ಅಥಣಿಯಲ್ಲಿ ಸಂಭ್ರಮ ಸಡಗರ ಹಾಗೂ ಶ್ರದ್ಧಾ ಭಕ್ತಿಯಿಂದ ಗಣೇಶೋತ್ಸವ ಆಚರಣೆ

ಅಥಣಿ :ಸೆ.20: ಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆ ಗಣೇಶ ಉತ್ಸವವನ್ನು ಸರಳ ಮತ್ತು ಶ್ರದ್ಧಾ, ಭಕ್ತಿಯಿಂದ ಆಚರಿಸಲಾಯಿತು. ಸರ್ಕಾರ ಸೋಮವಾರವೇ ಗಣೇಶೋತ್ಸವಕ್ಕೆ ರಜೆ ಘೋಷಿಸಿದರೂ ಅಥಣಿ ಪಟ್ಟಣ ಮತ್ತು ತಾಲೂಕಿನ ಅತ್ಯಂತ ಮಂಗಳವಾರ ಗಣೇಶ ಉತ್ಸವವನ್ನು ಆಚರಿಸಲಾಯಿತು. ಪ್ರತಿವರ್ಷ ಅದ್ಧೂರಿ ಮೆರವಣಿಗೆಯಲ್ಲಿ ಆಳೆತ್ತರದ ಗಣಪತಿ ಪ್ರತಿಮೆಗಳ ಮೆರವಣಿಗೆ ಅಬ್ಬರದಿಂದ ಹಬ್ಬಕ್ಕೆ ಮೆರುಗು ಹೆಚ್ಚುವಂತೆ ಯುವಕರು ಕುಣಿದು, ಕುಪ್ಪಳಿಸಿ ಪಟಾಕಿ ಸಿಡಿಸಿ ಪ್ರತಿಷ್ಠಾಪನೆ ತರುತ್ತಿದ್ದರು. ವಿವಿಧ ನಿಬರ್ಂಧನೆಯಿಂದ 4 ಅಡಿಗಳಿಗಿಂತ ಚಿಕ್ಕದಾದ ಮೂರ್ತಿಗಳನ್ನು ಸೀಮಿತ ಜನರು ಮೆರವಣಿಗೆಯಲ್ಲಿ ತರುತ್ತಿರುವುದು ಕಂಡು ಬಂತು. ಹಬ್ಬದ ಸಡಗರ ಮನೆಯಲ್ಲಿ ಹೆಚ್ಚಾಗಿತ್ತು. ಸಾಂಪ್ರದಾಯಿಕವಾಗಿ ಗಣೇಶನ ಪ್ರತಿಷ್ಠಾಪನೆ ಮಾಡುವ ಭಕ್ತರು ತಮ್ಮ ಮನೆಗಳಲ್ಲಿ ವಿವಿಧ ಆಕಾರದ, ವೈವಿಧ್ಯಮಯ ಗಣೇಶನನ್ನು ಪ್ರತಿಷ್ಠಾಪಿಸಿರುವುದು ಕಂಡು ಬಂತು. ಅಥಣಿ ಪುರಸಭೆ ಹಾಗೂ ಪರಿಸರ ಪ್ರೇಮಿಗಳು ಪರಿಸರ ಸ್ನೇಹಿ ಗಣೇಶನ ಪೂಜೆಗೆ ಹೆಚ್ಚು ಒತ್ತು ನೀಡುವಂತೆ ಮನವಿ ಮಾಡಲಾಗಿತ್ತು.
ಪಟ್ಟಣದ ವಿಶ್ವಕರ್ಮ ಕುಟುಂಬದ ಅನೇಕ ಮನೆತನಗಳು ಪರಿಸರ ಸ್ನೇಹಿ ಮಣ್ಣಿನ ಗಣಪತಿ ಮೂರ್ತಿಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದ ದೃಶ್ಯ ಕಂಡು ಬಂತು.
ಉಳಿದೆಡೆ ಹೆಚ್ಚು ಗಣೇಶನ ವಿಗ್ರಹಗಳು ಬಣ್ಣಗಳಿಂದ ಅಲಂಕರಿಸಿದ ಪಿಓಪಿ ಮೂರ್ತಿಗಳಾಗಿದ್ದವು. ಕೆಲವು ಕಡೆ ಒಂದೇ ದಿನ ಮೂರ್ತಿ ಸ್ಥಾಪನೆ ಮಾಡಿ ಮಂಗಳವಾರ ರಾತ್ರಿಯೇ ವಿಸರ್ಜನೆ ಮಾಡಲಾಯಿತು. ಸಾರ್ವಜನಿಕ ಗಣೇಶ ಮಂಡಳಿಗಳು ಮೂರು ದಿನ, ಐದು ದಿನಗಳ ಕಾಲ, ಏಳು ದಿನ ಮತ್ತು ಒಂಬತ್ತು ದಿನ ಗಜಾನನ್ನು ಆರಾಧಿಸಿ ವಿಸರ್ಜನೆ ಮಾಡಲಾಗುತ್ತದೆ.
ತಾಲೂಕಿನಲ್ಲಿ ಬರಗಾಲದ ಛಾಯೆ ಇದ್ದರೂ ಕೂಡ ಆಡಂಬರಕ್ಕೆ ಆದ್ಯತೆ ನೀಡದೆ ರೈತಾಪಿ ಜನರು ಸರಳ ರೀತಿಯಲ್ಲಿ ಗಣೇಶ ಹಬ್ಬವನ್ನು ಆಚರಿಸುತ್ತಿದ್ದರು. ಅನೇಕ ಗಣೇಶ ಯುವಕ ಮಂಡಳಿಯ ಪದಾಧಿಕಾರಿಗಳು ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಆಯೋಜಿಸಿರುವುದ ಹಬ್ಬಕ್ಕೆ ಮತ್ತಷ್ಟು ಕಳೆ ತಂದಂತಾಗಿದೆ.
ಅಥಣಿ ಪಟ್ಟಣದಲ್ಲಿ ಈ ಸಾರಿ 100ಕ್ಕೂ ಹೆಚ್ಚು ಸಾರ್ವಜನಿಕ ಗಣೇಶನ ವಿಗ್ರಹ ಪ್ರತಿಷ್ಠಾಪನೆ ಮಾಡಲಾಗಿದೆ. ಗ್ರಾಮೀಣ ಭಾಗದಲ್ಲಿಯೂ ಹಬ್ಬದ ಕಳೆ ಹೆಚ್ಚಿತ್ತು. ಗಣೇಶನ ಉತ್ಸವಕ್ಕೆ ಯುವಕರು ತಂಡೋಪ ತಂಡವಾಗಿ ವಾಹನಗಳಲ್ಲಿ ಆಗಮಿಸಿ ವಿವಿಧ ವಾದ್ಯ ಮೇಲುಗಳೊಂದಿಗೆ ಸಂಭ್ರಮ ಸಡಗರದಿಂದ ತಮ್ಮ ಗ್ರಾಮದ ವಿವಿಧ ಸಾರ್ವಜನಿಕ ಸ್ಥಳಗಳಲ್ಲಿ ವೇದಿಕೆ ನಿರ್ಮಾಣ ಗಣೇಶ ಮೂರ್ತಿ ಪ್ರತಿಷ್ಠಾಪನೆ ನೆರೆವೇರಿಸಿದರು.

ಗಗನಕ್ಕೇರಿದ ಹಣ್ಣು ಹಂಪಲುಗಳ ದರ:
ಮಾರುಕಟ್ಟೆಯಲ್ಲಿ ಗಣೇಶ ಹಬ್ಬಕ್ಕೆ ಬೇಕಾಗುವ ಹಣ್ಣು ಹಂಪಲುಗಳು ದರ ಗಗನಕ್ಕೇರಿದು, ಗಣೇಶ ಮೂರ್ತಿಗಿಂತ ಅಧಿಕವಾಗಿ ಅಲಂಕಾರ ಮತ್ತು ಹಣ್ಣು ಹಂಪಲುಗಳ ದರ ದುಬಾರಿಯಾಗಿದೆ ಎಂದು ಗ್ರಾಹಕರು ಬೇಸರ ಉಳಿಸಿದರು. ಪ್ರತಿದಿನ ಇದ್ದ ದರಗಳು ಇಂದು ಏಕಾಏಕಿ ದುಪ್ಪಟ್ಟು ದರದಲ್ಲಿ ಮಾರಾಟ ಮಾಡುತ್ತಿದ್ದ ದೃಶ್ಯಗಳು ಕಂಡು ಬಂದವು.
ಅಥಣಿ ಡಿವೈಎಸ್ಪಿ ಶ್ರೀಪಾದ ಜಲ್ದೆ ಅವರ ಮಾರ್ಗದರ್ಶನದಲ್ಲಿ ಸಿಪಿಐ ರವೀಂದ್ರ ನಾಯ್ಕೋಡಿ ನೇತೃತ್ವದಲ್ಲಿ ಪಿಎಸ್ ಐಗಳಾದ ಶಿವಶಂಕರ ಮುಕರಿ, ರಾಕೇಶ್ ಬಗಲಿ ಹಾಗೂ ಹೆಚ್ಚುವರಿ ಪಿಎಸ್ ಐ ಚಂದ್ರಶೇಖರ ಸಾಗನೂರ ಮತ್ತು ಅವರ ಸಿಬ್ಬಂದಿಗಳು ಸೂಕ್ತ ಬಂದೋಬಸ್ತ್ ಏರ್ಪಡಿಸಿದ್ದರು.