ಅತ್ಯಾಚಾರ ಸಂತ್ರಸ್ತೆ ಭೇಟಿಗೆ ನಕಾರ ಸ್ವಾತಿ ಪ್ರತಿಭಟನೆ

ನವದೆಹಲಿ,ಅ.೨೨-ಅತ್ಯಾಚಾರ ಸಂತ್ರಸ್ತೆ ಮತ್ತು ಆಕೆಯ ತಾಯಿಯನ್ನು ಭೇಟಿಯಾಗದಂತೆ ಪೊಲೀಸರು ತಡೆದಿರುವುದನ್ನು ವಿರೋಧಿಸಿ ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಲಿವಾಲ್ ಪ್ರತಿಭಟನೆ ನಡೆಸಿದರು.
ಅತ್ಯಾಚಾರ ಸಂತ್ರಸ್ತೆಯನ್ನು ಭೇಟಿಯಾಗದಂತೆ ಪೊಲೀಸರು ತಡೆದ ನಂತರ ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆ ಆಸ್ಪತ್ರೆಯ ನೆಲದ ಮೇಲೆ ಮಲಗಿದ್ದರು.
ಪೊಲೀಸರು ತನ್ನೊಂದಿಗೆ ಅನುಚಿತವಾಗಿ ವರ್ತಿಸಿದರು ಮತ್ತು ಸಂತ್ರಸ್ತ ಬಾಲಕಿ ಅಥವಾ ಆಕೆಯ ತಾಯಿಯನ್ನು ಭೇಟಿಯಾಗಲು ಅವಕಾಶ ನೀಡಲಿಲ್ಲ ಎಂದು ಅವರು ಆರೋಪಿಸಿದ್ದಾರೆ.
ಪೋಲಿಸರು ತಮ್ಮಿಂದ ಏನು ಮುಚ್ಚಿಡಲು ಪ್ರಯತ್ನಿಸುತ್ತಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ ಎಂದು ಹೇಳಿದರು. ಸಂತ್ರಸ್ತ ಬಾಲಕಿಯನ್ನು ಭೇಟಿಯಾಗಲು ಅವಕಾಶ ನೀಡುವಂತೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ಆಯೋಗಕ್ಕೆ (ಎನ್‌ಸಿಪಿಸಿಆರ್) ಮನವಿ ಮಾಡಿರುವುದಾಗಿ ಅವರು ತಿಳಿಸಿದ್ದಾರೆ.
ಸಂತ್ರಸ್ತ ಬಾಲಕಿಯ ತಾಯಿಯನ್ನು ಭೇಟಿಯಾಗದಂತೆ ಎನ್‌ಸಿಪಿಸಿಆರ್ ಮುಖ್ಯಸ್ಥರು ಏಕೆ ತಡೆಯುತ್ತಿದ್ದಾರೆ ಎಂದು ಸ್ವಾತಿ ಪ್ರಶ್ನಿಸಿದ್ದಾರೆ. ನಿನ್ನೆ ಮಧ್ಯಾಹ್ನದಿಂದ ಆಸ್ಪತ್ರೆಯಲ್ಲಿರುವ ಸಂತ್ರಸ್ತೆಯನ್ನು ಭೇಟಿಯಾಗಲು ಪ್ರಯತ್ನಿಸುತ್ತಿದ್ದು ಆದರೆ ಪೊಲೀಸರು ಭೇಟಿಗೆ ಅವಕಾಶ ನೀಡುತ್ತಿಲ್ಲ, ಸಂತ್ರಸ್ತೆ ಭೇಟಿ
ನಂತರವೇ ಅಲ್ಲಿಂದ ತೆರಳುವುದಾಗಿ ಸ್ಪಷ್ಟಪಡಿಸಿದರು. ಏತನ್ಮಧ್ಯೆ, ದೆಹಲಿ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಪ್ರೇಮೋದಯ್ ಖಾಖಾ ಅವರು ಬಾಲಕಿಯ ಮೇಲೆ ಹಲವಾರು ಬಾರಿ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ಸಂತ್ರಸ್ತೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆರೋಪಿಯ ಪತ್ನಿ ಸೀಮಾ ರಾಣಿ ಗರ್ಭನಿರೋಧಕ ಮಾತ್ರೆ ನೀಡಿ ಬಾಲಕಿ ಗರ್ಭಪಾತಕ್ಕೆ ಕಾರಣಳಾಗಿದ್ದಾಳೆ. ಈ ಪ್ರಕರಣದಲ್ಲಿ ಖಾಖಾ ಪತ್ನಿಯನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.