ಅತ್ಯುತ್ತಮ ಮಾನ್ವಿ ಠಾಣೆ ಅರಗ ಅಭಿನಂದನೆ

ಬೆಂಗಳೂರು,ನ.೨೧- ರಾಜ್ಯದ ರಾಯಚೂರು ಜಿಲ್ಲೆಯ ಮಾನ್ವಿ ಪೊಲೀಸ್ ಠಾಣೆ ದೇಶದಲ್ಲೇ ಅತ್ಯುತ್ತಮ ೧೦ ಪೊಲೀಸ್ ಠಾಣೆಗಳಲ್ಲಿ ಒಂದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಈ ಠಾಣೆಯ ಪೊಲೀಸ್ ಸಿಬ್ಬಂದಿಗಳಿಗೆ ಅಭಿನಂದನೆ ಹೇಳಿದ್ದಾರೆ.
ಕೇಂದ್ರ ಗೃಹ ಇಲಾಖೆ ಮಾನ್ವಿ ಪೊಲೀಸ್ ಠಾಣೆ ದೇಶದ ಆತ್ಯುತ್ತಮ ಪೊಲೀಸ್ ಠಾಣೆಗಳಲ್ಲಿ ೫ನೇ ಸ್ಥಾನ ಪಡೆದಿರುವ ಬಗ್ಗೆ ಘೋಷಣೆ ಮಾಡಿದ್ದು, ಇಂದು ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ರಾಯಚೂರು ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಅವರೊಗೆ ದೂರವಾಣಿ ಕರೆ ಮಾಡಿ ಮಾನ್ಬಿ ಪೊಲೀಸ್ ಠಾಣೆ ೫ನೇ ಸ್ಥಾನ ಗಳಿಸಿರುವುದ ನಮ್ಮೆಲ್ಲರಿಗೂ ಹೆಮ್ಮೆ ತಂದಿದೆ.
ಇದಕ್ಕೆ ಕಾರಣರಾದ ಎಲ್ಲ ಪೊಲೀಸ್ ಸಿಬ್ಬಂದಿಗಳಿಗೆ ಅಭಿನಂದನೆ ಹೇಳಿದರು.
ರಾಜ್ಯಸರ್ಕಾರವೂ ಪೊಲೀಸ್ ಠಾಣೆಗಳು ಹೆಚ್ಚು ಜನಸ್ನೇಹಿಯಾಗುವಂತೆ ಕಾರ್ಯನಿರ್ವಹಿಸಲು ಎಲ್ಲ ಪ್ರಯತ್ನಗಳನ್ನೂ ಮಾಡುತ್ತಿದ್ದು, ಮಾನ್ವಿ ಪೊಲೀಸ್ ಠಾಣೆ ಸಿಬ್ಬಂದಿಗಳು ಇತರ ಪೊಲೀಸ್ ಠಾಣೆಯ ಸಿಬ್ಬಂದಿಗಳಿಗೆ ಮಾದರಿ ಎಂದು ಅವರು ಹೇಳಿದರು.
ಸಾರ್ವಜನಿಕರೊಂದಿಗೆ ಪೊಲೀಸರ ಸಂಪರ್ಕ, ಕಟ್ಟಡದ ಸುವ್ಯವಸ್ಥೆ, ಸಿಬ್ಬಂದಿಗಳ ಶಿಸ್ತು, ಕಾರ್ಯಾಧ್ಯಕ್ಷತೆ, ಕಡತ ವಿಲೇವಾರಿ, ಮೂಲ ಸೌಕರ್ಯ, ಅಪರಾಧ ತಡೆಗೆ ಕೈಗೊಂಡ ಕ್ರಮಗಳು, ಸಂಚಾರ ಸುರಕ್ಷತೆ, ಅಪಘಾತ ತಡೆಗೆ ಪೊಲೀಸರ ಕ್ರಮ ಇವೆಲ್ಲ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಮಾನ್ವಿ ಪೊಲೀಸ್ ಠಾಣೆಗೆ ದೇಶದಲ್ಲೇ ಅತ್ಯುತ್ತಮ ಠಾಣೆಗಳ ಪೈಕಿ ೫ನೇ ಸ್ಥಾನವನ್ನು ನೀಡಲಾಗಿದೆ.
ರಾಜ್ಯಸರ್ಕಾರವು ಎಲ್ಲ ಪೊಲೀಸ್ ಠಾಣೆಗಳಿಗೂ ಸ್ವಂತ ಕಟ್ಟಡಗಳನ್ನು ಹೊಂದಲು ಅನುಕೂಲವಾಗುವಂತೆ ೨೦೦ ಕೋಟಿ ರೂ. ವೆಚ್ಚದಲ್ಲಿ ೧೧೩ ಪೊಲೀಸ್ ಠಾಣೆಗಳ ಕಟ್ಟಡಗಳನ್ನು ನಿರ್ಮಿಸುವುದರ ಜತೆಗೆ ಹಾಲಿ ಇರುವ ಕೆಲ ಪೊಲೀಸ್ ಠಾಣೆಗಳನ್ನು ಮೇಲ್ದರ್ಜೆಗೇರಿಸುವ ಕೆಲಸವನ್ನು ನಡೆಸಿದೆ ಎಂದು ಸಚಿವರು ಹೇಳಿ ಸದ್ಯದಲ್ಲೇ ಮಾನ್ವಿ ಪೊಲೀಸ್ ಠಾಣೆ ಸಿಬ್ಬಂದಿಗಳನ್ನು ಭೇಟಿ ಮಾಡುವುದಾಗಿ ತಿಳಿಸಿದರು.