ಅತ್ಯಾಚಾರ ಆರೋಪಿಗಳಿಗೆ ಶಿಕ್ಷೆಗೆ ಆಗ್ರಹಿಸಿ ಪ್ರತಿಭಟನೆ

ಕೋಲಾರ,ಆ.೨೧- ಮಣಿಪುರದಲ್ಲಾದ ಅತ್ಯಾಚಾರ ಘಟನೆ ಮತ್ತು ರಾಜ್ಯದಲ್ಲಿ ಬಾಲಕಿಯರ ಮೇಲೆ ಅತ್ಯಾಚಾರವೆಸಗಿ ಹತ್ಯೆ ಮಾಡುತ್ತಿರುವ ಆರೋಪಿಗಳನ್ನು ಕೂಡಲೇ ಬಂಧಿಸಿ ತಕ್ಕ ಶಿಕ್ಷೆ ನೀಡಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳುತ್ತೇವೆ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಹಿರೇಕರಪನಹಳ್ಳಿ ರಾಮಪ್ಪ ಎಚ್ಚರಿಕೆ ನೀಡಿದರು.
ನಗರ ಹೊರವಲಯದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ವತಿಯಿಂದ ಮಣಿಪುರ ಮಹಿಳೆಯರ ಬೆತ್ತಲೆ ಪ್ರಕರಣ ಮತ್ತು ಕರ್ನಾಟಕದಲ್ಲಿ ಬಾಲಕಿಯರ ಮೇಲೆ ಅತ್ಯಾಚಾರವೆಸಗಿ ಹತ್ಯೆ ಮಾಡಿರುವ ಅಮಾನುಷ ಘಟನೆಯನ್ನು ಖಂಡಿಸಿ ಹಮ್ಮಿಕೊಂಡಿದ್ದ ಪ್ರತಿಭಟನೆ ಉದ್ದೇಶಿಸಿ ಅವರು ಮಾತನಾಡಿದರು.
ಮಣಿಪುರದಲ್ಲಿ ಸತತವಾಗಿ ಮೂರು ತಿಂಗಳಿಂದ ದಲಿತ ಹೆಣ್ಣುಮಕ್ಕಳ ಮೇಲೆ ಪದೇ ಪದೇ ದೌರ್ಜನ್ಯಗಳು ನಡೆಯುತ್ತಿದೆ. ಇಬ್ಬರು ಹೆಣ್ಣುಮಕ್ಕಳನ್ನು ಬೆತ್ತಲೆಗೊಳಿಸಿ ರಸ್ತೆಯಲ್ಲಿ ಮೆರವಣಿಗೆ ಮಾಡಿದ್ದಾರೆ. ಇದರ ಜೊತೆಗೆ ದಿನನಿತ್ಯ ಅನೇಕ ರೀತಿಯ ದೌರ್ಜನ್ಯಗಳು ನಡೆಯುತ್ತಿದ್ದರು ಅಲ್ಲಿನ ಬಿಜೆಪಿ ಸರ್ಕಾರ ಕೈ ಕಟ್ಟಿ ಕುಂತಿದೆ. ದಲಿತರ ಬಗ್ಗೆ ಹಿತಾಸಕ್ತಿ ಇಲ್ಲ ಎಂದು ದೂರಿದರು.
ನಮ್ಮ ರಾಜ್ಯದ ಧರ್ಮಸ್ಥಳದಲ್ಲಿ ಸೌಜನ್ಯ ಎಂಬ ಬಾಲಕಿಯ ಮೇಲೆ ೧೩ ವರ್ಷಗಳ ಹಿಂದೆ ಅತ್ಯಾಚಾರವೆಸಗಿ ಹತ್ಯೆ ಮಾಡುತ್ತಾರೆ. ಆದರೆ ಇದುವರೆವಿಗೂ ಅತ್ಯಾಚಾರ ಪ್ರಕರಣದ ಆರೋಪಿಗಳನ್ನು ಬಂಧಿಸುವಲ್ಲಿ ಸರ್ಕಾರ ವಿಫಲವಾಗಿದೆ. ಸೌಜನ್ಯ ಸಾವಿಗೆ ನ್ಯಾಯ ಸಿಗುವುದು ಯಾವಾಗ ? ಇಂತಹ ಕೃತ್ಯವೆಸಗಿದ ಆರೋಪಿಗಳನ್ನು ಬಂಧಿಸಿ,ಕಠಿಣ ಶಿಕ್ಷೆ ನೀಡದಿದ್ದರೆ ಇನ್ನು ಅನೇಕ ಮಹಿಳೆಯರ ಮಾನ ಪ್ರಾಣ ಕಳೆದುಕೊಳ್ಳುವ ಪ್ರಕರಣಗಳು ಸಂಭವಿಸ ಬಹುದಾಗಿದೆ ಹಾಗಾಗಿ ಎರಡು ರಾಜ್ಯದ ಸರ್ಕಾರ ಕೂಡಲೇ ಕ್ರಮ ಜರುಗಿಸಿ ಆರೋಪಿಗಳನ್ನು ಬಂಧಿಸ ಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಕಲಾ ಮಂಡಳಿ ಸಂಚಾಲಕ ವಿ.ಯಲ್ಲಪ್ಪ, ಬೆಂಗಳೂರು ವಿಭಾಗೀಯ ಸಂಚಾಲಕ ಚಿಕ್ಕವಲಗಮಾದಿ ಲಕ್ಷ್ಮಮ್ಮ, ಸಿದ್ದನಹಳ್ಳಿ ಯಲ್ಲಯ್ಯ, ಕೀಲುಕೊಪ್ಪ ಯಲ್ಲಪ್ಪ, ತಂಬಾರ್ಲಹಳ್ಳಿ ರಾಮಪ್ಪ, ರಾಧಾಕೃಷ್ಣ, ಈನೆಲ ಈ ಜಲ ವೆಂಕಟಾಚಲಪತಿ, ಮೋಹನ್, ಮಾಲಾ, ಬಸಪ್ಪ, ಶ್ರೀಲಕ್ಷ್ಮಿ, ಕೋಲಾರ ಲಕ್ಷ್ಮೀ, ಮಮತ, ಸುಬ್ಬು ಸೇರಿದಂತೆ ಸಂಘದ ಸದಸ್ಯರು, ಕಾರ್ಯಕರ್ತರು ಇದ್ದರು.