ಅದ್ದೂರಿಯಾಗಿ ಆರಂಭಗೊಂಡ ರೈತರ ಜಾತ್ರೆ

ಧಾರವಾಡ,ಸೆ18: ರೈತರಿಗೆ ವಿಜ್ಞಾನ ತಂತ್ರಜ್ಞಾನ ಕುರಿತು ಮಾಹಿತಿ ನೀಡುವ ಜಾತ್ರೆ ಕೃಷಿ ಮೇಳ. ಕಳೆದ ಎರಡು ವರ್ಷಗಳಿಂದ ಕೊರೋನ ಕಾರಣಕ್ಕಾಗಿ ನಡೆದಿರಲಿಲ್ಲ ಆದರೇ ಈ ಭಾರಿ ಅದ್ಧೂರಿಯಾಗಿ ರೈತರ ಜಾತ್ರೆ ಆರಂಭವಾಗಿದೆ.
ಬೀಜ ಮೇಳ ಉದ್ಘಾಟನೆಯೊಂದಿಗೆ ಕೃಷಿ ಮೇಳಕ್ಕೆ ಚಾಲನೆ ದೊರೆತಿದ್ದು ನಾಡಿನ ಹಾಗೂ ರಾಷ್ಟ್ರದ ಮೂಲೆಯಿಂದ ರೈತರು ಅಧಿಕ ಸಂಖ್ಯೆಯಲ್ಲಿ ರೈತರ ಜಾತ್ರೆಯಲ್ಲಿ ಭಾಗವಹಿಸಿ ಗಮನ ಸೆಳೆಯುತ್ತಿದ್ದಾರೆ.
ನಾಲ್ಕು ದಿನಗಳ ಕಾಲ ನಡೆಯುವ ಧಾರವಾಡ ಕೃಷಿ ಮೇಳದಲ್ಲಿ ಶನಿವಾರ ಬೀಜ ಮೇಳಕ್ಕೆ ಚಾಲನೆ ನೀಡಿದ ರಾಜ್ಯ ಕೃಷಿ ಸಮಾಜದ ಅಧ್ಯಕ್ಷ ಡಾ. ಶಿವನಗೌಡ ಪಾಟೀಲ ಅವರು, ರೈತರು ಬಿತ್ತನೆ ಬೀಜಕ್ಕೆ ಕೈಯೊಡ್ಡದೇ, ಸ್ವತಃ ಬೀಜೋತ್ಪಾದನೆ ಮಾಡಬೇಕು. ಇಂತಹ ಬೀಜಗಳಿಂದ ಮಾತ್ರವೇ ಉತ್ಪಾದನೆ ನಿರೀಕ್ಷಿಸಲು ಸಾಧ್ಯ ಎಂದು ತಿಳಿಸಿದರು.
ಧಾರವಾಡ ಕೃಷಿ ಮೇಳದ ಫಲ-ಪುಷ್ಪ ಪ್ರದರ್ಶನ ಜನರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ. ಬಿಡಿ ಹೂಗಳು, ಹಣ್ಣು-ತರಕಾರಿಗಳು, ಬೊನ್ಸಾಯ್ ಗಿಡ, ಹೂವು ಜೋಡಣೆ, ಉದ್ಯಾನ ಹೂಗಳು, ಕೆತ್ತನೆ ಹೂಗಳು, ಒಣ ಹೂವುಗಳು, ಹೂ ರಂಗೋಲಿಗಳು ಜನರ ಮೆಚ್ಚುಗೆಗೆ ಪಾತ್ರವಾದವು. ಹೂವು, ತರಕಾರಿಗಳಿಂದ ಮಾಡಿದ ವಿವಿಧ ಅಲಂಕಾರಿಕ ವಸ್ತುಗಳು ಜನರ ಮನ ಗೆದ್ದವು.
ಹೂಗುಚ್ಚ ತಯಾರಿಸುವ ವಿವಿಧ ತರಹದ ಸಸ್ಯಗಳು, ಹೂಗಳು, ವಿವಿಧ ಒಣಗಿದ ಹೂ ಜೋಡನೆ, ಉದ್ಯಾನ ಹೂಗಳಾದ ಬೋಗನ್ ವಿಲ್ಲೆ, ದಾಲಿಯಾ, ದಾಸವಾಳ, ರುದ್ರಾಕ್ಷಿ ಹೂ, ಪೆಟೋನಿಯಾ, ಫಸ್ಟ್ ರೇಡ್, ಆಫ್ರಿಕನ್ ಡಾನ್, ಜನರಿಗೆ ನಯನ ಮನೋಹರ ದೃಶ್ಯ ನೀಡಿದವು.
ಔಷಧಿ ಸಸ್ಯಗಳಾದ ಹಿಪ್ಪಲಿ, ಪಚಾಲಿ, ಸರ್ಪಗಂಧ, ಮದರಂಗಿ, ಅಶ್ವಗಂಧ, ನಾಗರಾಳ, ಗಳಂಗ, ಮಧುನಾಶಿನಿ, ಬಾಸ್ಮತಿ ಎಲೆ, ಒಂದಲಿಗ, ಜಲಬ್ರಾಹ್ಮಿ, ಅನೇಕ ಗಿಡಮೂಲಿಕೆ ಪ್ರದರ್ಶನದಲ್ಲಿ ಗಮನ ಸೆಳೆದರೂ, ಜನರಿಗೆ ಸಮರ್ಪಕ ಮಾಹಿತಿ ನೀಡುವ ಕೊರತೆ ಕಂಡು ಬಂತು.
ಕೃಷಿ ಮೇಳದಲ್ಲಿ ಗಡ್ಡಿ-ಗೆಣಸು ಮೇಳ ಗಮನ ಸೆಳೆಯಿತು. ಬೇಕರಿ ಉತ್ಪನ್ನಗಳಲ್ಲಿ ಮೈದಾ ಬದಲಿಗೆ ಗೆಣಸಿನಿಂದ ಉತ್ಪಾದಿಸಿದ ಸ್ಟಾರ್ಚ್ ಬಳಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಗೆಣಸಿಗೆ ಮಹತ್ವ ಬಂದಿದ್ದರೆ, ಯಾವುದೇ ರಾಸಾಯನಿಕ ಗೊಬ್ಬರ ಹಾಗೂ ಕೀಟನಾಶಕ ಬಳಕೆಯಿಲ್ಲದೇ ಗಡ್ಡೆ-ಗೆಣಸುಗಳನ್ನು ಬೆಳೆಯುವುದರಿಂದ ಅವುಗಳ ಮಹತ್ವ ಹೆಚ್ಚಾಗಿದೆ.
ಮೇಳದಲ್ಲಿ ಪ್ರತಿಭಾ ಅರಿಶಿಣ, ಶುಂಠಿ, ಸುವರ್ಣಗಡ್ಡೆ, ಮರಗೆಣಸು, ನೊರೆಗೆಣಸು, ಕೆಸವು, ಹಸಿಗೆಣಸು ಸೇರಿದಂತೆ ವಿವಿಧ ಗಡ್ಡೆಗಳನ್ನು ಪ್ರದರ್ಶಿಸಲಾಗುತ್ತಿದೆ. ವಿಶೇಷವಾಗಿ ಮಹಿಳೆಯರು ಗಡ್ಡೆ-ಗೆಣಸುಗಳ ಬಗ್ಗೆ ಆಸಕ್ತಿಯಿಂದ ಮಾಹಿತಿ ಪಡೆಯುತ್ತಿದ್ದುದು ಕಂಡು ಬಂತು.