ಅತ್ಯಾಚಾರ, ವಂಚನೆ ಪ್ರಕರಣ: ಆರೋಪಿ ಸೆರೆ


ಮಂಗಳೂರು, ಮಾ.೨೬- ಉದ್ಯಮಿಯನ್ನು ಮತಾಂತರಿಸಿ ಲವ್ ಜಿಹಾದ್ ಮಾಡಲಾಗಿದೆ ಎಂದು ಆರೋಪಿಸಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿ ಓರ್ವನನ್ನು ಮಂಗಳೂರು ಪೊಲೀಸರು ಬಂಧಿಸಿರುವುದಾಗಿ ಪೊಲೀಸ್ ಆಯುಕ್ತ ಶಶಿಕುಮಾರ್ ಎನ್. ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಬಂಧಿತನನ್ನು ಬೋಳಾರದ ನಿವಾಸಿ, ಮಂಗಳೂರಿನ ಉದ್ಯಮಿ ಬಿ.ಎಸ್.ಗಂಗಾಧರ (೬೨) ಎಂದು ಗುರುತಿಸಲಾಗಿದೆ. ಈತನ ವಿರುದ್ಧ ಕದ್ರಿ ಠಾಣೆಯಲ್ಲಿ ಅತ್ಯಾಚಾರ, ವಂಚನೆ ಪ್ರಕರಣ ದಾಖಲಾಗಿದೆ ಎಂದು ಹೇಳಿದರು. ಬಂಧಿತ ಆರೋಪಿಗೆ ಮೂರು ಮದುವೆಯಾಗಿದ್ದು, ಇನ್ನೂ ಹಲವು ಮಹಿಳೆಯರನ್ನು ವಂಚಿಸಿರುವ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಗಂಗಾಧರ ಮದುವೆಯಾಗಿದ್ದಾನೆ ಎನ್ನಲಾಗಿರುವ ೨೨ ವರ್ಷದ ಯುವತಿಯೇ ಕದ್ರಿ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರದ ಪ್ರಕರಣ ದಾಖಲಿಸಿದ್ದಾರೆ. ಆ ಹಿನ್ನೆಲೆಯಲ್ಲಿ ಗಂಗಾಧರನನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು. ಆರೋಪಿಯು ಯುವತಿಯನ್ನು ಕೆಲವು ತಿಂಗಳ ಹಿಂದೆ ತನ್ನ ಮಿತ್ರರಾದ ಸೈಯದ್, ಶಬೀರ್ ಮತ್ತು ಮುಹಮ್ಮದ್ ಎಂಬವರೊಂದಿಗೆ ಸಂಪರ್ಕಿಸಿ, ತನ್ನ ಹೆಸರು ಮುಹಮ್ಮದ್ ಅನೀಸ್ ಎಂದು ಪರಿಚಯಿಸಿಕೊಂಡಿದ್ದ. ೨೨ರ ಹರೆಯದ ಯುವತಿ ಮೂಲತಃ ಪುತ್ತೂರಿನವಳಾಗಿದ್ದು, ಹಿಂದೆ ಮದುವೆಯಾಗಿ ಗಂಡ ಅಪಘಾತದಲ್ಲಿ ಮೃತಪಟ್ಟಿದ್ದು, ಒಂದು ಮಗುವಿದೆ. ಆತನ ಮಿತ್ರರೂ ಆಕೆಯನ್ನು ಅನೀಸ್‌ಗೆ ತರಕಾರಿ ವ್ಯಾಪಾರ ಇದೆ. ಕುಟುಂಬದ ಜವಾಬ್ದಾರಿಯ ಒತ್ತಡದಿಂದ ಮದುವೆಯಾಗಿರಲಿಲ್ಲ. ಈಗ ವಿವಾಹವಾಗುತ್ತಿದ್ದಾನೆ, ನಿನ್ನ ಬದುಕಿಗೂ ಆತ ಆಸರೆಯಾಗಲಿದ್ದಾನೆ ಎಂದು ನಂಬಿಸಿದ್ದರು ಎಂದು ಆಯುಕ್ತರು ಮಾಹಿತಿ ನೀಡಿದರು. ಅದರಂತೆ ಕಳೆದ ವರ್ಷ ಡಿಸೆಂಬರ್ ೨೧ರಂದು ಇಬ್ಬರ ವಿವಾಹ ನಡೆದಿತ್ತು. ಆದರೆ ಆ ಬಳಿಕ ಕೆಲವೇ ದಿನಗಳಲ್ಲಿ ಮಹಿಳೆಗೆ ಈ ವ್ಯಕ್ತಿ ತನ್ನ ಧರ್ಮದವನಲ್ಲ. ಅಲ್ಲದೆ, ಬೇರೆ ಅಕ್ರಮ ಸಂಬಂಧಗಳೂ ಇವೆ ಎನ್ನುವುದು ಗೊತ್ತಾದ ನಂತರ ಆತನಿಂದ ಅಂತರ ಕಾಯ್ದುಕೊಳ್ಳಲು ಯತ್ನಿಸಿದ್ದಾರೆ. ಆದರೆ ಗಂಗಾಧರ ಅಲಿಯಾಸ್ ಅನೀಸ್ ಬಲಾತ್ಕಾರವಾಗಿ ಅತ್ಯಾಚಾರ ನಡೆಸಿದ್ದಾನೆ. ಎರಡು ತಿಂಗಳ ಗರ್ಭಿಣಿಯಾದ ನಂತರ ಲೇಡಿಗೋಶನ್‌ಗೆ ಕರೆದೊಯ್ದು ಮಾತ್ರೆ ತಿನ್ನಿಸಿ ಗರ್ಭಪಾತ ಮಾಡಿಸಿದ್ದಾನೆ ಎಂದು ಮಹಿಳೆ ದೂರು ನೀಡಿರುವುದಾಗಿ ಪೊಲೀಸ್ ಆಯುಕ್ತರು ತಿಳಿಸಿದರು. ಇಷ್ಟೆಲ್ಲ ಆದ ನಂತರ ಮಾ.೨೩ರಂದು ಗಂಗಾಧರನ ಮೊದಲ ಪತ್ನಿ ಯಶೋಧಾ ತನ್ನ ಗಂಡನನ್ನು ಯಾರೋ ಅಪಹರಿಸಿ ಬಲವಂತವಾಗಿ ಮತಾಂತರಗೊಳಿಸಿ ವಿವಾಹ ನಡೆಸಿದ್ದಾರೆ ಎಂದು ಪಾಂಡೇಶ್ವರ ಠಾಣೆಗೆ ದೂರು ನೀಡಿದ್ದರು. ಪೊಲೀಸರು ಗಂಗಾಧರನನ್ನು ಪತ್ತೆ ಮಾಡಿ ಕರೆಯಿಸಿ ವಿಚಾರಣೆ ನಡೆಸಿದಾಗ ವಿಚಾರಗಳು ಬಯಲಾಗಿವೆ. ಈಗ ಆತನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿದ್ದು, ದಸ್ತಗಿರಿ ಮಾಡಲಾಗಿದೆ. ಇದು ಲವ್ ಜಿಹಾದ್ ಪ್ರಕರಣ ಎಂದೆಲ್ಲ ಸಾಮಾಜಿಕ ಜಾಲತಾಣದಲ್ಲಿ ಗುಲ್ಲೆದ್ದ ಕಾರಣ, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಪತ್ತೆ ಮಾಡಿದ್ದೇವೆ ಎಂದೂ ಆಯುಕ್ತರು ತಿಳಿಸಿದರು. ಈ ಸಂದರ್ಭ ಡಿಸಿಪಿ ಹರಿರಾಂ ಶಂಕರ್ ಸುದ್ದಿಗೋಷ್ಠಿಯಲ್ಲಿದ್ದರು.