ಅತ್ಯುತ್ತಮ ಪತ್ರಕರ್ತ ಭಾಷಾಖಾನಗೆ ಸನ್ಮಾನ

ಹುಬ್ಬಳ್ಳಿ .ನ. 6 : ಅನ್ಯ ಭಾಷೆಗಳ ಮೋಹದಲ್ಲಿ ಕರ್ನಾಟಕದ ಮಾತೃಭಾಷೆ ಕನ್ನಡವನ್ನು ಕಡೆಗಣಿಸುವುದು ಸರಿಯಲ್ಲ. ಕರ್ನಾಟಕದಲ್ಲಿ ಮಾತೃಭಾಷೆಗೆ ಮೊದಲ ಆಧ್ಯತೆ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ, ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಹೇಳಿದರು.
ವಿಶ್ವ ಕನ್ನಡ ಬಳಗದ ವತಿಯಿಂದ ಜೆಸಿ ನಗರದ ಅಕ್ಕನ ಬಳಗದಲ್ಲಿ ಇತ್ತೀಚೆಗೆ ಹಮ್ಮಿಕೊಳ್ಳಲಾಗಿದ್ದ ಕನ್ನಡ ರಾಜ್ಯೋತ್ಸವದ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ವಿವಿಧ ರಂಗಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಮಹನೀಯರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ನಾಡು, ನುಡಿ ನೆಲ, ಜಲಕ್ಕಾಗಿ ಕಳೆದ 45 ವರ್ಷಗಳಿಂದ ಹೋರಾಡುತ್ತ ಬಂದು, ಕನ್ನಡಿಗರ ಮನ ಮನೆಗಳಲ್ಲಿ ಗೌರವ ಸ್ಥಾನ ಪಡೆದಿರುವ ವಿಶ್ವ ಕನ್ನಡ ಬಳಗ, ಪ್ರತಿ ವರ್ಷದಂತೆ ನಾಡಿಗಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮೆರೆದ ಸಾಧಕರನ್ನು ಗುರುತಿಸಿ , ಅವರನ್ನು ಕರ್ನಾಟಕ ರಾಜ್ಯೋತ್ಸವ ದಿನದಂದು ಗೌರವಿಸಿ, ಸನ್ಮಾನಿಸುತ್ತ ಬಂದಿರುವುದು ಹೆಮ್ಮೆಯಾಗಿದೆ ಹರ್ಷ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಸಾಮಾಜಿಕ ಕಳಕಳಿಯ ಬರಹ ವಿಭಾಗದಲ್ಲಿ ಪತ್ರಕರ್ತ ಎಸ್. ಪಿ. ಭಾಷಾಖಾನ್ ಅವರನ್ನು “ಅತ್ಯುತ್ತಮ ಪತ್ರಕರ್ತ” ಎಂದು ಗೌರವಿಸಿ, ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ವಿಧಾನ ಪರಿಷತ್ ಸಚಿವರು, ವಿಧಾನ ಪರಿಷತ್ ಶಾಸಕರಾದ ಬಸವರಾಜ ಹೊರಟ್ಟಿ ವಹಿಸಿದ್ದರು.
ಅತಿಥಿಗಳಾಗಿ ಸಾಬೂನು ಹಾಗೂ ಮಾರ್ಜಲ ನಿಂ. ಕಂ ನಿರ್ದೇಶಕರಾದ ಮಲ್ಲಿಕಾರ್ಜುನ ಸಾಹುಕಾರ, ಶಾಂತಿನಿಕೇತನ ಪ್ರೌಢ ಶಾಲೆ ಪ್ರಾಂಶುಪಾಲರಾದ ಕ್ಯಾಥರಿನ್ ದಿನೇಶ, ಇಂದು ಸಂಜೆ ಪತ್ರಿಕೆ ವ್ಯವಸ್ಥಾಪಕ ಸಂಪಾದಕರಾದ ಪ್ರೇಮಾ ಹೂಗಾರ, ಬಿರಪ್ಪ ಖಂಡೇಕರ, ಅಮೀತ ಮಹಾಜನ ಸೇರಿದಂತೆ ಅನೇಕ ಗಣ್ಯಮಾನ್ಯರು ಪಾಲ್ಗೊಂಡಿದ್ದರು.
ವಿಶ್ವ ಕನ್ನಡ ಬಳಗದ ಸಂಸ್ಥಾಪಕ ಅಧ್ಯಕ್ಷರಾದ ಸದಾಶಿವ ಚೌಶೆಟ್ಟಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ದತ್ತೂಸಾ ಕಲಬುರ್ಗಿ ವಂದನಾರ್ಪಣೆ ಸಲ್ಲಿಸಿದರು.