
ಆರಂಭದಿಂದಲೂ ಒಂದಲ್ಲಾ ಒಂದು ಕಾರಣಕ್ಕೆ ಕುತೂಹಲ ಮೂಡಿಸಿರುವ ʻಅಥಿʼ ಚಿತ್ರೀಕರಣ ಮುಕ್ತಾಯದ ಹಂತದಲ್ಲಿದೆ.
ಎಲ್ಲಾ ಅಂದುಕೊಂಡಂತೆ ಆದರೆ ಚಿತ್ರ ಮುಂದಿನ ತಿಂಗಳು ಮೊದಲ ವಾರ ತೆರೆಗೆ ಬರಲು ಸಜ್ಜಾಗಿದೆ. ಈ ಹಿನ್ನೆಯಲ್ಲಿ ನಟ ಲೋಕೋಂದ್ರ ಸೂರ್ಯ ಮತ್ತು ಸಾತ್ವಿಕ ಅವರ ರೋಮಾಂಟಿಕ್ ಪೋಟೋ ಶೂಟ್ ಮಾಡುವ ಮೂಲಕ ತಂಡ ಗಮನ ಸೆಳೆದಿದೆ.
ರೆಡ್ ಅಂಡ್ ವೈಟ್ ಸೆವನ್ ರಾಜ್ ಚಿತ್ರಕ್ಕೆ ಬಂಡವಾಳ ಹಾಕಿದ್ದು ಲೋಕೇಂದ್ರ ಸೂರ್ಯ ಆಕ್ಷನ್ ಕಟ್ ಹೇಳುವ ಜೊತೆಗೆ ನಾಯಕನಾಗಿ ಕಾಣಿಸಿಕೊಂಡಿದ್ದಾರೆ.
ಚಿತ್ರದ ಕುರಿತು ಮಾಹಿತಿ ಹಂಚಿಕೊಂಡ ಲೋಕೇಂದ್ರ ಸೂರ್ಯ, ಒಂದು ಮನೆ, ಎರಡು ಪಾತ್ರಗಳನ್ನಿಟ್ಟುಕೊಂಡು ಸಿನಿಮಾ ರೂಪಿಸುವುದು ಅಂದರೆ ಸುಲಭದ ಮಾತಲ್ಲ. ಅದೂ ಹತ್ತಕ್ಕೂ ಹೆಚ್ಚು ನಿಮಿಷಗಳ ಸಿಂಗಲ್ ಶಾಟ್ ಕಂಪೋಸ್ ಮಾಡೋದು ಕೂಡಾ ಕಷ್ಟದ ಕೆಲಸ.ಅದನ್ನು ಚಿತ್ರದಲ್ಲಿ ಮಾಡಿದ್ದೇವೆ ಎಂದಿದ್ದಾರೆ.
ಕನ್ನಡದಲ್ಲಿ ಗಂಡ-ಹೆಂಡತಿಯ ಸಂಬಂಧದ ಕುರಿತ ಸಾಕಷ್ಟು ಚಿತ್ರಗಳು ಬಂದಿವೆ. ಆದರೆ ʻʻಈ ವರೆಗೂ ಎಲ್ಲೂ, ಯಾರೂ ಹೇಳಿರದ ಹೊಸ ವಿಚಾರ ಚಿತ್ರದ ಮೂಲಕ ಹೇಳುತ್ತಿದ್ದೇವೆ.ಬೆಂಗಳೂರಿನಲ್ಲಿ ಚಿತ್ರೀಕರಣ ಪೂರ್ಣ ಮಾಡಿದ್ದೇವೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
ನಿರ್ಮಾಪಕ ಸೆವೆನ್ ರಾಜ್ ಮಾಹಿತಿನೀಡಿ, ʻಅಥಿʼ ಚಿತ್ರದ ಕ್ಯೂಟ್ ಮತ್ತು ರೊಮ್ಯಾಂಟಿಕ್ ಫೋಟೋಶೂಟ್ ಮಾಡಲಾಗಿದೆ. ʻʻಫೋಟೋಗಳು ಎಲ್ಲರನ್ನೂ ಆಕರ್ಷಿಸುವುದರ ಜೊತೆಗೆ ಸಿನಿಮಾ ಕಂಟೆಂಟ್ ಹೇಳುವಂತಿರಬೇಕು ಎನ್ನುವ ಕಾರಣಕ್ಕೆ ಚಿತ್ರೀಕರಣವೆಲ್ಲಾ ಬಹುತೇಕ ಮುಕ್ತಾಯವಾಗುವ ಈ ಹಂತದಲ್ಲಿ ಫೋಟೋ ಶೂಟ್ ಮಾಡಿದ್ದೇವೆ. ಚುನಾವಣೆ ಮುಗಿಯುತ್ತಿದ್ದಂತೇ ʻಅಥಿʼ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡುತ್ತೇವೆʼ ಎಂದು ಹೇಳಿದ್ದಾರೆ.
ನಟಿಯಾಗಿ ಗುರುತಿಸಿಕೊಂಡಿರುವ ಋತುಚೈತ್ರ ವಸ್ತ್ರವಿನ್ಯಾಸ ಮಾಡಿರುವುದು ಈ ಫೋಟೋಶೂಟ್ ವಿಶೇಷ.
ಅನಂತ್ ಆರ್ಯನ್ ಸಂಗೀತ ಚಿತ್ರಕ್ಕಿದೆ. ಎನ್. ಓಂ ಪ್ರಕಾಶ್ ರಾವ್ ಅವರ ಪುತ್ರಿ ಶ್ರಾವ್ಯಾ ರಾವ್ ಈ ಚಿತ್ರದ ಮೂಲಕ ಸಾತ್ವಿಕ ಆಗಿ ಹೆಸರು ಬದಲಾವಣೆ ಮಾಡಿಕೊಂಡಿದ್ದಾರೆ.