ಅತ್ಯುತ್ತಮ ಸಂಶೋಧಕ ಮಾಲೂರು ಡಾ.ಗಿರೀಶ್

ಕೋಲಾರ,ನ.೯:ಪ್ರತಿಷ್ಠಿತ ಅಮೆರಿಕಾದ ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯವು ಬಿಡುಗಡೆ ಮಾಡಿರುವ ೨೦೨೨ ವರ್ಷದ ಅತ್ಯುತ್ತಮ ಸಂಶೋಧಕರ ಪಟ್ಟಿಯಲ್ಲಿ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಡಾ.ಎಸ್.ಗಿರೀಶ್ ಕುಮಾರ್ ರವರು ಸ್ಥಾನ ಗಳಿಸಿದ್ದಾರೆ. ಜಾಗತಿಕ ಮಟ್ಟದಲ್ಲಿ ನಡಯುವ ಈ ಸಮೀಕ್ಷೆಯು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಕಟಿಸಲಾದ ಸಂಶೋಧನಾ ಲೇಖನವನ್ನು ಮತ್ತು ಅದರ ಉಲ್ಲೇಖಗಳ ಗುಣಮಟ್ಟವನ್ನು ಗಮನದಲ್ಲಿ ಇಟ್ಟುಕೊಂಡು ಪಟ್ಟಿಯನ್ನು ಸಿದ್ಧಪಡಿಸುತ್ತವೆ.
ಇವರು ೪೪ ಸಂಶೋಧನಾ ಲೇಖನವನ್ನು ಪ್ರಟಕಟಿಸಿದ್ದಾರೆ ಹಾಗೂ ಅವುಗಳು ಸುಮಾರು ೬೬೦೦ ಹೆಚ್ಚು ಬಾರಿ ವಿವಿಧ ಲೇಖನಗಳಲ್ಲಿ ಉಲ್ಲೇಖಗೊಂಡಿವೆ. ಗಿರೀಶ್ ಕುಮಾರ್ ರವರು ಸತತ ಮೂರನೇ ಬಾರಿ ಈ ಪಟ್ಟಿಯಲ್ಲಿ ೫೫೮೯೪ (೨೦೧೯), ೧೬೬೪೫೫ (೨೦೨೦) ಮತ್ತು ೬೮೩೧೩ (೨೦೨೨) ಶ್ರೇಣಿಯನ್ನು ರಾಸಾಯನಿಕ ಶಾಸ್ತ್ರ ವಿಭಾಗದಲ್ಲಿ ಪಡಿದಿದ್ದಾರೆ ಎಂಬುದು ಗಮನಾರ್ಹ.
ಅಷ್ಟೇ ಅಲ್ಲದೆ, ಇವರು ರಾಷ್ಟ್ರ ಹಾಗು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುಮಾರು ೧೭೦೦ಕ್ಕೂ ಹೆಚ್ಚು ಸಂಶೋಧನಾ ಲೇಖನವನ್ನು ವಿವಿಧ ನಿಯತಕಾಲಿಕೆಗಳಲ್ಲಿ ಪರಿಶೀಲಿಸಿದ್ದಾರೆ ಮತ್ತು ಪ್ರತಿಷ್ಠಿತ ಪ್ರಕಾಶಕಗಳಲ್ಲಿ ಸಹವರ್ತಿ ಸಂಪಾದಕರಾಗಿಯು ಸೇವೆ ಸಲ್ಲಿಸುತ್ತಿದ್ದಾರೆ.
ಇವರು ಮಾಲೂರು ತಾಲೂಕಿನ ಸ್ವಾಮಿ ವಿವೇಕಾನಂದ ಶಾಲೆಯಲ್ಲಿ ಹತ್ತನೇ ತರಗತಿವರೆಗೂ ಓದಿ, ನಂತರ ತಮ್ಮ ಸ್ನಾತಕೋತ್ತರ ಹಾಗು ಪಿಎಚ್ಡಿ ಪದವಿಯನ್ನು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಮುಗಿಸಿ, ಡಾ. ಕೋಟೇಶ್ವರ ರಾವ್ (ಭೌತಶಾಸ್ತ್ರ ವಿಭಾಗ) ರವರ ಮಾರ್ಗದರ್ಶನದಲ್ಲಿ ಸೌರ ಕೋಶಗಳ ಬಗ್ಗೆ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಸಂಶೋಧನೆಯನ್ನು ಮಾಡಿದ್ದಾರೆ.
ಪ್ರಸ್ತುತವಾಗಿ ಇವರು ಸೆಮಿಕಂಡಕ್ಟರ್ ನ್ಯಾನೋ ಮೆಟ್ರಿಕ್ ಕಣಗಳನ್ನು ಬಳಸಿಕೊಂಡು ಕಲುಷಿತ ನೀರನ್ನು ಸಂಸ್ಕರಣೆ ಮಾಡುವ ಸಂಶೋದನೆಯಲ್ಲಿ ತಮ್ಮನು ತೊಡಗಿಸಿಕೊಂಡಿದ್ದಾರೆ.