ಅತ್ಯಾಚಾರ ಬಾಲಕಿಗೆ ಬದುಕು ನೀಡಿದರೂ ತಪ್ಪದ ಶಿಕ್ಷೆ!

(ಮುಕುಂದ ಬೆಳಗಲಿ)
ಬೆಂಗಳೂರು, ನ.೧೬: ಬಾಲಕಿಯೊಬ್ಬಳ ಮೇಲೆ ಅತ್ಯಾಚಾರವೆಸಗಿ ನಂತರ ಆಕೆ ಜೊತೆ ಮದುವೆಯಾಗಿ ಬದುಕು ನೀಡಿದರೂ ಶಿಕ್ಷೆಯಿಂದ ಮುಕ್ತರಾಗಲು ಸಾಧ್ಯವಿಲ್ಲ ಎಂದು ರಾಜ್ಯ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಅತ್ಯಾಚಾರವೆಸಗಿದ ಆರೋಪಿ ಹಾಗೂ ಅತ್ಯಾಚಾರಕ್ಕೊಳಗಾದ ಸಂತ್ರಸ್ತೆಗೆ ಮದುವೆಯಾಗಿ ಮಗು ಹುಟ್ಟಿದ ನಂತರವೂ ಆರೋಪಿಯನ್ನು ಬಿಡುಗಡೆ ಮಾಡಲು ನಿರಾಕರಿಸಿದ ಹೈಕೋರ್ಟ್‌ನ ಕಲಬುರ್ಗಿ ಪೀಠ, ಆರೋಪಿಯ ವಿರುದ್ಧ ವಿಚಾರಣೆಯನ್ನು ಮುಂದುವರಿಸಲು ಕೆಳ ನ್ಯಾಯಾಲಯಕ್ಕೆ ಹಸಿರು ನಿಶಾನೆ ನೀಡಿದೆ.
ಆರೋಪಿಯ ವಿರುದ್ಧದ ವಿಚಾರಣೆಯನ್ನು ಕೈಬಿಡುವಂತೆ ಕೋರಿ ಆರೋಪಿ ಹಾಗೂ ಸಂತ್ರಸ್ತೆ ಜಂಟಿಯಾಗಿ ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಿರುವ ಹೈಕೋರ್ಟ್( ಕಲಬುರ್ಗಿ ಪೀಠ) ಏಕಸದಸ್ಯ ಪೀಠದ ನ್ಯಾಯಾಧೀಶ ಎಚ್. ಪಿ.ಸಂದೇಶ್, ಆರೋಪಿ ಮದುವೆಯಾದ ಮಾತ್ರಕ್ಕೆ ಆರೋಪ ಮುಕ್ತಗೊಳಿಸಿದರೆ ಸಮಾಜಕ್ಕೆ ಕೆಟ್ಟ ಸಂದೇಶ ರವಾನೆಯಾಗುತ್ತದೆ. ಹೀಗಾಗಿ ಕೆಳ ನ್ಯಾಯಾಲಯದ ವಿಚಾರಣೆಯನ್ನು ಕೈಬಿಡುವಂತೆ ಆದೇಶಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.
ಪ್ರಕರಣದ ವಿವರ : ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿ ತಾಲೂಕಿನ ನಿವಾಸಿ ಅನಿಲ್ ಎಂಬುವನು ಅದೇ ಊರಿನ ಅಪ್ರಾಪ್ತ ಬಾಲಕಿಯೊಬ್ಬಳನ್ನು ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರವೆಸಗಿದ್ದನು. ನಂತರ ಆಕೆಯನ್ನು ಅಪಹರಿಸಿ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಇರಿಸಿದ್ದನು. ಈ ಕುರಿತು ಪ್ರಕರಣ ದಾಖಲಾಗಿದ್ದು,ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಗುರಿಪಡಿಸಿದರು.
ಅಪಹರಣಕ್ಕೆ ಒಳಗಾದ ಬಾಲಕಿಯು ಸಹ ಅತ್ಯಾಚಾರ ವೆಸಗಿದ ಸಂದರ್ಭದಲ್ಲಿ ತನಗೆ ೧೯ ವರ್ಷ ವಯಸ್ಸಾಗಿತ್ತು ಎಂದು ವಿಚಾರಣಾ ನ್ಯಾಯಾಲಯದ ಮುಂದೆ ಹೇಳಿಕೆ ನೀಡಿ ಆರೋಪಿಯೊಂದಿಗೆ ಮದುವೆಯನ್ನು ಆಗಿದ್ದಳು. ಆದರೆ ಆರೋಪಿಯ ವಿರುದ್ಧ ಭಾರತ ದಂಡ ಸಂಹಿತೆ ಕಾಯ್ದೆ ಹಾಗೂ ಪೋಕ್ಸೋ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಜೈಲಿನಲ್ಲಿದ್ದಾನೆ. ಅತ್ಯಾಚಾರಕ್ಕೊಳಗಾಗಿದ್ದ ಸಂತ್ರಸ್ತೆಗೆ ಮಗುವಾಗಿದ್ದು ಸದ್ಯ ವಿಜಯಪುರದ ಸ್ನೇಹ ಎಂಬ ಮಹಿಳಾ ಪುನರ್ವಸತಿ ಕೇಂದ್ರದಲ್ಲಿ ವಾಸಿಸುತ್ತಿದ್ದಾಳೆ.

ಈಗ ಆರೋಪಿ ಹಾಗೂ ಸಂತ್ರಸ್ತೆ ಜೊತೆಯಲ್ಲಿ ಬದುಕಲು ಇಚ್ಚಿಸಿದ್ದು, ದೂರನ್ನು ವಾಪಸ್ ಪಡೆಯುವುದಾಗಿ ಜಂಟಿ ಅರ್ಜಿಯನ್ನು ರಾಜ್ಯ ಹೈಕೋರ್ಟ್ ಗೆ ಸಲ್ಲಿಸಿದರು.
ಅರ್ಜಿ ವಿಚಾರಣೆ ನಡೆಸಿದ ಪೀಠ ಆರೋಪಿಯು ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಅತ್ಯಾಚಾರ ಎಸಗಿರುವ ಕೃತ್ಯ ಅತ್ಯಂತ ಹೀನಾಯವಾಗಿದ್ದು, ಆರೋಪಿಯನ್ನು ದೋಷಮುಕ್ತಗೊಳಿಸಿ ದರೆ ಸಮಾಜದಲ್ಲಿ ಕೆಟ್ಟ ಸಂದೇಶ ರವಾನೆಯಾಗುತ್ತದೆ. ಹೀಗಾಗಿ ಹೈಕೋರ್ಟ್ ಜಂಟಿ ಅರ್ಜಿಯನ್ನು ವಜಾಗೊಳಿಸಿ, ವಿಚಾರಣಾ ನ್ಯಾಯಾಲಯ ಈ ಕುರಿತು ಕೂಲಂಕಷ ವಿಚಾರಣೆ ನಡೆಸಿ ತೀರ್ಪು ನೀಡುವಂತೆ ಆದೇಶಿಸಿದೆ.