ಅಥಣಿ :ಮೇ.27: ಇಲ್ಲಿನ ಉಪನೋoದಣಿ ಕಚೇರಿಯಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದ್ದು, ಇಲ್ಲಿನ ಉಪ ನೋಂದಣಿ ಅಧಿಕಾರಿಗಳು ದಸ್ತು ಬರಹಗಾರರ ಮತ್ತು ಕಂಪ್ಯೂಟರ್ ಆಪರೇಟರ್ ಗಳ ಮೂಲಕ ಭ್ರಷ್ಟಾಚಾರ ನಡೆಸುತ್ತಿದ್ದು, ಹಣ ಕೊಟ್ಟರೆ ಮಾತ್ರ ಕೆಲಸ ಮಾಡ್ತಾರೆ, ಇಲ್ಲದಿದ್ದರೆ ಅನೇಕ ಕಾರಣಗಳನ್ನು ಹೇಳಿ ಜನಸಾಮಾನ್ಯರಿಗೆ ಮತ್ತು ರೈತರಿಗೆ ವಿನಾಕಾರಣ ಕಚೇರಿಗೆ ಅಲ್ಲಿದಾಡಿಸುತ್ತಿದ್ದಾರೆ ಎಂದು ರೈತ ಸಂಘದ ತಲುಕ ಅಧ್ಯಕ್ಷ ಮಹಾದೇವ ಮಡಿವಾಳ ಆರೋಪಿಸಿದರು.
ಅವರು ಅಥಣಿ ಪಟ್ಟಣದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿ ಖಿಳೇಗಾವಿ ಗ್ರಾಮದ ರೈತರ ಜಮೀನು ಖರೀದಿ ವಿಚಾರವಾಗಿ ಉಪ ನೊಂದಣಿ ಕಚೇರಿಗೆ ಆಗಮಿಸಿದರೇ ಇಲ್ಲಿನ ದಸ್ತು ಬರಹಗಾರರು ಮತ್ತು ಕಂಪ್ಯೂಟರ್ ಆಪರೇಟರಗಳು ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ಯಾವುದೇ ರಶೀತಿ ನೀಡದೆ ಮುಗ್ಧ ರೈತರಿಂದ ಮನಬಂದಂತೆ ಹಣ ಪಿಕುತಿದ್ದಾರೆ. ಒಂದು ಖರೀದಿ ಪತ್ರದ ವಿಚಾರವಾಗಿ ದಸ್ತು ಬರಹಗಾರ ತನ್ನ ಶುಲ್ಕ 3 ಸಾವಿರ ರೂ. ಮತ್ತು ಕಂಪ್ಯೂಟರ್ ಆಪರೇಟರ್ ಗೆ 2 ಸಾವಿರ ರೂ. ಮತ್ತು ಸಬ್ ರಿಜಿಸ್ಟರ್ ಮೇಡಂ ಅವರಿಗೆ 10 ಸಾವಿರ ರೂ. ಒಟ್ಟು 15,000 ರೂ. ಬೇಡಿಕೆ ಇಟ್ಟಿದ್ದಾರೆ. ದಸ್ತು ಬರಹಗಾರರ ಈ ಬಗ್ಗೆ ಪ್ರಶ್ನಿಸಿದಾಗ ರೈತರನ್ನೇ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ, ಅಲ್ಲದೆ ಹಲ್ಲೆ ಮಾಡುವ ಪ್ರಯತ್ನ ಮಾಡಿದ್ದಾರೆ. ನೀವು ಎಲ್ಲಿ ಬೇಕಾದರೂ ಹೋಗಿ, ನಮಗೆ ಸಬ್ ರಿಜಿಸ್ಟರ್ ಮೇಡಂ ಈ ರೀತಿ ಆದೇಶ ಮಾಡಿದ್ದಾರೆ. ಇಷ್ಟು ಹಣ ಕೊಟ್ಟರೆ ಮಾತ್ರ ಖರೀದಿ ಆಗುತ್ತದೆ, ಇಲ್ಲವಾದರೆ ಖರೀದಿ ಆಗೋದಿಲ್ಲ ಎಂದು ಉಡಾಫೆಯಾಗಿ ಮಾತನಾಡುತ್ತಾರೆ ಎಂದು ಆರೋಪಿಸಿದರು.
ಇಂದು ಶುಕ್ರವಾರ ತಹಸಿಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದ್ದೇವೆ. ಇದಲ್ಲದೆ ಸಬ್ ರಿಜಿಸ್ಟರ್ ಅಧಿಕಾರಿಗಳ ಜೊತೆಗೆ ಕೂಡ ಮಾತನಾಡಿ ಖರೀದಿ ವಿಚಾರವಾಗಿ ಸರ್ಕಾರದ ನಿಯಮದಂತೆ ದರ ಪಟ್ಟಿಯನ್ನು ಪ್ರಕಟಿಸಬೇಕು. ಶುಲ್ಕ ಪಡೆದುಕೊಂಡ ಹಣಕ್ಕೆ ಸಂಬಂಧಿಸಿದಂತೆ ರಶೀದಿ ನೀಡಬೇಕು. ದಸ್ತು ಬರಹಗಾರರು ಸಬ್ ರಿಜಿಸ್ಟರ್ ಕಚೇರಿಯಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ. ಅಧಿಕಾರಿಗಳ ಹೆಸರಿನಲ್ಲಿ ಬೇಕಾಬಿಟ್ಟಿ ಹಣ ವಸೂಲಿ ಮಾಡುತ್ತಿದ್ದು, ಇದನ್ನು ತಡೆಗಟ್ಟಬೇಕು. ಇಲ್ಲವಾದರೆ ಮುಂದಿನ ದಿನಮಾನಗಳಲ್ಲಿ ರೈತ ಸಂಘದಿಂದ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ. ಇದಲ್ಲದೆ ಮೇಲಾಧಿಕಾರಿಗಳಿಗೂ ಲಿಖಿತ ಮನವಿ ಸಲ್ಲಿಸಿದ್ದೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ರೈತ ಸಂಘದ ಮುಖಂಡರಾದ ರಮೇಶ ಮಡಿವಾಳ, ಕಿರಣ್ ಮಿಸಾಳ, ಸಂಗಪ್ಪ ಕರಿಗಾರ, ತಿಪ್ಪಣ್ಣ ಪೂಜಾರಿ, ಹಣಮಂತ ನಾಯಿಕ, ಸುರೇಶ ಮೇತ್ರಿ, ಪಾರಿಸ್ ಯಳಗೂಡ, ಮಹಾದೇವ ಕುಚನೂರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.