ಅತ್ಯಾಚಾರ ಯತ್ನ ಖಂಡಿಸಿ ಪ್ರತಿಭಟನೆ

ಕಲಬುರಗಿ,ಜೂ.10-ನಗರದ ಜಿಮ್ಸ್ ಆಸ್ಪತ್ರೆಯ ಕೋವಿಡ್ ಕೇಂದ್ರದಲ್ಲಿ ಮಹಿಳೆಯೊಬ್ಬರ ಮೇಲೆ ನಡೆದ ಅತ್ಯಾಚಾರ ಯತ್ನ ಖಂಡಿಸಿ ಜನವಾದಿ ಮಹಿಳಾ ಸಂಘಟನೆ ನೇತೃತ್ವದಲ್ಲಿ ಜಿಮ್ಸ್ ಆಸ್ಪತ್ರೆ ಮುಂದೆ ಪ್ರತಿಭಟನೆ ನಡೆಸಲಾಯಿತು.
ಸಂಘಟನೆ ರಾಜ್ಯಾಧ್ಯಕ್ಷೆ ನೀಲಾ ಕೆ., ಜಿಲ್ಲಾಧ್ಯಕ್ಷೆ ಅಮಿನಾ ಬೇಗಂ, ಅಲ್ತಾಫ್ ಇನಾಂದಾರ್, ಸುಜಾತಾ, ಚಂದಮ್ಮ ಗೋಳಾ, ಶಹನಾಜ್ ಅಖ್ತರ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ನೀಲಾ ಕೆ.ಅವರು, ಜಿಮ್ಸ್ ಆಸ್ಪತ್ರೆಯ ಕೋವಿಡ್ ಕೇಂದ್ರದಲ್ಲಿ ಜೂ.8 ರಂದು ಮಧ್ಯ ಕೋವಿಡ್ ಸೋಂಕಿತ ಮಹಿಳೆಯ ಮೇಲೆ ನಡೆದಿರುವ ಅತ್ಯಾಚಾರ ಪ್ರಯತ್ನ ತೀರ ಆತಂಕಕಾರಿ ಸಂಗತಿಯಾಗಿದೆ. ಹಾಗಾದರೆ ಆಸ್ಪತ್ರೆಯಲ್ಲಿ ರೋಗಿಗಳಿಗೆ ಸುರಕ್ಷತೆ ಇಲ್ಲವೆ? ಎಂದು ಪ್ರಶ್ನಿಸಿದರು. ಒಂದು ವೇಳೆ ಸಿಸಿ ಕ್ಯಾಮರಾ ಇಲ್ಲವಾದರೆ ಇದು ತೀರ ಅಚಾತುರ್ಯ. ಇಂಥ ದೊಡ್ಡ ಆಸ್ಪತ್ರೆಯಲ್ಲಿ, ಅದೂ ಮಹಿಳೆಯರು ಚಿಕಿತ್ಸೆಗಾಗಿ ಬರಲೇಬೇಕಾದ ಆಸ್ಪತ್ರೆ ಪರಿಸರದಲ್ಲಿ ಸುರಕ್ಷಿತ ಕ್ರಮಗಳನ್ನು ಕಲ್ಪಿಸುವಲ್ಲಿ ಆಸ್ಪತ್ರೆಯ ಆಡಳಿತ ವಿಫಲವಾದದ್ದು ಖಂಡನೀಯ. ಮಹಿಳೆಯರಿಗೆ ಎಲ್ಲ ರೀತಿಯ ರಕ್ಷಣೆ ಕೊಡಬೇಕಾದ ಸರಕಾರಿ ಸಂಸ್ಥೆಗಳಲ್ಲಿಯೇ ರಕ್ಷಣೆ ಕೊಡಲು ಸಾಧ್ಯವಾಗದಿದ್ದರೆ ಇನ್ನು ಉಳಿದ ಸ್ಥಳಗಳ ಗತಿಯೇನು? ಜಿಮ್ಸ್ ಆಸ್ಪತ್ರೆಯು ಅವ್ಯವಸ್ಥೆಯ ಆಗರವಾಗಿದೆ. ಅಲ್ಲಿ ಉಪಚಾರ ಪಡೆದುಕೊಳ್ಳುತ್ತಿರುವ ನಾಗರೀಕರು ಅಲ್ಲಿನ ಅವ್ಯವಸ್ಥೆ ಕುರಿತು ಹೇಳುತ್ತಲೆ ಇದ್ದಾರೆ. ಜಿಲ್ಲಾಡಳಿತ ಮಾತ್ರ ಈ ಕುರಿತು ಗಮನ ವಹಿಸುತ್ತಿಲ್ಲ ಎಂಬುದೇ ಆತಂಕ ಮೂಡಿಸುತ್ತಿದೆ. ತಕ್ಷಣವೇ ಜಿಲ್ಲಾಡಳಿತ ಈ ಕಡೆ ಗಮನ ಹರಿಸಬೇಕು, ಅದರಲ್ಲಿಯೂ ಚಿಕಿತ್ಸೆಗಾಗಿ ಬರುತ್ತಿರುವ ಮಹಿಳೆಯರಿಗೆ ಎಲ್ಲ ಬಗೆಯ ಸುರಕ್ಷತೆ ಕಲ್ಪಿಸಬೇಕು. ಎಲ್ಲ ಕಡೆ ಸಿಸಿ ಕ್ಯಾಮೆರಾ ಅಳವಡಿಸಬೇಕು ಎಂದು ಆಗ್ರಹಿಸಿದರು.
ಇದೇ ವೇಳೆ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ನಿಯೋಗವು ಜಿಮ್ಸ್ ಆಡಳಿತದ ನಿರ್ದೇಶಕಿ ಡಾ.ಕವಿತಾ ಪಾಟಿಲ ಅವರನ್ನು ಭೇಟಿಯಾಗಿ ಮೇಲ್ಕಂಡ ಅಂಶಗಳನ್ನು ಅವರ ಗಮನಕ್ಕೆ ತರಲಾಯಿತು. ಹಾಗೂ ಅತ್ಯಾಚಾರಕ್ಕೆ ಪ್ರಯತ್ನಪಟ್ಟ ಯುವಕ ಜಿಮ್ಸ್ ಸಿಬ್ಬಂದಿಯೇ ಅಲ್ಲವಾದರೂ ಅವನನ್ನು ಕೋವಿಡ್ ಸೋಂಕಿತ ಮಹಿಳಾ ವಾರ್ಡಿನವರೆಗೂ ಬರಲು ಹೇಗೆ ಸಾಧ್ಯವಾಯಿತು ಎಂದು ಪ್ರಶ್ನಿಸಲಾಯಿತು. ಕೋವಿಡ್ ಸೋಂಕಿತ ಅಟೆಂಡರ್ಸ್ ಗಳಿಗೆ ಕಡ್ಡಾಯವಾಗಿ ಒಳಗೆ ಬಿಡದಷ್ಟು ಬಂದೋಬಸ್ತು ಇದೆ. ಮತ್ತು ಅದೇ ಸಂದರ್ಭದಲ್ಲಿ ಜಿಮ್ಸ್ ಉದ್ಯೋಗಿಯಲ್ಲದ ಸಂಬಂಧ ಪಡದ ವ್ಯಕ್ತಿಯೊಬ್ಬ ವಾರ್ಡಿನೊಳಗೆ ರಾತ್ರಿ ಹತ್ತರಿಂದ ಹನ್ನೊಂದು ಗಂಟೆಯ ಹೊತ್ತಿಗೆ ಪ್ರವೇಶ ಪಡೆಯುವನು ಅಂದರೆ ಏನರ್ಥ? ಇದು ಆಡಳಿತ ಮಂಡಳಿಯು ಸುರಕ್ಷತೆ ವಿಷಯದಲ್ಲಿನ ದಿವ್ಯ ನಿರ್ಲಕ್ಷ್ಯವೇ ಆಗಿದೆ ಎಂಬುದನ್ನು ಅವರ ಗಮನಕ್ಕೆ ತರಲಾಯಿತು.
ನಂತರ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿಪತ್ರ ಸಲ್ಲಿಸಲಾಯಿತು.