
(ಅಬ್ದುಲಜಬ್ಬಾರ ಚಿಂಚಲಿ)
ಅಥಣಿ :ಆ.19: ಸರ್ಕಾರಿ ಕನ್ನಡ ಶಾಲೆಗಳ ಅಭಿವೃದ್ಧಿ ಹೊಂದಬೇಕು ಮತ್ತು ಮಕ್ಕಳಿಗೆ ಗುಣಾತ್ಮಕ ಉಚಿತ ಹಾಗೂ ಕಡ್ಡಾಯ ಶಿಕ್ಷಣದ ಜೊತೆಗೆ ಮೂಲಭೂತ ಸೌಲಭ್ಯಗಳು ದೊರಕಬೇಕು ಎಂಬ ಉದ್ದೇಶದಿಂದ ಸರ್ಕಾರ ಸಾಕಷ್ಟು ಅನುದಾನ ಒದಗಿಸುತ್ತದೆ. ಆದರೆ ಸರ್ಕಾರ ಇತ್ತೀಚೆಗೆ ಶಿಕ್ಷಕರ ವರ್ಗಾವಣೆಗೆ ಅವಕಾಶ ಕಲ್ಪಿಸಿದ್ದರಿಂದ ಅಥಣಿ ತಾಲೂಕಿನ ಗಡಿಭಾಗದ ಅನೇಕ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ 590ಕ್ಕೂ ಅಧಿಕ ಶಿಕ್ಷಕರು ಏಕಾಏಕಿ ಸಾಮೂಹಿಕ ವರ್ಗಾವಣೆ ಹೊಂದಿದ್ದು, ವರ್ಗಾವಣೆ ಹೊಂದಿರುವ ಶಿಕ್ಷಕರನ್ನು ಹಿಂದಿನ ಶಿಕ್ಷಣಾಧಿಕಾರಿಗಳು ಬಿಡುಗಡೆಗೊಳಿಸಿದ್ದರಿಂದ ಈಗ ತಾಲೂಕಿನ ಕನ್ನಡ ಶಾಲೆಗಳಲ್ಲಿ ಶಿಕ್ಷಕರ ಕೊರತೆಯಾಗಿದ್ದು ಶಿಕ್ಷಣ ಗುಣಮಟ್ಟ ಕುಂಠಿತವಾಗಿ ಮಕ್ಕಳ ಪಾಲಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಅಥಣಿ ತಾಲೂಕಿನ ಪ್ರಾಥಮಿಕ ಶಾಲಾ ವಿಭಾಗದಲ್ಲಿ 590 ಶಿಕ್ಷಕರು, ಸರ್ಕಾರಿ ಪ್ರೌಢಶಾಲೆಯ ವಿಭಾಗದಲ್ಲಿ 90 ಶಿಕ್ಷಕರು ವರ್ಗಾವಣೆ ಹೊಂದಿದ್ದು, ಖಾಲಿಯಾಗಿರುವ ಸ್ಥಾನಗಳಲ್ಲಿ ಬೇರೆ ಶಿಕ್ಷಕರನ್ನು ನೇಮಕ ಮಾಡದೇ ಇರುವುದು ಈಗಿನ ಶಿಕ್ಷಣಾಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ. ಶಿಕ್ಷಕರ ಕೊರತೆ ಇರುವ ಶಾಲೆಗಳ ಎಸ್ ಡಿಎಂಸಿ ಸದಸ್ಯರು ಮತ್ತು ಮಕ್ಕಳ ಪಾಲಕರು ಪ್ರತಿನಿತ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯಕ್ಕೆ ಅಲೆದಾಡುತ್ತಿದ್ದು, ಕೂಡಲೇ ಕೊರತೆ ಇರುವ ಶಿಕ್ಷಕರನ್ನ ನೇಮಕ ಮಾಡುವಂತೆ ಒತ್ತಾಯಿಸುತ್ತಿದ್ದಾರೆ.
ಬಲ್ಲ ಮೂಲಗಳ ಪ್ರಕಾರ ರಾಜ್ಯದಲ್ಲಿಯೇ ಯಾದಗಿರಿ ಜಿಲ್ಲೆಯಲ್ಲಿ ಹೆಚ್ಚು ಸಂಖ್ಯೆಯಲ್ಲಿ ಶಿಕ್ಷಕರು ವರ್ಗಾವಣೆಗೊಂಡಿದ್ದರೇ, ಅತಿ ಹೆಚ್ಚು ಶಿಕ್ಷಕರು ವರ್ಗಾವಣೆಗೊಂಡ ತಾಲೂಕು ಎಂದರೆ ಅದು ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕು ಎನ್ನಲಾಗುತ್ತಿದೆ. ಈ ಹಿಂದೆ ಶಿಕ್ಷಣ ಅಧಿಕಾರಿಗಳಾಗಿದ್ದ ಬಸವರಾಜ ತಳವಾರ ವರ್ಗಾವಣೆಗೊಳ್ಳುವ ಪೂರ್ವದಲ್ಲಿ ಈ ವರ್ಷದ ಶೈಕ್ಷಣಿಕ ಅವಧಿ ಮುಗಿಯುವವರೆಗೆ ಅಂದರೆ ಮಾರ್ಚ್ ಕೊನೆಯವರೆಗೆ ಯಾವುದೇ ಶಿಕ್ಷಕರನ್ನು ವರ್ಗಾವಣೆಗೊಳಿಸಿ ಬಿಡುಗಡೆ ಮಾಡಬಾರದೆಂಬ ಆದೇಶ ಇದ್ದರೂ ಕೂಡ ಸರ್ಕಾರದ ನಿಯಮವನ್ನು ಗಾಳಿಗೆ ತೂರಿ ವರ್ಗಾವಣೆಗೊಂಡ ಶಿಕ್ಷಕರನ್ನು ಬಿಡುಗಡೆಗೊಳಿಸಿದ್ದರಿಂದ ಈಗ ಶಿಕ್ಷಕರ ಕೊರತೆಯ ಸಮಸ್ಯೆ ಎದುರಿಸುವಂತಾಗಿದೆ. ಕಳೆದ 15 ದಿನಗಳಿಂದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯಕ್ಕೆ ಗಡಿಭಾಗದ ಅನೇಕ ಕನ್ನಡ ಶಾಲೆಯ ಮಕ್ಕಳ ಪಾಲಕರು, ಎಸ್ ಡಿಎಂಸಿ ಅಧ್ಯಕ್ಷರು ಮತ್ತು ಸದಸ್ಯರು ಭೇಟಿ ನೀಡುವ ಮೂಲಕ ನಮ್ಮ ಶಾಲೆಗಳಿಗೆ ಶಿಕ್ಷಕರನ್ನ ಒದಗಿಸುವಂತೆ ಒತ್ತಾಯಿಸುತ್ತಿದ್ದಾರೆ. ಅನೇಕ ಶಾಲೆಗಳಲ್ಲಿ ಬೀಗ ಜಡಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ಈಗಿರುವ ಅತಿಥಿ ಶಿಕ್ಷಕರ ಸಂಖ್ಯೆ ಕಡಿಮೆ ಇರುವುದರಿಂದ ಎಲ್ಲ ಶಾಲೆಗಳಲ್ಲಿ ವಿಷಯವಾರು ಶಿಕ್ಷಕರ ಹೊಂದಾಣಿಕೆಗೆ ಕೊರತೆಯಾಗುತ್ತಿದ್ದು, ಈಗಿರುವ ಕ್ಷೇತ್ರ ಶಿಕ್ಷಣಾಧಿಕಾರಿ ಎಂ ಬಿ ಮೊರಟಗಿ ಅವರಿಗೂ ಕೂಡ ಈ ಸಮಸ್ಯೆ ತಲೆನೋವಾಗಿ ಪರಿಣಮಿಸಿದೆ.
ಅಥಣಿ ತಾಲೂಕಿನ ಗಡಿಭಾಗದ ಅನೇಕ ಶಾಲೆಗಳಲ್ಲಿ ಮೂಲಭೂತ ಸೌಲಭ್ಯ, ಆಟದ ಮೈದಾನ, ಬಿಸಿಯೂಟ ಯೋಜನೆ ವ್ಯವಸ್ಥೆ ಇದ್ದರೂ ಕೂಡ ಕಳೆದ 15 ದಿನಗಳಿಂದ ಗುಣಮಟ್ಟದ ಶಿಕ್ಷಣ ಬೋಧನೆಗೆ ಶಿಕ್ಷಕರು ಇಲ್ಲದೇ ಇರುವುದರಿಂದ ಅನೇಕ ಶಾಲೆಗಳಲ್ಲಿ ಬೀಗು ಹಾಕುವ ಪರಿಸ್ಥಿತಿ ಎದುರಾಗಿದೆ. ಇನ್ನು ಪ್ರೌಢಶಾಲೆಗಳಲ್ಲಿ ವಿಷಯವಾರು ಶಿಕ್ಷಕರ ಕೊರತೆಯಿಂದ ಪ್ರೌಢಶಾಲಾ ವಿದ್ಯಾರ್ಥಿಗಳು ಮತ್ತು ಮಕ್ಕಳ ಪಾಲಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಕೂಡಲೇ ಶಿಕ್ಷಣ ಅಧಿಕಾರಿಗಳು ಮತ್ತು ಸರ್ಕಾರ ವರ್ಗಾವಣೆಗೊಂಡಿರುವ ಶಿಕ್ಷಕರ ಖಾಲಿಯಾಗಿರುವ ಸ್ಥಾನಗಳನ್ನು ಬೇಗನೆ ಭರ್ತಿ ಮಾಡಬೇಕು. ಇಲ್ಲವಾದರೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಮುಂದೆ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ.
— ಜಗನ್ನಾಥ ಬಾಮನೆ,
ಕನ್ನಡಪರ ಹೋರಾಟಗಾರ, ಅಥಣಿ.
ಅಥಣಿ ಶೈಕ್ಷಣಿಕ ವಲಯಕ್ಕೆ ನಾನು ಕಳೆದ ಹತ್ತು ದಿನಗಳ ಹಿಂದಷ್ಟೇ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಬಂದಿದ್ದೇನೆ. ನಾನು ಬಂದ ನಂತರ ಯಾವ ಶಿಕ್ಷಕರನ್ನು ಬಿಡುಗಡೆಗೊಳಿಸಿಲ್ಲ. ಈಗಿರುವ ಶಿಕ್ಷಕರ ಕೊರತೆಯ ಬಗ್ಗೆ ನಮ್ಮ ಇಲಾಖೆಯ ಮೇಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮಾಹಿತಿ ಸಲ್ಲಿಸಿದ್ದೇವೆ. ಶೀಘ್ರದಲ್ಲಿಯೇ ಅತಿಥಿ ಶಿಕ್ಷಕರನ್ನು ನೇಮಿಸಬಹುದು ಎಂಬ ನಿರೀಕ್ಷೆ ಇದೆ.
- ಎಂ ಬಿ ಮೋರಟಗಿ. ಬಿ ಇ ಓ ಅಥಣಿ ಅಥಣಿ ತಾಲೂಕಿನಲ್ಲಿ ಶಿಕ್ಷಕರ ಕೊರತೆಯಾಗಿರುವುದು ನನ್ನ ಗಮನಕ್ಕೆ ಬಂದಿದೆ.
ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಮಾಹಿತಿ ತರಿಸಿಕೊಂಡು ಸರ್ಕಾರಕ್ಕೆ ವರದಿ ಸಲ್ಲಿಸಿದ್ದೇವೆ. ಶೀಘ್ರದಲ್ಲಿಯೇ ಅತಿಥಿ ಶಿಕ್ಷಕರ ನೇಮಕ ಮಾಡುವ ಮೂಲಕ ಶಿಕ್ಷಕರ ಕೊರತೆಯ ಸಮಸ್ಯೆ ನೀಗಿಸಲು ಸೂಕ್ತ ಕ್ರಮ ಕೈಕೊಳ್ಳಲಾಗುವುದು. - ಮೋಹನಕುಮಾರ ಹಂಚಾಟೆ,
ಡಿ ಡಿ ಪಿ ಐ ಚಿಕ್ಕೋಡಿ.