ಅಥಣಿಯಲ್ಲಿ ಸಂಕ್ರಾಂತಿ ಸಂಭ್ರಮ

ಅಥಣಿ :ಜ.16: ಹೊಸ ವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿ ಪ್ರಯುಕ್ತ ಅಥಣಿ ಪಟ್ಟಣದ ಆರಾಧ್ಯ ದೈವ ಶ್ರೀ ಸಿದ್ದೇಶ್ವರ ದೇವರ ಪಲ್ಲಕ್ಕಿ, ದೇವರ ಕುದುರೆ ಸಮೇತ ನೂರಾರು ಭಕ್ತರು ತಾಲೂಕಿನ ಹಲ್ಯಾಳ ಗ್ರಾಮದ ಕೃಷ್ಣಾ ನದಿಯಲ್ಲಿ ಜನರು ನದಿಯ ಪುಣ್ಯ ಸ್ನಾನ ಮಾಡಿ ದೇವರ ದರ್ಶನ ಪಡೆದುಕೊಂಡು ಪುನೀತರಾದರು. ರೈತರು ತಮ್ಮ ಜೋಡೆತ್ತುಗಳ ಮೂಲಕ ಆಗಮಿಸಿ ನದಿಯಲ್ಲಿ ಪುಣ್ಯ ಸ್ನಾನ ಮಾಡಿ ದೇವರ ಪಲ್ಲಕ್ಕಿ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಅಥಣಿ ಗ್ರಾಮ ದೇವತೆಯಾದ ಶ್ರೀ ಸಿದ್ದೇಶ್ವರ ದೇವರ ಪಲ್ಲಕ್ಕಿ ಸೇರಿದಂತೆ ತಾಲೂಕಿನ ಅನೇಕ ಗ್ರಾಮಗಳ ದೇವರುಗಳಿಗೆ ಕೃಷ್ಣಾ ನದಿ ಸ್ನಾನ ಮಾಡಿಸಿ ದಡದಲ್ಲಿ ಇರಿಸಿ ಹಿಂದೂ ಸಂಪ್ರದಾಯದಂತೆ ಪಲ್ಲಕ್ಕಿಗೆ ವಿಶೇಷ ಪೂಜೆ ಹಾಗೂ ಮಹಾಭಿಷೇಕವನ್ನು ಏರ್ಪಡಿಸಲಾಗಿತ್ತು.
ವಿಶೇಷ ಪೂಜೆಯ ನಂತರ ನದಿ ತೀರದಲ್ಲಿ ಉತ್ತರ ಕರ್ನಾಟಕದ ಸಂಕ್ರಾಂತಿಯ ಭೋಗಿ ಖಾದ್ಯವಾದ ಸಜ್ಜಿರೊಟ್ಟಿ, ಹೋಳಿಗೆ, ಕಾಳುಪಲ್ಯ , ತರಕಾರಿ ಮುಂತಾದವುಗಳನ್ನು ಪೂಜಾರಿಗಳು ದೇವರಿಗೆ ನೈವೇದ್ಯ ಅರ್ಪಿಸಿ ನೆರೆದ ಸಾವಿರಾರು ಜನ ಭಕ್ತರಿಗೆ ಪ್ರಸಾದವನ್ನು ಹಂಚಿ ಸಂಕ್ರಾಂತಿ ಹಬ್ಬವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಿದರು. ಸಾಯಂಕಾಲ ಅಥಣಿ ಪಟ್ಟಣದಲ್ಲಿ ದೇವರ ಪಲ್ಲಕ್ಕಿಗಳನ್ನು ವಿವಿಧ ವಾದ್ಯ ಮೇಳಗಳೊಂದಿಗೆ ಬರಮಾಡಿಕೊಳ್ಳಲಾಯಿತು. ಭಕ್ತರು ದೇವರಿಗೆ ನೈವೇದ್ಯ ಅರ್ಪಿಸಿ ಪುನೀತರಾದರು.ಇದಲ್ಲದೆ ಪಟ್ಟಣದ ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ರುದ್ರಾಭಿಷೇಕ ನೆರವೇರಿಸಲಾಗಿತ್ತು. ಸಾಯಂಕಾಲ ಅಥಣಿ ಪಟ್ಟಣದಲ್ಲಿ ಮುತ್ತು ಗ್ರಾಮೀಣ ಪ್ರದೇಶಗಳಲ್ಲಿ ವಿವಿಧ ಪಕ್ಷದ ರಾಜಕೀಯ ನಾಯಕರು ಮತ್ತು ಸಮಾಜ ಸೇವಕರು ಮತ್ತು ಜನರು ಅಥಣಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ವ್ಯಾಪಾರಸ್ಥರಿಗೆ ಮತ್ತು ಸಾರ್ವಜನಿಕರಿಗೆ ಎಳ್ಳು ಬೆಲ್ಲವನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುವ ಮೂಲಕ ಸಂಕ್ರಮಣ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.
ಪಡೆದರು.