ಅತ್ಯಾಚಾರ ಆರೋಪ ನಕಾರ ಅಲ್ವೆಸ್

ಬಾರ್ಸೆಲೋನಾ (ಸ್ಪೇನ್), ಫೆ.೮- ನೈಟ್‌ಕ್ಲಬ್‌ನಲ್ಲಿ ನಾನು ಮಹಿಳೆಯ ಮೇಲೆ ಅತ್ಯಾಚಾರ ನಡೆಸಿಲ್ಲ ಎಂದು ಬ್ರೆಜಿಲ್ ಹಾಗೂ ಬಾರ್ಸೆಲೋನಾ ತಂಡದ ಮಾಜಿ ಆಟಗಾರ ಡ್ಯಾನಿ ಅಲ್ವೆಸ್ ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದ ಬಾರ್ಸೆಲೋನಾ ನ್ಯಾಯಾಲಯದಲ್ಲಿ ನಡೆದ ಅಂತಿಮ ವಿಚಾರಣೆ ದಿನದ ವೇಳೆಯಲ್ಲಿ ಅಲ್ವೆಸ್ ತಮ್ಮ ಮೇಲೆ ಅತ್ಯಾಚಾರ ನಡೆಸಿದ ಆರೋಪವನ್ನು ನಿರಾಕರಿಸಿದ್ದಾರೆ.
ನೈಟ್‌ಕ್ಲಬ್‌ನಲ್ಲಿ ಮಹಿಳೆಯ ಮೇಲೆ ಅತ್ಯಾಚಾರ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲ್ವೆಸ್ ಕಳೆದ ಜನವರಿಯಿಂದ ಜೈಲಿನಲ್ಲಿದ್ದು, ಜಾಮೀನು ಪಡೆಯಲು ಹರಸಾಹಸ ನಡೆಸುತ್ತಿದ್ದಾರೆ. ಬಾರ್ಸೆಲೋನಾ ನೈಟ್‌ಕ್ಲಬ್‌ನಲ್ಲಿ ಮಹಿಳೆಯ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂಬ ಆರೋಪ ಅಲ್ವೆಸ್ ವಿರುದ್ಧ ಕೇಳಿಬಂದಿದೆ. ಅಲ್ವೆಸ್ ಹಾಗೂ ಆತನ ಸ್ನೇಹಿತ ಮೂವರು ಯುವತಿಯರಿಗೆ ಶಾಂಪೇನ್ ಖರೀದಿಸಿದ್ದು, ಈ ಪೈಕಿ ಯುವತಿಗೆ ಟಾಯ್ಲೆಟ್‌ನ ಮತ್ತೊಂದು ಭಾಗಕ್ಕೆ ಬರುವಂತೆ ತಿಳಿಸಲಾಗಿತ್ತು. ಅಲ್ಲದೆ ಈ ವೇಳೆ ಎಷ್ಟೇ ಕೇಳಿಕೊಂಡರೂ ಮಹಿಳೆಯ ಜೊತೆ ಬಲವಂತದ ಲೈಂಗಿಕ ಸಂಪರ್ಕ ಇರಿಸಲಾಗಿತ್ತು ಎಂದು ಪ್ರಾಸಿಕ್ಯೂಟರ್‌ಗಳು ಆರೋಪಿಸಿದ್ದಾರೆ. ಆದರೆ ಅತ್ಯಾಚಾರ, ಮಹಿಳೆಯ ಮೇಲೆ ಹಲ್ಲೆ ಸೇರಿದಂತೆ ಹಲವು ಆರೋಪಗಳನ್ನು ಅಲ್ವೆಸ್ ಅವರು ನಿರಾಕರಿಸಿದ್ದಾರೆ. ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಾಸಿಕ್ಯೂಟರ್‌ಗಳು ಅಲ್ವೆಸ್ ಅವರಿಗೆ ೯ ವರ್ಷಗಳ ಜೈಲುಸಜೆ ಹಾಗೂ ಆರ್ಥಿಕ ಪರಿಹಾರಕ್ಕಾಗಿ ಮನವಿ ಮಾಡಿದ್ದಾರೆ.