ಅಥಣಿ :ಜೂ.12: ಸರ್ಕಾರದ ಮೊದಲ ಗ್ಯಾರಂಟಿ ” ಶಕ್ತಿ” (ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ) ಯೋಜನೆಗೆ ಮಾಜಿ ಡಿಸಿಎಂ ಹಾಗೂ ಶಾಸಕ ಲಕ್ಷ್ಮಣ ಸವದಿ ಹಾಗೂ ಕಾಗವಾಡ ಶಾಸಕ ರಾಜು ಕಾಗೆ ನೇತೃತ್ವದಲ್ಲಿ ಚಾಲನೆ ನೀಡಲಾಯಿತು,
ಚುನಾವಣಾ ಪೂರ್ವದಲ್ಲಿ ಭರವಸೆ ನೀಡಿದ್ದ ಮಹತ್ವದ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಮಹಿಳೆಯರಿಗೆ ಶಕ್ತಿ ತುಂಬುವ ಯೋಜನೆ ಎನ್ನಲಾದ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆಗೆ ಮಾಜಿ ಡಿಸಿಎಂ ಹಾಗೂ ಶಾಸಕ ಲಕ್ಷ್ಮಣ ಸವದಿ ರವಿವಾರ ಸ್ಥಳೀಯ ಬಸ್ ನಿಲ್ದಾಣದಲ್ಲಿ ಅಥಣಿ ಸಾರಿಗೆ ಘಟಕದ ವತಿಯಿಂದ ಆಯೋಜಿಸಲಾಗಿದ್ದ ಶಕ್ತಿ ಯೋಜನೆಗೆ ಹಸಿರು ನಿಶಾನೆ ತೋರಿಸಿ ಮಹಿಳಾ ಪ್ರಯಾಣಿಕರಿಗೆ ಉಚಿತ ಟಿಕೆಟ್ ನೀಡಿ ಅವರ ಪ್ರಯಾಣಕ್ಕೆ ಶುಭ ಕೋರಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಬಡ ಹಾಗೂ ಮಧ್ಯಮ ವರ್ಗದ ಕುಟುಂಬದ ಮಹಿಳೆಯರು ಪ್ರತಿನಿತ್ಯ ದುಡಿಯಲು ಹೊರಗಡೆ ಹೋಗುವವರಿಗೆ, ಇನ್ನಿತರ ಕೆಲಸಗಳ ನಿಮಿತ್ಯ ಬೇರೆ ಬೇರೆ ಊರುಗಳಿಗೆ ಹೋಗುವ ಮಹಿಳೆಯರಿಗೆ, ಶಾಲಾ ಕಾಲೇಜಿನ ವಿದ್ಯಾರ್ಥಿನಿಯರಿಗೆ ಈ ಯೋಜನೆಯ ಲಾಭ ದೊರಕಲಿದೆ. ಅಥಣಿ ತಾಲೂಕಿನ ಮಹಿಳೆಯರು ಮತ್ತು ವಿದ್ಯಾರ್ಥಿನಿಯರು ಸರ್ಕಾರದ ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಕಾಗವಾಡ ಶಾಸಕ ರಾಜು ಕಾಗೆ, ಮುಖಂಡರಾದ ಗಜಾನನ ಮoಗಸೂಳಿ, ಅಥಣಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿದ್ದಾರ್ಥ ಸಿಂಗೆ ಅನಂತಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಓಂಪ್ರಕಾಶ ಪಾಟೀಲ, ರಾಮನಗೌಡ ಪಾಟೀಲ, ರಾವಸಾಹೇಬ ಐಹೊಳೆ, ಅತೀಕ ಮೋಮಿನ್, ಶಿವಾನಂದ ಸೌದಾಗರ, ಘಟಕ ವ್ಯವಸ್ಥಾಪಕ ಎನ್. ಎಂ ಕೇರಿ, ಸಿಬ್ಬಂದಿಗಳಾದ ಎಸ್ ಐ ಇನಾಮದಾರ, ಎಚ್ ಆರ್ ಪಟೇಲ್, ಮೌಲಾಲಿ ನದಾಫ, ಎಮ್ ಎಲ್ ಜಗದೇವ, ರಿಯಾಜಆಹ್ಮದ ಹತ್ತರಕಿ, ಸಂಜು ಪೂಜಾರಿ, ತೋಫಿಕ್ ಮುಕ್ಕೇರಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಸರ್ಕಾರದ ಶಕ್ತಿ ಯೋಜನೆ ಖುಷಿ ತಂದಿದೆ :
ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಘೋಷಿಸಿದ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಮಹತ್ವಾಕಾಂಕ್ಷೆಯ ಶಕ್ತಿ ಯೋಜನೆ
(ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ) ಇಂದು ಪ್ರಾರಂಭಿಸಿದ್ದು ಸಂತೋಷವಾಗಿದೆ ಈ ಯೋಜನೆಯಿಂದ ಉದ್ಯೋಗಸ್ಥ, ವ್ಯಾಪಾರಸ್ಥ ಮಹಿಳೆಯರಿಗೆ ಹೆಚ್ಚಿನ ಲಾಭ ಆಗುತ್ತೆ ಶಾಲಾ, ಕಾಲೇಜು ವಿದ್ಯಾರ್ಥಿನಿಯರಿಗೆ ತುಂಬಾ ಅನುಕೂಲವಾಗಲಿದೆ, ಮಹಿಳೆಯರಿಗೆ ಆರ್ಥಿಕವಾಗಿ ಈ ಯೋಜನೆ ಅನುಕೂಲ ಆಗಲಿದೆ. ರಾಜ್ಯದಲ್ಲಿ ಈ ಯೋಜನೆಗೆ ಚಾಲನೆ ನೀಡಿದ ನಮ್ಮ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರಿಗೆ, ಮತ್ತು ಉಪ ಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ ಅವರಿಗೆ ಹಾಗೂ ಇಂದು ಅಥಣಿ ಬಸ್ ನಿಲ್ದಾಣದಲ್ಲಿ ಶಕ್ತಿ ಯೋಜನೆಗೆ ಚಾಲನೆ ನೀಡಿದ ನಮ್ಮ ಶಾಸಕರಾದ ಲಕ್ಷ್ಮಣ ಸವದಿ ಹಾಗೂ ರಾಜು ಕಾಗೆ ಸರ್ ಇವರಿಗೆ ಹೃತ್ಪೂರ್ವಕ ಧನ್ಯವಾದಗಳು,
ಅರ್ಶಿಯಾ ಚಿಂಚಲಿ , ವಿಧ್ಯಾರ್ಥಿನಿ