ಅಥಣಿಯ ಇಬ್ಬರು ಶಿಕ್ಷಕಿಯರಿಗೆ ರಾಣಿ ಚೆನ್ನಮ್ಮ ಪ್ರಶಸ್ತಿ

ಅಥಣಿ : ಮಾ.11: ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘದ ವತಿಯಿಂದ ನೀಡಲಾಗುವ ವೀರರಾಣಿ ಕಿತ್ತೂರು ಚೆನ್ನಮ್ಮ ಪ್ರಶಸ್ತಿಗೆ ಅಥಣಿ ಶೈಕ್ಷಣಿಕ ವಲಯದ ಇಬ್ಬರು ಶಿಕ್ಷಕಿಯರಿಗೆ ರಾಜ್ಯಮಟ್ಟದ ವೀರರಾಣಿ ಕಿತ್ತೂರು ಚೆನ್ನಮ್ಮ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಇತ್ತೀಚಿಗೆ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದಲ್ಲಿ ಆಯೋಜಿಸಲಾಗಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಅಥಣಿ ತಾಲೂಕಿನ ಪಾರ್ಥನ ಹಳ್ಳಿ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಕಿ ಭೌರವ್ವಾ ಅಣ್ಣಪ್ಪ ಖೋತ ಮತ್ತು ಅಥಣಿ ಪಟ್ಟಣದ ಶಿವಯೋಗಿ ನಗರದಲ್ಲಿರುವ ಮೋಟಗಿತೋಟದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಮಹಾನಂದಾ ರಾವಸಾಬ ಪಾಟೀಲ ಇವರಿಗೆ ವೀರರಾಣಿ ಕಿತ್ತೂರು ಚೆನ್ನಮ್ಮ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಶಸ್ತಿ ಪಡೆದುಕೊಂಡ ಈ ಇಬ್ಬರು ಶಿಕ್ಷಕಿಯರಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜ ತಳವಾರ ಹಾಗೂ ಇನ್ನುಳಿದ ಶಿಕ್ಷಕ, ಶಿಕ್ಷಕಿ ಬಳಗದವರು ಅಭಿನಂದಿಸಿದ್ದಾರೆ.