
ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಆ 1 :- ತಾಲೂಕಿನ ಅತೀ ದೊಡ್ಡ ಗ್ರಾಮಪಂಚಾಯಿತಿಯಾಗಿರುವ ಕಾನಹೊಸಹಳ್ಳಿ ಗ್ರಾಮಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷರ ಎರಡನೇ ಅವಧಿಯ ಆಯ್ಕೆ ಚುನಾವಣೆ ತೀವ್ರ ಕುತೂಹಲ ಮೂಡಿಸಿತ್ತು ಅದರಂತೆ ಅಧ್ಯಕ್ಷ ಗಾದಿಗೆ ಇಬ್ಬರು ಸ್ಪರ್ಧೆ ಮಾಡಿದ್ದರೂ ಸಮಬಲದ ಮತ ಚಲಾವಣೆಯಲ್ಲಿ ಕೊನೆಗೆ ಲಾಟರಿ ಎಂಬ ಅಧೃಷ್ಠ ಚೇತನ್ ಪಾಲಿಗೆ ಗೆಲುವಿನ ನಗೆ ಬೀರಿಸಿತು ಅಲ್ಲದೆ ಉಪಾಧ್ಯಕ್ಷ ಸ್ಥಾನಕ್ಕೆ ಸಹ ಚುನಾವಣೆ ನಡೆಸಲಾಗಿ ಎರಡು ಮತಗಳ ಅಂತರದಲ್ಲಿ ನೇತ್ರಾವತಿ ಪಾಲಿಗೆ ಉಪಾಧ್ಯಕ್ಷ ಸ್ಥಾನ ಲಭಿಸಿದ ಕುತೂಹಲಕಾರಿ ಚುನಾವಣೆ ಜರುಗಿತು.
ಸೋಮವಾರ ಹೊಸಹಳ್ಳಿಲಿ ನಡೆದ ಎರಡನೇ ಹಂತದ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ ಪ್ರಕ್ರಿಯೆಯಲ್ಲಿ ಸಾಮಾನ್ಯ ಸ್ಥಾನಕ್ಕೆ ಮೀಸಲಿದ್ದ ಅಧ್ಯಕ್ಷ ಸ್ಥಾನಕ್ಕೆ ಎ.ಸಿ.ಚೇತನ್ ಹಾಗೂ ಕೆ.ಜಿ.ಸಿದ್ದನಗೌಡ ಇಬ್ಬರು ನಾಮಪತ್ರ ಸಲ್ಲಿಸಿದ್ದರು, 30 ಸದಸ್ಯರ ಬಲಬಲಾಗಳ ನಡುವೆ ತಲಾ 15 ಮತಗಳನ್ನು ಪಡೆದು ಸ್ಪಷ್ಟ ಬಹುಮತ ಸಿಗದ ಹಿನ್ನಲ್ಲೆಯಲ್ಲಿ ಲಾಟರಿ ಎತ್ತುವ ಮೂಲಕ ಎ.ಸಿ.ಚೇತನ್ ಅವರು ಆಯ್ಕೆಯಾದರು. ಎಸ್ಸಿ ಮಹಿಳೆಗೆ ಮೀಸಲಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ನೇತ್ರಾವತಿ ಹಾಗೂ ಲಕ್ಷ್ಮಿ ನಾಮಪತ್ರ ಸಲ್ಲಿಸಿದ್ದರು, ಸಿದ್ದನಗೌಡ ಬಣದ ನೇತ್ರಾವತಿ 16 ಮತ ಪಡೆದು ಜಯಗಳಿಸಿದರೆ, ಎ.ಸಿ.ಚೇತನ್ ಅವರ ಬಣದ ಲಕ್ಷ್ಮಿ 14 ಮತಗಳನ್ನು ಪಡೆದರು.
ಚುನಾವಣಾಧಿಕಾರಿಯಾಗಿ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ವೈ.ರವಿಕುಮಾರ್, ಸಹಾಯಕಾಧಿಕಾರಿಗಳಾಗಿ ತಾಲ್ಲೂಕು ಪಂಚಾಯ್ತಿ ವ್ಯವಸ್ಥಾಪಕ ವೈ.ಎಸ್.ಆಶ್ವತ್ ಕುಮಾರ್, ವೆಂಕಟೇಶ್ ನಿರ್ವಹಿಸಿದರು. ಪಿಡಿಒ ಬಿ.ಬಸಮ್ಮ, ಸಿಬ್ಬಂದಿ ಕೆ.ಜಿ.ನಾಗರಾಜ್, ಅನಿಲ್ ಕುಮಾರ್, ಶಶಿ ಕುಮಾರ್ ಇದ್ದರು.
ಅಧ್ಯಕ್ಷ ಸ್ಥಾನವು ತೀವ್ರ ಪೈಪೋಟಿಯಲ್ಲಿ ನಡೆಯುವ ಹಿನ್ನೆಲೆಯಲ್ಲಿ ಅರಿತ ಪೊಲೀಸರು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತೆಯಾಗಿ ಓರ್ವ ಡಿವೈಎಸ್ಪಿ, ಸಿಪಿಐ, ಮೂವರು ಪಿಎಸ್ಐ ಸೇರಿ ಮೂವತ್ತಕ್ಕೂ ಹೆಚ್ಚು ಸಿಬ್ಬಂದಿ ನಿಯೋಜನೆ ನಡುವೆ ಸೂಕ್ತ ಬಂದೋಬಸ್ತ್ ಮಾಡಲಾಗಿತ್ತು.