ಅತ್ಯಾಚಾರ, ಹತ್ಯೆ, ದೌರ್ಜನ್ಯದಂತಹ ಪ್ರಕರಣ ಖಂಡಿಸಿ ಮಡಿವಾಳ ಸಮುದಾಯದಿಂದ ಪ್ರತಿಭಟನೆ


ಸಂಜೆವಾಣಿ ವಾರ್ತೆ
ದಾವಣಗೆರೆ.ಮೇ.೨೦: ಹುಬ್ಬಳ್ಳಿ ನಗರದ ನೇಹಾ ಹಿರೇಮಠ್, ಅಂಜಲಿ ಅಂಬಿಗರ ಅವರನ್ನು ಹತ್ಯೆಗೈದ ಆರೋಪಿಗಳನ್ನು ಹಾಗೂ ಕಲಬುರ್ಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ದೇವನೂರು ಗ್ರಾಮದ ಅರ್ಜುನಪ್ಪ ಹಣಮಂತನ ಮೇಲೆ ಹಲ್ಲೆ ಮಾಡಿರುವ ಹಲ್ಲೆಕೋರರನ್ನು ಗಲ್ಲು ಶಿಕ್ಷೆಗೆ ಗುರಿ ಪಡಿಸಲು ಒತ್ತಾಯಿಸಿ ದಾವಣಗೆರೆ ಜಿಲ್ಲಾ ಮಡಿವಾಳ ಮಾಚಿದೇವ ಸಂಘದ ಆಶ್ರಯದಲ್ಲಿ ಮಡಿವಾಳ ಸಮಾಜ ಬಾಂಧವರು ಬೃಹತ್ ಪ್ರತಿಭಟನೆ ನಡೆಸಿದರು. ನಗರದ ಜಯದೇವ ವೃತ್ತದಿಂದ ದಾವಣಗೆರೆ ಉಪ ವಿಭಾಗಾಧಿಕಾರಿ ಕಚೇರಿವರೆಗೆ ಮೆರವಣಿಗೆ ಮೂಲಕ ತೆರಳಿ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.ಈ ವೇಳೆ ಸಮಾಜದ ಕಾರ್ಯಾಧ್ಯಕ್ಷರಾದ ಹೆಚ್.ಜಿ ಉಮೇಶ್ ಮಾತನಾಡಿ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕಾನೂನು ಸುವ್ಯವಸ್ಥೆ ಹದಗೆಡುತ್ತಿದ್ದು, ಅತ್ಯಾಚಾರ, ಕೊಲೆಯಂತಹ ಪ್ರಕರಣಗಳು ಹೆಚ್ಚಾಗುತ್ತಿವೆ. ಅದರಲ್ಲೂ ಮಹಿಳೆಯರ ಮೇಲಿನ ದೌರ್ಜನ್ಯ, ಹತ್ಯೆ ಹೆಚ್ಚಾಗುತ್ತಿವೆ. ಪ್ರೀತಿಯ ಹೆಸರಿನಲ್ಲಿ ಹುಬ್ಬಳ್ಳಿಯ ನೇಹಾ ಹಿರೇಮಠ್ ಅವರನ್ನು ಕಾಲೇಜು ಆವರಣದಲ್ಲಿ ದುಷ್ಕರ್ಮಿ ಫಯಾಜ್ ಹಲವಾರು ಬಾರಿ ಚಾಕುವಿನಿಂದ ಇರಿದುಕೊಲೆ ಮಾಡಿದ್ದು, ಇಡೀ ರಾಜ್ಯವೇ ಭಯಪಡುವಂತಾಗಿದೆ ಎಂದರು.