ಅಥಣಿ ಪಟ್ಟಣದ ಅಭಿವೃದ್ಧಿಗೆ ಪೂರಕವಾದ ಬಜೆಟ್ : ಸುಭಾಷ್ ಸಂಪಗಾಂವಿ

ಅಥಣಿ :ಜ.31: ಪುರಸಭೆಯ ವ್ಯಾಪ್ತಿಯ ಗಡಿಯನ್ನು ಗುರುತಿಸಿ ಎಲ್ಲಾ ವಾರ್ಡಿನ ಜನತೆಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಮತ್ತು ಪಟ್ಟಣದ ಅಭಿವೃದ್ಧಿಗೆ ಪೂರಕವಾದ ಬಜೆಟ್ ತಯಾರಿಸಲಾಗುವುದು ಎಂದು ಅಥಣಿ ಪುರಸಭೆಯ ಆಡಳಿತ ಅಧಿಕಾರಿ ಹಾಗೂ ಚಿಕ್ಕೋಡಿ ಉಪ ವಿಭಾಗಾಧಿಕಾರಿ ಸುಭಾಷ್ ಸಂಪಗಾಂವಿ ಹೇಳಿದರು.
ಅವರು ಮಂಗಳವಾರ ಇಲ್ಲಿನ ಪುರಸಭೆ ಸಭಾಂಗಣದಲ್ಲಿ ಸನ್ 2024-25 ನೇ ಸಾಲಿನ ಬಜೆಟ್ ತಯಾರಿಸುವ ಕುರಿತು ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸನ್ 2023 -24ನೇ ಸಾಲಿನಲ್ಲಿ 2 ಕೋಟಿ 41 ಲಕ್ಷ ರೂಪಾಯಿ ಬಜೆಟ್ ತಯಾರಿಸಲಾಗಿತ್ತು. ಇದಲ್ಲದೆ ಸರ್ಕಾರದಿಂದ ಸು. 38 ಕೋಟಿ ರೂ. ಅನುದಾನ ಪಡೆದುಕೊಳ್ಳುವ ಮೂಲಕ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ. ಅಥಣಿ ಪಟ್ಟಣವು ದಿನದಿಂದ ದಿನಕ್ಕೆ ಬೆಳವಣಿಗೆ ಹೊಂದುತ್ತಿದ್ದು, ಅದಕ್ಕೆ ಅಭಿವೃದ್ಧಿ ದೃಷ್ಟಿಯಿಂದ ಮತ್ತು ಸಾರ್ವಜನಿಕರಿಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಚುನಾಯಿತ ಪ್ರತಿನಿಧಿಗಳ ಮತ್ತು ಸಾರ್ವಜನಿಕರ ಅಭಿಪ್ರಾಯ ಪಡೆದು ಈ ಬಜೆಟ್ ತಯಾರಿಸಲಾಗುವುದು. ಪುರಸಭೆಗೂ ಹೆಚ್ಚಿನ ಆದಾಯ ಬರುವ ನಿಟ್ಟಿನಲ್ಲಿ ಮತ್ತು ಸಾರ್ವಜನಿಕರಿಗೆ ಅಗತ್ಯವಿರುವ ಸೌಲಭ್ಯಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಸಾರ್ವಜನಿಕರು ಸಲಹೆ ನೀಡುವಂತೆ ತಿಳಿಸಿದರು.
ಪುರಸಭೆ ಸದಸ್ಯ ಸಂತೋಷ ಸಾವಡಕರ ಮಾತನಾಡಿ ಅಥಣಿ ಪಟ್ಟಣವು ಆಧ್ಯಾತ್ಮಿಕ ಕ್ಷೇತ್ರವಾಗಿದ್ದು, ಮಹತಪಸ್ವಿ ಮುರುಗೇಂದ್ರ ಶಿವಯೋಗಿಗಳ ಕ್ಷೇತ್ರಕ್ಕೆ ಲಕ್ಷಾಂತರ ಭಕ್ತರು ಭೇಟಿ ಕೊಡುತ್ತಾರೆ. ಪಟ್ಟಣದ ಪ್ರಮುಖ ಹೆದ್ದಾರಿಗಳಲ್ಲಿ ಪುರಸಭೆಯಿಂದ ಸ್ವಾಗತ ಕೋರುವ ಹೆಬ್ಬಾಗಿಲುಗಳನ್ನು ನಿರ್ಮಿಸಬೇಕು ಎಂದರು.
ಪುರಸಭೆ ಸದಸ್ಯ ರಾವಸಾಬ ಐಹೊಳೆ ಮಾತನಾಡಿ ಅಥಣಿ ಪಟ್ಟಣದಲ್ಲಿ ಟ್ರಾಫಿಕ್ ಸಮಸ್ಯೆ ಅಧಿಕವಾಗುತ್ತಿದ್ದು, ಬೈಪಾಸ್ ರಸ್ತೆ ನಿರ್ಮಿಸುವ ಮೂಲಕ ವಾಹನಗಳ ದಟ್ಟಣೆಯನ್ನು ತಡೆಗಟ್ಟಬೇಕು. ಇದಲ್ಲದೆ ಪಟ್ಟಣದಲ್ಲಿ ಬೈಕ್ ಸವಾರರಿಗೆ ಅಲ್ಲಲ್ಲಿ ಪಾಕಿರ್ಂಗ್ ವ್ಯವಸ್ಥೆಗಳನ್ನು ಕಲ್ಪಿಸಬೇಕು. ಮನೆಕ ಚರಂಡಿಗಳು ಅವೈಜ್ಞಾನಿಕವಾಗಿದ್ದು, ಮುಂಬರುವ ದಿನಗಳಲ್ಲಿ ಡ್ರೈನೇಜ್ ಅಳವಡಿಸುವ ವ್ಯವಸ್ಥೆ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.
ಬೀರಪ್ಪ ಯಂಕಂಚಿ ಮಾತನಾಡಿ ದೀನ ದಲಿತರು, ಬಡ ಹಾಗೂ ಮಧ್ಯಮ ವರ್ಗದ ಅನೇಕ ಕುಟುಂಬಗಳ ಸದಸ್ಯರಿಗೆ ಇನ್ನುವರಿಗೆ ಪುರಸಭೆಯಿಂದ ಹಕ್ಕು ಪತ್ರ ನೀಡಿಲ್ಲ. ಅಕ್ರಮ ಮನೆಗಳನ್ನು ಸಕ್ರಮವಾಗಿಯೂ ಮಾಡಿಕೊಡದೆ ಇರುವುದರಿಂದ ಅವರು ಪುರಸಭೆಯ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಅಲ್ಲಿನ ನಿವಾಸಿಗಳಿಗೂ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕೆಂದು ಒತ್ತಾಯಿಸಿದರು.
ಮಯೂರ್ ಸಿಂಗೆ ಮಾತನಾಡಿ ಪುರಸಭೆ ವ್ಯಾಪ್ತಿಯಲ್ಲಿನ ಅನೇಕ ವಾಣಿಜ್ಯ ಮಳಿಗೆಗಳಿಗೆ ಮರು ಟೆಂಡರ್ ಪ್ರಕ್ರಿಯೆ ನಡೆಸಿಲ್ಲ, ಇದರಿಂದ ಪುರಸಭೆಗೆ ಬರಬೇಕಾದ ಆದಾಯ ಕಡಿಮೆಯಾಗುತ್ತಿದೆ. ಇದಲ್ಲದೆ ಅನೇಕ ಉದ್ಯೋಗ ಲೈಸೆನ್ಸ್ ಪಡೆದುಕೊಂಡವರು ನವೀಕರಣ ಮಾಡಿಕೊಳ್ಳದೆ ಉದ್ಯೋಗ ನಡೆಸುತ್ತಿದ್ದಾರೆ. ಪುರಸಭೆಯ ನಾಗರಿಕ ಸೌಲಭ್ಯಗಳ ಸ್ಥಳವನ್ನು ಅನೇಕ ಪ್ರಭಾವಿ ವ್ಯಕ್ತಿಗಳು ಅತಿಕ್ರಮಣ ಮಾಡಿಕೊಂಡು ಪರಭಾರೆ ನಡೆಸುತ್ತಿದ್ದಾರೆ. ಅವುಗಳನ್ನು ಸರ್ವೆ ನಡೆಸಿ ಪುರಸಭೆ ಆಸ್ತಿಯನ್ನು ಜಪ್ತಿ ಮಾಡಿಕೊಳ್ಳಬೇಕು. ಎನ್ ಎ ಕೆ ಜಿ ಪಿ ಲೇ ಔಟ್ ನಲ್ಲಿ ನಾಗರಿಕ ಸೌಲಭ್ಯಕ್ಕಾಗಿ ಬಿಟ್ಟಿರುವ ಸ್ಥಳಗಳಿಗೆ ಬೇಲಿ ನಿರ್ಮಿಸಬೇಕು ಎಂದು ಸಲಹೆ ನೀಡಿದರು.
ಅಥಣಿ ಪಟ್ಟಣದಲ್ಲಿ ವ್ಯಾಪಾರಸ್ಥರಿಗೆ ಮತ್ತು ಮಹಿಳೆಯರಿಗೆ ಶೌಚಾಲಯಗಳನ್ನು ನಿರ್ಮಿಸಬೇಕು, ಬಡ ಕಾರ್ಮಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಿಸಬೇಕು, ಸಕಾಲಕ್ಕೆ ಕಸದ ವಿಲೇವಾರಿ ಆಗುವದರ ಜೊತೆಗೆ ಸ್ವಚ್ಛತೆಯನ್ನ ಕಾಪಾಡುವ ನಿಟ್ಟಿನಲ್ಲಿ ಹೆಚ್ಚುವರಿಗಾಗಿ ವಾಹನಗಳನ್ನು ಖರೀದಿಸಬೇಕು ಮತ್ತು ಕಾರ್ಮಿಕರನ ನೇಮಿಸಬೇಕು. ಅಥಣಿ ಪಟ್ಟಣದಲ್ಲಿರುವ ಉದ್ಯಾನವನಗಳನ್ನು ಅಭಿವೃದ್ಧಿಪಡಿಸಿ ಸಾರ್ವಜನಿಕರಿಗೆ ಮತ್ತು ಮಕ್ಕಳಿಗೆ ಆಟೋಪಕರಣಗಳನ್ನು ಅಳವಡಿಸಬೇಕು. ಪ್ರತಿಮನೆಗಳಿಗೆ ಒಣ ಕಸ ಮತ್ತು ಹಸಿ ಕಸ ಬೇರ್ಪಡಿಸಲು ಡಬ್ಬಿಗಳನ್ನು ವಿತರಿಸಬೇಕು. ಎಂಬ ಅನೇಕ ಸಲಹೆಗಳನ್ನು ಸಾರ್ವಜನಿಕರು ನೀಡಿದರು.
ಪುರಸಭೆ ಮುಖ್ಯ ಅಧಿಕಾರಿ ಅಶೋಕ ಗುಡಿಮನಿ ಮಾತನಾಡಿ ಸನ್ 2023 24ನೇ ಸಾಲಿನಲ್ಲಿ ತಯಾರಿಸಲಾದ ಬಜೆಟ್ ಮತ್ತು ಅದರ ಖರ್ಚು ವೆಚ್ಚಗಳನ್ನು ಓದಿ ಹೇಳಿದ ಅವರು ಪಟ್ಟಣದ ಪುರಸಭೆಗೆ ಹೆಚ್ಚಿನ ಆದಾಯ ಬರುವ ನಿಟ್ಟಿನಲ್ಲಿ ಮತ್ತು ಅಭಿವೃದ್ಧಿಗೆ ಸಹಕಾರಿಯಾಗುವ ನಿಟ್ಟಿನಲ್ಲಿ ಚುನಾಯಿತ ಜನಪ್ರತಿನಿಧಿಗಳು ಮತ್ತು ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು ಉತ್ತಮವಾದ ಸಲಹೆಗಳನ್ನ ನೀಡಿದ್ದೀರಿ. ಪುರಸಭೆಯ ಆಡಳಿತದ ನಿಯಮಾನುಸಾರ ಸಲಹೆಗಳನ್ನ ಅಳವಡಿಸಿಕೊಂಡು ಪಟ್ಟಣದ ಅಭಿವೃದ್ಧಿಗೆ ಪೂರಕವಾಗುವ ನಿಟ್ಟಿನಲ್ಲಿ ಬಜೆಟ್ ತಯಾರಿಸಲಾಗುವುದು.

ಜೋಡು ಕೆರೆ. ಭಾಗೀರಥಿ ನಾಲಾ ಅಭಿವೃದ್ಧಿಗೆ 35 ಕೋಟಿ ಅನುದಾನ ಮಂಜೂರು :-
ಈಗಾಗಲೇ ರಾಜ್ಯ ಸರ್ಕಾರದಿಂದ ಅಥಣಿ ಪಟ್ಟಣದ ಜೋಡಿ ಕೆರೆಗಳ ಅಭಿವೃದ್ಧಿಗಾಗಿ 25 ಕೋಟಿ ರೂ. ಮತ್ತು ಭಾಗಿರಥ ನಾಲಾ ಅಭಿವೃದ್ಧಿಗಾಗಿ 10 ಕೋಟಿ ರೂ ಮಂಜೂರಾಗಿದ್ದು, ಸ್ಥಳೀಯ ಶಾಸಕರಾದ ಲಕ್ಷ್ಮಣ ಸವದಿ ಮತ್ತು ನಮ್ಮ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಂತೆ ಮುಂದಿನ ಅಭಿವೃದ್ಧಿ ಕಾರ್ಯಗಳನ್ನು ಕೈಕೊಳ್ಳಲಾಗುವುದು. ಅಥಣಿ ನಾಗರಿಕರು ಈ ನಿಟ್ಟಿನಲ್ಲಿ ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಕಲ್ಲೇಶ ಮಡ್ಡಿ, ಉದಯ ಸೊಳಸಿ, ಸೈಯದ್ ಅಮೀನ್ ಗದ್ಯಾಳ, ರಮೇಶ್ ಪವಾರ, ವಿದ್ಯಾ ಐಹೊಳೆ, ಪ್ರಮೋದ ಬಿಳ್ಳೂರು, ವಿಲಿನರಾಜ ಏಳಮಲ್ಲೆ, ರಿಯಾಜ್ ಸನದಿ, ಮಲ್ಲಿಕಾರ್ಜುನ ಭೂಟಾಳಿ, ರಾಜಶೇಖರ ಗುಡೋಡಗಿ, ಭುವನೇಶ್ವರಿ ಯಕ್ಕಂಚಿ ಸೇರಿದಂತೆ ಪುರಸಭೆ ಸಿಬ್ಬಂದಿ ಉಪಸ್ಥಿತರಿದ್ದರು.