
ಅಥಣಿ : ಆ.26:ರಾಜ್ಯದ ದೊಡ್ಡ ಜಿಲ್ಲೆ ಹಾಗೂ ಎರಡನೆಯ ರಾಜಧಾನಿ ಎಂದೇ ಹೆಗ್ಗಳಿಕೆಗೆ ಪಾತ್ರವಾದ ಬೆಳಗಾವಿ ಜಿಲ್ಲೆಯ ವಿಭಜನೆ ಯಾಗಬೇಕೆಂಬ ಕೂಗು ಹಲವು ವರ್ಷಗಳಿಂದ ಕೇಳಿ ಬರುತ್ತಿದ್ದು, ಇತ್ತೀಚಿಗೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು ಬೆಳಗಾವಿ ಜಿಲ್ಲೆಯನ್ನ ವಿಭಜನೆ ಮಾಡಿ ಚಿಕ್ಕೋಡಿ ಮತ್ತು ಗೋಕಾಕ್ ಜಿಲ್ಲೆಯನ್ನಾಗಿ ಮಾಡುವ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂಬ ಹೇಳಿಕೆಯಿಂದ ಅನೇಕ ತಾಲೂಕುಗಳಲ್ಲಿ ಜಿಲ್ಲೆಯ ರಚನೆ ಆಗಬೇಕೆಂಬ ಹೋರಾಟದ ಕೂಗು ಕೇಳಿ ಬರುತ್ತಿವೆ. ಇದಕ್ಕೆ ಅಥಣಿ ತಾಲೂಕಿನ ಜನತೆಯು ಹೊರತಾಗಿಲ್ಲ.
ಜಿಲ್ಲಾ ಕೇಂದ್ರ ಬೆಳಗಾವಿಯಿಂದ ಬಹಳಷ್ಟು ದೂರದಲ್ಲಿ ಅಂದರೆ ಸು.180 ಕಿಲೋಮಿಟರ್ ಅಂತರ ಹೊಂದಿದೆ. ಜನಸಾಮಾನ್ಯರು ಹಾಗೂ ಅಧಿಕಾರಿಗಳು ಜಿಲ್ಲಾ ಕಚೇರಿಗಳಿಗೆ ಹೋಗಬೇಕಾದರೆ ಸಂಚಾರದಲ್ಲಿಯೇ ಇಡೀ ದಿನ ಮುಗಿದು ಹೋಗುತ್ತದೆ. ಇದರಿಂದ ನಮಗೆ ಬಹಳಷ್ಟು ತೊಂದರೆ ಆಗುತ್ತಿದ್ದು ಅಥಣಿ, ಕಾಗವಾಡ, ರಾಯಭಾಗ ತಾಲೂಕುಗಳನ್ನ ಸೇರಿಸಿಕೊಂಡು ತಾಲೂಕಿನ ತೆಲಸಂಗ, ಅನಂತಪುರ, ಹಾರೂಗೇರಿ,ತೇರದಾಳ ಸೇರಿದಂತೆ ಪ್ರಮುಖ ಪಟ್ಟಣಗಳನ್ನು ತಾಲೂಕ ಕೇಂದ್ರಗಳೆಂದು ಘೋಷಿಸಿ ಅಥಣಿಯನ್ನ ಜಿಲ್ಲಾ ಕೇಂದ್ರವನ್ನಾಗಿ ರಚನೆ ಮಾಡಬೇಕು ಎಂಬ ಕೂಗು ಕೇಳಿ ಬರುತ್ತಿದೆ.
ಅಥಣಿ ಜಿಲ್ಲಾ ಹೋರಾಟ ಸಮಿತಿಯ ವತಿಯಿಂದ ಗುರುವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಠಾಧೀಶರು, ವಿವಿಧ ಸಂಘಟನೆಯ ಮುಖಂಡರು, ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು, ಹಾಲಿ ಮತ್ತು ಮಾಜಿ ಜನಪ್ರತಿನಿಧಿಗಳು ಅಭೂತಪೂರ್ವ ಬೆಂಬಲ ಸೂಚಿಸುವುದರ ಜೊತೆಗೆ ಅಥಣಿ ಜಿಲ್ಲಾ ರಚನೆಗೆ ಬೇಕಾದ ರೂಪರೇಷೆಗಳನ್ನು ತಯಾರಿಸಿಕೊಳ್ಳಲು ಅನೇಕ ಸಲಹೆ ಸೂಚನೆಗಳನ್ನು ನೀಡಿದರು.
ಪೂರ್ವಭಾವಿ ಸಭೆಯನ್ನು ಉದ್ಘಾಟಿಸಿದ ಮೋಟಗಿ ಮಠದ ಪ್ರಭು ಚನ್ನಬಸವ ಸ್ವಾಮೀಜಿ ಮಾತನಾಡಿ ಅಖಂಡವಾಗಿರುವ ಬೆಳಗಾವಿ ಜಿಲ್ಲೆಯ ವಿಭಜನೆ ಮಾಡುವ ಚಿಂತನೆಗಳು ನಡೆಯುತ್ತಿದ್ದು, ಜಿಲ್ಲಾ ಕೇಂದ್ರದಿಂದ ದೂರದಲ್ಲಿರುವ ಅಥಣಿ ತಾಲೂಕನ್ನು ಜಿಲ್ಲೆಯನ್ನಾಗಿ ಮಾಡುವ ನಿಟ್ಟಿನಲ್ಲಿ ಜಿಲ್ಲಾ ಹೋರಾಟ ಸಮಿತಿಯ ಸದಸ್ಯರ ಜೊತೆಗೆ ಪ್ರತಿಯೊಬ್ಬರೂ ಇಚ್ಛಾಶಕ್ತಿಯಿಂದ ಕೈಜೋಡಿಸಬೇಕು. ಮಠಾಧೀಶರಾಗಿ ನಾವು ಕೂಡ ನಿಮ್ಮ ಹೋರಾಟಕ್ಕೆ ಬೆಂಬಲ ನೀಡುವುದರ ಜೊತೆಗೆ ಹೋರಾಟದಲ್ಲಿ ಮುಂದೆ ನಿಂತು ಸರ್ಕಾರವನ್ನು ಒತ್ತಾಯಿಸುತ್ತೇವೆ ಎಂದು ಹೇಳಿದರು.
ಈ ವೇಳೆ ಶೆಟ್ಟರ ಮಠದ ಮರುಳುಸಿದ್ದ ಮಹಾಸ್ವಾಮಿಗಳು ಮಾತನಾಡಿದರು.
ಮಾಜಿ ಶಾಸಕ ಶಹಾಜಹಾನ ಡೊಂಗರಗಾಂವ ಮಾತನಾಡಿ ಅಥಣಿ ಭೌಗೋಳಿಕವಾಗಿ ಮತ್ತು ಜನಸಂಖ್ಯೆ ಆಧಾರವಾಗಿ, ವ್ಯಾಪಾರ ವಹಿವಾಟು, ಕೈಗಾರಿಕೆಗಳು ಮತ್ತು ಶಿಕ್ಷಣ ಕೇಂದ್ರಗಳು ಸೇರಿದಂತೆ ಇನ್ನಿತರ ಕ್ಷೇತ್ರಗಳಲ್ಲಿ ಅಭಿವೃದ್ಧಿ ಹೊಂದುತ್ತಿದ್ದು, ಜಿಲ್ಲಾ ಕೇಂದ್ರದಿಂದ ಅತಿ ದೂರದಲ್ಲಿರುವ ನಮ್ಮ ಅಥಣಿ ದೊಡ್ಡ ತಾಲೂಕು ಇದಾಗಿದೆ. ಅಥಣಿಯನ್ನು ಜಿಲ್ಲಾ ಕೇಂದ್ರವನ್ನಾಗಿ ರಚನೆ ಮಾಡಬೇಕು ಎಂಬ ಹಕ್ಕು, ಒತ್ತಾಯವನ್ನು ಸರ್ಕಾರಕ್ಕೆ ಮಾಡುವುದು ಯೋಗ್ಯವಾಗಿದ್ದು, ಜಿಲ್ಲಾ ಹೋರಾಟ ಸಮಿತಿ ಸದಸ್ಯರು ಕೈಗೊಳ್ಳುವ ನಿರ್ಣಯಗಳಿಗೆ ನನ್ನ ಸಂಪೂರ್ಣ ಬೆಂಬಲವಿದೆ. ತಮ್ಮ ಹೋರಾಟಕ್ಕೆ ನಮ್ಮ ಸಹಾಯ ಸಹಕಾರ ಯಾವತ್ತೂ ಇರುತ್ತದೆ ಎಂದು ಹೇಳಿದರು.
ಈ ವೇಳೆ ರೈತ ಸಂಘದ ಅಧ್ಯಕ್ಷ ಮಹಾದೇವ ಮಡಿವಾಳ, ನ್ಯಾಯವಾದಿ ಸುನೀಲ ಸಂಕ, ಎಲ್ ಡಿ ಹಳಿಂಗಳಿ, ದಲಿತ ಮುಖಂಡರಾದ ರಾಜೇಂದ್ರ ಐಹೊಳಿ, ಸಿದ್ದಾರ್ಥ್ ಸಿಂಗೆ, ಹಿರಿಯ ಪತ್ರಕರ್ತ ಸಿ. ಎ ಇಟ್ನಾಳಮಠ, ಸಾಹಿತಿ ಅಪ್ಪಾಸಾಹೇಬ ಅಲಿಬಾದಿ, ಶಶಿಧರ್ ಬರ್ಲಿ, ವಿಜಯ ಹುದ್ದಾರ, ಅಣ್ಣಾಸಾಬ ತೆಲಸಂಗ, ಮಾಜಿ ಸೈನಿಕ ಡಿ ಎಸ್ ಮಗದುಮ್ಮ ಸೇರಿದಂತೆ ಇನ್ನಿತರರು ತಮ್ಮ ಅಭಿಪ್ರಾಯ ತಿಳಿಸಿದರು. ಅಥಣಿ ಜಿಲ್ಲಾ ಹೋರಾಟ ಸಮಿತಿಯ ಅಧ್ಯಕ್ಷ ಪ್ರಶಾಂತ ತೋಡ್ಕರ ಸ್ವಾಗತಿಸಿದರು.ದೇವೇಂದ್ರ ಬಿಸ್ವಾಗರ ವoದಿಸಿದರು.
ಧಾರ್ಮಿಕ, ಆಧ್ಯಾತ್ಮಿಕ ಕ್ಷೇತ್ರವಾಗಿರುವ ಅಥಣಿ ಭೌಗೋಳಿಕವಾಗಿ ಸಾಕಷ್ಟು ವಿಸ್ತೀರ್ಣ ಹೊಂದಿದೆ. ರಾಜ್ಯದ ಮೊದಲ ಪುರಸಭೆ ಸ್ಥಾಪನೆಯಾಗಿದ್ದು ಇಲ್ಲಿಯೇ. ಆಡಳಿತಾತ್ಮಕ ಮತ್ತು ಅಭಿವೃದ್ಧಿ ದೃಷ್ಟಿಯಿಂದ ಅಥಣಿ ಜಿಲ್ಲೆಯಾಗಿ ರಚನೆ ಆಗಬೇಕು. ಹೋರಾಟ ಸಮಿತಿಯ ಸದಸ್ಯರು ಕೈಕೊಳ್ಳುವ ಹೋರಾಟಕ್ಕೆ ಗಚ್ಚಿನ ಮಠವು ಯಾವತ್ತೂ ಸಹಾಯ ಸಹಕಾರ ನೀಡುತ್ತದೆ
ಶಿವಬಸವ ಸ್ವಾಮೀಜಿ.
ಸುಕ್ಷೇತ್ರ ಗಚ್ಚಿನ ಮಠ ಅಥಣಿ