
ನವದೆಹಲಿ, ಸೆ.೫- ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ, ಅಲ್ಲದೆ ಆಕೆಯ ಇಬ್ಬರು ಮಕ್ಕಳ ಜೊತೆ ಹತ್ಯೆ ನಡೆಸಿ, ಬಳಿಕ ದರೋಡೆ ಕೃತ್ಯಕ್ಕೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ಮೂವರಿಗೆ ಮರಣದಂಡನೆ ಶಿಕ್ಷೆ ವಿಧಿಸಿದೆ. ಆಗಸ್ಟ್ ೨೨ರಂದು ವಿಚಾರಣೆಗೆ ಸಂಬಂಧಿಸಿದಂತೆ ನಾಲ್ವರ ಮೇಲಿನ ಅಪರಾಧಿ ಕೃತ್ಯ ಸಾಬೀತಾಗಿದ್ದು, ಇದೀಗ ಶಿಕ್ಷೆಯ ಪ್ರಮಾಣ ಪ್ರಕಟಿಸಲಾಗಿದೆ.
ಸೆಕ್ಷನ್ ೩೦೨ (ಕೊಲೆ) ಮತ್ತು ೧೨೦ ಬಿ (ಕ್ರಿಮಿನಲ್ ಪಿತೂರಿ) ಅಡಿಯಲ್ಲಿ ಅಪರಾಧಕ್ಕಾಗಿ ಶಾಹಿದ್, ಅಕ್ರಮ್ ಮತ್ತು ರಫತ್ ಅಲಿ ಅಲಿಯಾಸ್ ಮಂಜೂರ್ ಅಲಿ ಅವರಿಗೆ ತೀಸ್ ಹಜಾರಿ ನ್ಯಾಯಾಲಯದ ವಿಶೇಷ ಫಾಸ್ಟ್ ಟ್ರ್ಯಾಕ್ ಕೋರ್ಟ್ ನ್ಯಾಯಾಧೀಶ ಆಂಚಲ್ ಅವರು ಮರಣದಂಡನೆ ವಿಧಿಸಿದರು. ಅಲ್ಲದೆ ಪ್ರತೀ ಅಪರಾಧಿಗೆ ೩೫ ಸಾವಿರ ರೂ. ದಂಡ ವಿಧಿಸಲಾಗಿದೆ. ೨೦೧೫ರಲ್ಲಿ ಇಲ್ಲಿನ ಸಮೀಪದ ಖ್ಯಾಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಈ ಬಗ್ಗೆ ಹತ್ಯೆಗೀಡಾದ ಮಹಿಳೆಯ ಪತಿ ದೂರು ನೀಡಿದ್ದರು.