ಅಥಣಿಯಲ್ಲಿ ಗುಡುಗು ಸಿಡಿಲು ಸಹಿತ ಗಾಳಿ ಮಿಶ್ರಿತ ಮಳೆಗಾಳಿಯ ರಭಸಕ್ಕೆ ಕಿತ್ತು ಬಿದ್ದ ಶಾಲೆಯ ಮೇಲ್ಚಾವಣಿಗಳು

oplus_2

ಅಥಣಿ :ಏ.20: ಸೂರ್ಯನ ಪ್ರಖರ ಬಿಸಿಲಿನ ತಾಪಕ್ಕೆ ಬಸವಳಿದ ಜನತೆಗೆ ಗುರುವಾರ ಸಾಯಂಕಾಲ ಸುರಿದ ಮಳೆಯಿಂದಾಗಿ ಜನರ ಮುಖದಲ್ಲಿ ಮಂದಹಾಸದ ಕಳೆ ಮೂಡಿಸಿದೆ. ಮೊದಲ ದಿನದ ಮಳೆಯೂ ಗುಡುಗು ಸಿಡಿಲು ರಬಸದ ಗಾಳಿಯೊಂದಿಗೆ ಆಗಮಿಸಿ ಅಲ್ಲಲ್ಲಿ ಅಪಾರ ಪ್ರಮಾಣದ ಹಾನಿ ಉಂಟುಮಾಡಿದೆ. ಅಥಣಿ ತಾಲೂಕಿನಲ್ಲಿ ಯಾವುದೇ ಪ್ರಾಣ ಹಾನಿ ಸಂಭಸಿಲ್ಲ, ಅಥಣಿ ಪಟ್ಟಣದಲ್ಲಿ ಮತ್ತು ಪಟ್ಟಣದ ಹೊರವಲಯದಲ್ಲಿ ಅನೇಕ ಗಿಡಮರಗಳು ಧರೆಗುರುಳಿದ್ದು, ವಿದ್ಯುತ್ ಕಂಬಗಳು ಕೂಡ ಮುರಿದು ಬಿದ್ದಿರುವುದರಿಂದ ಗುರುವಾರ ರಾತ್ರಿ ಸೇರಿದಂತೆ ಶುಕ್ರವಾರ ಇಡೀ ದಿನ ವಿದ್ಯುತ್ ಇಲ್ಲದೆ ಜನರು ಸಂಕಟ ಪಡುವಂತಾಯಿತು.
ಅಥಣಿ ಪಟ್ಟಣದ ಕೆಎಲ್ ಇ ಸಂಸ್ಥೆಯ ಸಿಎಸ್‍ಕೆ ಪ್ರೌಢ ಶಾಲೆಯ ಮೇಲ್ಚಾವಣಿಗಳು ಗಾಳಿಯ ರಬಸಕ್ಕೆ ಹಾರಿ ಹೋಗಿದ್ದು, ಅಪಾರ ಪ್ರಮಾಣದಲ್ಲಿ ಹಾನಿ ಸಂಭವಿಸಿದೆ. ಈಗ ಶಾಲೆಗಳಿಗೆ ರಜೆ ಇರುವುದರಿಂದ ಮತ್ತು ಶಾಲಾ ಆವರಣದಲ್ಲಿ ಯಾವುದೇ ಮಕ್ಕಳು ಮತ್ತು ಸಿಬ್ಬಂದಿ ಇಲ್ಲದೇ ಇರುವುದರಿಂದ ಹೆಚ್ಚಿನ ಅಪಾಯದಿಂದ ಪಾರಾದಂತಾಗಿದೆ. ಇದಲ್ಲದೆ ಅಥಣಿ ಕೆರೆಯ ಸುತ್ತಮುತ್ತಲು ಹಾಕಲಾಗಿದ್ದ ತಗಡಿನ ಸೀಟುಗಳ ತಡೆಗೋಡೆ ಗಾಳಿಯ ರಭಸಕ್ಕೆ ಕೆತ್ತುಬಿದ್ದಿದ್ದು, ಅಲ್ಲಲ್ಲಿ ತೋಟದ ವಸತಿಗಳಲ್ಲಿ ಅನೇಕ ರೈತಾಪಿ ಜನರ ಮತ್ತು ಬುಡಕಟ್ಟು ಜನಾಂಗದ ಗುಡಿಸಲುಗಳಿಗೆ ಬಾರಿ ಹಾನಿಯಾಗಿದೆ.
ಅಥಣಿ ಪಟ್ಟಣ ಸೇರಿದಂತೆ ಸುತ್ತಮುತ್ತಲು ಹೆಚ್ಚಿನ ಪ್ರಮಾಣದಲ್ಲಿ ಅಲಿಕಲ್ಲು ಮಳೆಯಾಗಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಅಲ್ಲಲ್ಲಿ ಸಾಧಾರಣ ಮಳೆಯಾಗಿದೆ. ಕಳೆದ ಒಂದು ತಿಂಗಳಿಂದ ಕುಡಿಯುವ ನೀರಿಗೆ ಆರಂಭವಾಗಿದ್ದ ಅಹಾಕಾರ ಈ ಮಳೆಯಿಂದ ಜನರಲ್ಲಿ ಸಂತಸ ಮೂಡಿಸಿದೆ. ಕುಡಿಯುವ ನೀರಿಗಾಗಿ ಅಲೆದಾಡುತ್ತಿದ್ದ ಜನತೆ ಅಂತೂ ಇಂತೂ ವರುಣದೇವ ನಮ್ಮ ಮೇಲೆ ಕೃಪೆ ತೋರಿದ ಎಂದು ನೆಮ್ಮದಿಯ ನಿಟ್ಟುಸಿರು ಬಿಡುತ್ತಾ ಇನ್ನಷ್ಟು ಮಳೆಗಾಗಿ ವರುಣದೇವನ ಪ್ರಾರ್ಥಿಸುತ್ತಿದ್ದಾರೆ.