ಅತ್ಯಾಚಾರ ಪ್ರಕರಣ: ತಪ್ಪಿತಸ್ಥರ ಬಂಧನಕ್ಕೆ ಬಿಜೆಪಿ ಒತ್ತಾಯ

ಕಲಬುರಗಿ,ಜು 19: ಜಿಲ್ಲೆಯ ಆಳಂದ ತಾಲೂಕಿನ ಗ್ರಾಮವೊಂದರ 11 ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಮತ್ತು ಆಕೆಯ ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವ ಅಪರಾಧಿಗಳನ್ನು ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕೆಂದು ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ್ ರದ್ದೆವಾಡಗಿ ಒತ್ತಾಯಿಸಿದರು.
ಇಲ್ಲಿನ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಮಗಳನ್ನು ಕಳೆದುಕೊಂಡು ಆಕೆಯ ತಾಯಿ-ತಂದೆ ಹಾಗೂ ಕುಟುಂಬದ ಸದಸ್ಯರು ಶೋಕ ಸಾಗರದಲ್ಲಿ ಮುಳುಗಿದ್ದಾರೆ. ಹಾಗಾಗಿ, ಸಂತ್ರಸ್ತ ಕುಟುಂಬಕ್ಕೆ ರೂ. 1 ಕೋಟಿ ಪರಿಹಾರ ನೀಡಬೇಕು. ಸಂತ್ರಸ್ತ ಕುಟುಂಬದ ಒಬ್ಬ ವ್ಯಕ್ತಿಗೆ ಸರಕಾರಿ ನೌಕರಿ ನೀಡಬೇಕು ಎಂದು ಆಗ್ರಹಿಸಿದರು.
ಘಟನೆಗೆ ಸಂಬಂಧಿಸಿದಂತೆ ಅಪರಾಧಿಗಳು ಎಷ್ಟೇ ಪ್ರಭಾವಿಗಳಾಗಿದ್ದರೂ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವ ನಿಟ್ಟಿನಲ್ಲಿ ಪೆÇಲೀಸ್ ಇಲಾಖೆ ಯಾವುದೇ ಮುಲಾಜು ತೋರಬಾರದು ಎಂದರು.
ಜಿಲ್ಲೆಯಾದ್ಯಂತ ಮಹಿಳೆಯರ ರಕ್ಷಣೆಯ ದೃಷ್ಟಿಯಿಂದ ಗ್ರಾಮೀಣ ಭಾಗದಲ್ಲಿ ಸಾಮಾನ್ಯವಾಗಿ ಕಿರುಕುಳ ನೀಡುವ ವ್ಯಕ್ತಿಗಳ ಮಾಹಿತಿ ಸಂಗ್ರಹಿಸಿ ಅಂಥವರಿಗೆ ಎಚ್ಚರಿಕೆ ನೀಡುವ ಕೆಲಸವನ್ನು ಪೆÇಲೀಸ್ ಅಧಿಕಾರಿಗಳು ಮಾಡಬೇಕು ಎಂದು ಸಹ ರದ್ದೆವಾಡಗಿ ಸಲಹೆ ನೀಡಿದರು.
ಬಿಜೆಪಿ ಮುಖಂಡ ಹಾಗೂ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಹರ್ಷಾನಂದ ಗುತ್ತೇದಾರ್ ಮಾತನಾಡಿ, ಬಾಲಕಿಯ ಸಂತ್ರಸ್ತ ಕುಟುಂಬದ ಆರ್ಥಿಕ ಪರಿಸ್ಥಿತಿ ಸರಿಯಿಲ್ಲ. ಇಂತಹ ಸ್ಥಿತಿಯಲ್ಲಿ ಆ ಕುಟುಂಬಕ್ಕೆ ಆಸರೆಯಾಗಿ ನಿಲ್ಲುವ ಕೆಲಸಕ್ಕೆ ಸರಕಾರ ಮುಂದಾಗಬೇಕು. ತಪ್ಪಿತಸ್ಥರನ್ನು ತಕ್ಷಣ ಬಂಧಿಸಿ ಜೈಲಿಗೆ ಕಳಿಸಬೇಕೆಂದು ಕೋರಿದರು.
ಬಿಜೆಪಿ ಜಿಲ್ಲಾ ಕೋಶಾಧ್ಯಕ್ಷ ಹಣಮಂತರಾವ್ ಮಾಲಾಜಿ, ಮಾಧ್ಯಮ ಸಂಚಾಲಕ ಸಂತೋಷ್ ಹಾದಿಮನಿ, ಬಿಜೆಪಿ ಮುಖಂಡರಾದ ಆನಂದರಾವ್ ಪಾಟೀಲ್ ಕೊರಳ್ಳಿ, ಶರಣಗೌಡ ಪಾಟೀಲ್ ದೇವಂತಗಿ, ಶರಣು ಕುಮಸಿ ಹಾಗೂ ಮಲ್ಲಿಕಾರ್ಜುನ ಜಿ.ತಡಕಲ್ ಉಪಸ್ಥಿತರಿದ್ದರು.


ಗುಂಡೇಟು ಪ್ರಕರಣ: ಸಿಐಡಿ ತನಿಖೆಗೆ ಸ್ವಾಗತ
ಜೇವರ್ಗಿ ತಾಲೂಕಿನ ನೆಲೋಗಿ ಠಾಣೆಯ ಪೇದೆ ಮಯೂರ್ ಚವ್ಹಾಣ ದುರಂತ ಸಾವಿನ ಬಳಿಕ ಬಿಜೆಪಿ ಮುಖಂಡ ಸಾಯಬಣ್ಣ ಕರಜಗಿ ಮೇಲೆ ಪೆÇಲೀಸರು ಗುಂಡು ಹಾರಿಸಿದ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಿರುವ ಸರಕಾರದ ಕ್ರಮವನ್ನು ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ್ ರದ್ದೇವಾಡಗಿ ಸ್ವಾಗತಿಸಿದರು.
ಗುಂಡೇಟು ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ತನಿಖೆ ನಡೆಸುವಂತೆ ಒತ್ತಾಯಿಸಿ ಬಿಜೆಪಿ ಹೋರಾಟಗಳನ್ನು ನಡೆಸಿತ್ತು. ಹೋರಾಟದ ತೀವ್ರತೆಯನ್ನು ಗಂಭೀರವಾಗಿ ಪರಿಗಣಿಸಿದ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು ಪ್ರಕರಣದ ಕುರಿತು ಸಿಐಡಿ ತನಿಖೆ ನಡೆಸುವುದಾಗಿ ಪ್ರಕಟಿಸಿದ್ದಾರೆ. ಸರಕಾರದ ಈ ನಿರ್ಧಾರದ ಹಿಂದೆ ಬಿಜೆಪಿಯ ನ್ಯಾಯಪರ ಕಾಳಜಿ ಮುಖ್ಯವಾಗಿ ಕೆಲಸ ಮಾಡಿದೆ. ಹಾಗಾಗಿ, ಈ ನಿಟ್ಟಿನಲ್ಲಿ ನೈತಿಕ ಬೆಂಬಲ ನೀಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸೇರಿದಂತೆ ಎಲ್ಲರಿಗೂ ಧನ್ಯವಾದ ಸಲ್ಲಿಸುವುದಾಗಿ ಹೇಳಿದರು.