ಅದಾನಿ ವಿವಾದ:ತನಿಖೆಗೆ ಸಮಿತಿ ರಚಿಸಿದ ಸುಪ್ರೀಂ

ನವದೆಹಲಿ,ಮಾ.೨- ಹಿಂಡೇನ್ ಬರ್ಗ್ ಸಂಶೋಧನಾ ವರದಿಯಿಂದ ಉಂಟಾಗಿರುವ ವಿವಾದ ಕುರಿತಂತೆ ಅದಾನಿ ಸಮೂಹಗಳ ಷೇರು ಪರಿಶೀಲಿಸಲು ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಅಭಯ್ ಮನೋಹರ್ ಸಪ್ರೆ ನೇತೃತ್ವದಲ್ಲಿ ಸಮಿತಿ ನೇಮಕ ಮಾಡಿದೆ.
ಈ ಸಮಿತಿಯಲ್ಲಿ ಬ್ಯಾಂಕಿಂಗ್ ಕ್ಷೇತ್ರದ ತಜ್ಞ ಕೆ.ವಿ ಕಾಮತ್, ಒ.ಪಿ ಬಟ್, ಇನ್ಪೋಸೀಸ್ ಸಹ ಸಂಸ್ಥಾಪಕ ಅಂದನ್, ನಿಲೇಕಣಿ, ಮತ್ತು ನಿವೃತ್ತ ನ್ಯಾಯಮೂರ್ತಿ ಜೆ.ಪಿ ದೇವಧರ್ ಸದಸ್ಯರಾಗಿರುತ್ತಾರೆ ಎಂದು ತಿಳಿಸಿದೆ.
ಅದಾನಿ ಸಮೂಹ ಸಂಸ್ಥೆಯ ಪಾತ್ರದ ಬಗ್ಗೆ ಈ ಸಮಿತಿ ತನಿಖೆ ನಡೆಸಲಿದೆ. ಷೇರುದಾರರ ಹಿತಾಸಕ್ತಿ ಕಾಪಾಡಲು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಈ ಸಮಿತಿ ವರದಿ ನೀಡಲಿದೆ. ಪ್ರಕರಣದಲ್ಲಿ ಹೂಡಿಕೆದಾರರನ್ನು ರಕ್ಷಿಸಿಸುವಂತೆ ಕೋರಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರಿಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ಅವರಿದ್ದ ನ್ಯಾಯಪೀಠ ಮಾರುಕಟ್ಟೆ ನಿಯಂತ್ರಕ ಸಬಿ ನಡೆಸುತ್ತಿರುವ ತನಿಖೆಯನ್ನು ೨ ತಿಂಗಳಲ್ಲಿ ಪೂರ್ಣಗೊಳಿಸಿ ವರದಿ ನೀಡುವಂತೆ ನಿರ್ದೇಶಿಸಿತು. ನಿಯಮಗಳ ಉಲ್ಲಂಘನೆಯಾಗಿದೆ ಎಂಬ ಕುರಿತಾಗಿಯೂ ಸಮಗ್ರ ತನಿಖೆ ಆಗುವಂತೆ ಸಬಿಗೆ ಸುಪ್ರೀಂಕೋರ್ಟ್ ಸೂಚಿಸಿದೆ.
ಹಿಂಡೆನ್ ಬರ್ಗ್ ಸಂಶೋಧನಾ ವರದಿ ಬಹಿರಂಗಗೊಂಡ ನಂತರ ಅದಾನಿ ಸಮೂಹದ ಷೇರುಗಳ ದರ ಗಣನೀಯವಾಗಿ ಕುಸಿದಿತ್ತು. ಈ ವಿಷಯ ಸಂಸತ್ತಿನ ಉಭಯ ಸದನಗಳಲ್ಲೂ ಭಾರಿ ಕೋಲಾಹಲ ಸೃಷ್ಟಿಸಿತ್ತು. ಈಗ ಸುಪ್ರೀಂಕೋರ್ಟ್ ಸಮಗ್ರ ತನಿಖೆಗಾಗಿ ಸಮಿತಿ ರಚಿಸಿದೆ.