ಅತ್ಯಾಚಾರ ಎಸಗಿದ ದುಷ್ಕರ್ಮಿಗಳಿಗೆ ಗಲ್ಲು ಶಿಕ್ಷೆ ವಿಧಿಸಿ: ಗೋಪಾಲ ಘಟಕಾಂಬಳೆ

ವಿಜಯಪುರ, ಮೇ.21-ಬಸವನಬಾಗೇವಾಡಿ ತಾಲೂಕಿನ ಕುದರಿ ಸಾಲವಾಡಗಿಯಲ್ಲಿ ಇಬ್ಬರು ದಲಿತ ಹೆಣ್ಣು ಮಕ್ಕಳು ದೌರ್ಜನ್ಯಕ್ಕೆ ತುತ್ತಾದ ಮನೆಗೆ ತೆರಳಿ ಮಾಜಿ ಉಪ ಮಹಾಪೌರರು ಹಾಗೂ ಬಿಜೆಪಿ ಜಿಲ್ಲಾ ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಗೋಪಾಲ ಘಟಕಾಂಬಳೆ ಅವರು ಕುಟುಂಬಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಬಸವನಬಾಗೇವಾಡಿ ಕುದರಿ ಸಾಲವಾಡಗಿಯಲ್ಲಿ ಇಬ್ಬರು ದಲಿತ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಎಸಗಿದ ದುಷ್ಕರ್ಮಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು. ಈ ಕುಟುಂಬಕ್ಕೆ ರಾಜ್ಯ ಸರ್ಕಾರ ಹಾಗೂ ಸ್ಥಳೀಯ ಜಿಲ್ಲಾಡಳಿತ ಹೆಚ್ಚಿನ ಸಹಾಯ ಸಹಕಾರ ನೀಡಬೇಕು ಎಂದರು.
ಮೇಲಿಂದ ಮೇಲೆ ದಲಿತರ, ಹೆಣ್ಣುಮಕ್ಕಳ ಮೇಲೆ ಅನ್ಯಾಯ, ದೌರ್ಜನ್ಯಗಳು ಆಗುತ್ತಿವೆ. ಇದಕ್ಕೆ ಕಡಿವಾಣ ಹಾಕಬೇಕಿದೆ. ಸರ್ಕಾರ ಇನ್ನಷ್ಟು ಕಠಿಣ ಕಾನೂನುಗಳನ್ನು ತರಬೇಕಿದೆ. ಅದರಂತೆ ಅನ್ಯಾಯಕ್ಕೆ ಒಳಗಾದ ಕುಟುಂಬದ ಮನೆಗೆ ತೆರಳಿ ಕುಟುಂಬಕ್ಕೆ ಸಾತ್ವನ ಹೇಳಿ ನಿಮ್ಮೊಂದಿಗೆ ನಾವಿದ್ದೇವೆ ನೀವು ಹೆದರದಿರಿ ಧೈರ್ಯದಿಂದ ಇರಿ ಎಂದು ಪಾಲಕ ಪೋಷಕರಿಗೆ ಗೋಪಾಲ ಘಟಕಾಂಬಳೆ ಅವರು ಧೈರ್ಯ ತುಂಬಿದರು.
ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಕಂದಗಲ್, ಸುಭಾಸ ನಡುವಿನಕೇರಿ ಘಟನೆಯನ್ನು ತೀವ್ರವಾಗಿ ಖಂಡಿಸಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.