ ವೇಳೆಗೆ ದೇವಿಯ ನೂತನ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಮಾಡಲಾಯಿತು. ಈ ಹಿನ್ನೆಲೆಯಲ್ಲಿ ಮಂಗಳವಾರ ಮಧ್ಯಾಹ್ನದ ಬಳಿಕ ದೇವಿಯ ದರ್ಶನವನ್ನು ಸ್ಥಗಿತಗೊಳಿಸಲಾಗಿತ್ತು. ಬುಧವಾರ ಬೆಳಗ್ಗೆಯಿಂದ ಮತ್ತೆ ದೇವಿಯ ದರ್ಶನ ಆರಂಭಗೊಳ್ಳಲಿದೆ ಎಂದು ದೇವಸ್ಥಾನದ ಮೂಲಗಳು ತಿಳಿಸಿವೆ.
ಸಾಲುಗಟ್ಟಿದ ಭಕ್ತರು:
ಊರಮ್ಮ ದೇವಿ ಜಾತ್ರೆ ನಿಮಿತ್ತ ದೇವಿಯ ಉತ್ಸವ ಮೂರ್ತಿ ಹಾಗೂ ಸನ್ನಿಧಾನದಲ್ಲಿರುವ ದೇವರ ಮೂರ್ತಿಗೆ ತರಹೇವಾರಿ ಪುಷ್ಪಗಳಿಂದ ಅಲಂಕರಿಸಲಾಗಿತ್ತು. ಮಂಗಳವಾರ ಬೆಳಗ್ಗೆಯಿಂದಲೇ ವಿಶೇಷ ಪೂಜೆ, ಪುನಸ್ಕಾರಗಳನ್ನು ನೆರವೇರಿಸಲಾಯಿತು.
ತಾಯಿಯ ದರ್ಶನಕ್ಕಾಗಿ ಬೆಳಗ್ಗೆ 5 ಗಂಟೆಯಿಂದಲೇ ಭಕ್ತರು ಸಾಲು ಗಟ್ಟಿದ್ದರು. ದೇವಸ್ಥಾನದಿಂದ ಚಿತ್ರಕೇರಿ ಕ್ರಾಸ್ ವರೆಗೆ ಸಾವಿರಾರು ಜನರು ಸರದಿ, ಸಾಲಿನಲ್ಲಿ ನಿಂತು ದರ್ಶನ ಪಡೆದು, ಪುನೀತರಾದರು. ಶಾಸಕ ಎಚ್.ಆರ್.ಗವಿಯಪ್ಪ, ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಸೇರಿದಂತೆ ಪೊಲೀಸ ಅಧಿಕಾರಿಗಳು, ಅಸಂಖ್ಯಾತ ಭಕ್ತರು ದೇವರ ದರ್ಶನ ಪಡೆದು, ಧನ್ಯತೆ ಮೆರೆದರು.