ಅದ್ದೂರಿಯಾಗಿ ಜರುಗಿದ ಆಂಜಿನೆಯ್ಯ ಜಾತ್ರಾ ಮಹೋತ್ಸವ

ಸಿರವಾರ ಸೆ೧೨: ಪಟ್ಟಣದ ವಾರ್ಡ ನಂ ೧೧ರ ಮುಚ್ಚಳಗುಡ್ಡ ಕ್ಯಾಂಪ್‌ನ ಮಾಶಂ ಮರಡಿ ಆಂಜಿನೆಯ್ಯ ಸ್ವಾಮಿಯ ೯ನೇ ವರ್ಷದ ಜಾತ್ರಾ ಮಹೋತ್ಸವವು ಇತ್ತೀಚೆಗೆ ಅದ್ದೂರಿಯಾಗಿ ಜರುಗಿತು.
ಲಿಂಗೈಕ್ಯ ಸೋಮಶೇಖರ ಶಿವಾಚಾರ್ಯ ಮಹಾಸ್ವಾಮಿಗಳ ಕೃಪೆಯಿಂದ, ಅಭಿನವ ಸೋಮನಾಥ ಶಿವಾಚಾರ್ಯರು ನವಲಕಲ್ ಇವರ ಮಾರ್ಗದರ್ಶನದಲ್ಲಿ ಶರಣಯ್ಯ ತಾತನವರ ಸಾನಿಧ್ಯ ಹಾಗೂ ಗಂಗಾಧರ ತಾತನವರು ನವಲಕಲ್ ಇವರುಗಳ ನೇತೃತ್ವದಲ್ಲಿ ಶನಿವಾರ ಅದ್ದೂರಿಯಾಗಿ ಜರುಗಿತು.
ಬೆಳಿಗ್ಗೆಯಿಂದಲೇ ದೇವರಿಗೆ ಮಹಾ ರುದ್ರಾಭಿಷೇಕ ಎಲೆ ಪೂಜೆ, ಕಳಸಾರೋಹಣ ಮತ್ತು ವಿಶೇಷ ಪೂಜಾ ಕೈಂಕರ್ಯಗಳು ನಡೆದವು. ಭಕ್ತರು ದೀಡ್ ನಮಸ್ಕಾರ ಹಾಕುವ ಮೂಲಕ ತಮ್ಮ ಹರಕೆ ತಿರಿಸಿದರು. ಡೊಳ್ಳು ಕುಣಿತ ಸೇರಿದಂತೆ ವಿವಿಧ ವಾದ್ಯ ವಾದನಾದಗಳು ಜಾತ್ರಾ ಮಹೋತ್ಸವ ಸಂಭ್ರಮ ಇಮ್ಮಡಿಗೊಳಿಸಿತು.
ಶ್ರಾವಣ ಮಾಸದ ದಿನಗಳಲ್ಲಿ ನಡೆಯುವ ಈ ಜಾತ್ರೆಗೆ ಪಟ್ಟಣ ಹಾಗೂ ಸುತ್ತಮುತ್ತಲಿನ ಹಳ್ಳಿಗಳಿಂದ ಸಾವಿರಾರು ಜನರು ಸೇರಿದ್ದರು. ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಸ್ವಸ್ಥಳದಿಂದ ಪಾದಕಟ್ಟೆವರೆಗೆ ರಥೋತ್ಸವ ಎಳೆಯುವ ಮುಖಾಂತರ ಭಕ್ತರು ವಿಜೃಂಭಣೆಯಿಂದ ಜಾತ್ರೆಯನ್ನು ಆಚರಿಸಿದರು.
ಜಾತ್ರೆಗೆ ಆಗಮಿಸಿದ ಭಕ್ತಾದಿಗಳಿಗೆ ಪ್ರಸಾದದ ವ್ಯವಸ್ಥೆಯನ್ನು ಮಾಡಲಾಗಿತ್ತು.
ಈ ಸಂದರ್ಭದಲ್ಲಿ ವಾರ್ಡ್ ನ ಮುಖಂಡರು, ಪ.ಪಂ ಸದಸ್ಯರು, ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಭಕ್ತಾದಿಗಳು ಭಾಗವಹಿಸಿದ್ದರು.