ಅತ್ಯಾಚಾರಿಯನ್ನು ಗಲ್ಲಿಗೇರಿಸಲು ಒತ್ತಾಯ

ಬೆಂಗಳೂರು, ಸೆ. ೨೨- ನಗರದ ಹೆಬ್ಬಾಳ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಸಂಜಯನಗರದ ಗೆದ್ದಲಹಳ್ಳಿಯಲ್ಲಿ ೫ ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಬಂಧಿತವಾಗಿರುವ ಪಶ್ಚಿಮ ಬಂಗಾಳದ ಕಾಮುಕ ಆರೋಪಿಯನ್ನು ಗಲ್ಲಿಗೇರಿಸುವಂತೆ ಜಯಕರ್ನಾಟಕ ಜನಪರ ವೇದಿಕೆ ಒತ್ತಾಯಿಸಿದೆ.
ಜಯಕರ್ನಾಟಕ ಜನಪರ ವೇದಿಕೆಯ ಯುವ ಸಂಸ್ಥಾಪಕ ಅಧ್ಯಕ್ಷರಾದ ಬಿ.ಗುಣರಂಜನ್ ಶೆಟ್ಟಿಯವರ ಮಾರ್ಗದರ್ಶನದಲ್ಲಿ ರಾಜ್ಯಾಧ್ಯಕ್ಷ ಆರ್.ಚಂದ್ರಪ್ಪ ಅವರ ಸಲಹೆಯೊಂದಿಗೆ ಜನಪರ ವೇದಿಕೆ ನಿಯೋಗ ಬೆಂಗಳೂರು ನಗರ ಪೊಲೀಸ್ ಇಲಾಖೆಯ, ಉತ್ತರ ವಿಭಾಗದ ಮಾನ್ಯ ಆರಕ್ಷಕ ಉಪ ಆಯುಕ್ತ ಧರ್ಮೇಂದ್ರ ಕುಮಾರ್ ಮೀನ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.
ತುಮಕೂರಿನ ಬಡ ಮಹಿಳೆ ಹಾಗೂ ಮೈಸೂರಿನ ಕಾಲೇಜು ವಿದ್ಯಾರ್ಥಿನಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣವು ಮಾಸುವ ಮುನ್ನವೇ ಬೆಂಗಳೂರಿನ ಹೆಬ್ಬಾಳ ವ್ಯಾಪ್ತಿಯ ಸಂಜಯನಗರದ ಗೆದ್ದಲಹಳ್ಳಿಯಲ್ಲಿ ೫ ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಪಶ್ಚಿಮ ಬಂಗಾಳದ ಕಾಮುಕ ನಡೆಸಿರುವ ಲೈಂಗಿಕ ದೌರ್ಜನ್ಯ ನಗರವಾಸಿಗಳಲ್ಲಿ ಭಯಭೀತಿ ಮೂಡಿಸಿದೆ ಜನತೆಗೆ ಸೂಕ್ತ ಭದ್ರತೆ ಒದಗಿಸಬೇಕೆಂದುರಾಜ್ಯ ಮಹಾ ಪ್ರಧಾನ ಸಂಚಾಲಕ ಶೆ.ಭೊ.ರಾಧಾಕೃಷ್ಣ ಹೇಳಿದ್ದಾರೆ.
ಕಾಮುಕ ಆರೋಪಿಯು ಪೊಲೀಸ್ ವಶದಲ್ಲಿದ್ದು ಸಮದಾನಕರ ವಿಷಯವಾಗಿದ್ದರು ಈ ಕಾಮುಕ ಆರೋಪಿಗೆ ಗಲ್ಲಿಗೇರಿಸುವ ಶಿಕ್ಷೆಯಾಗಬೇಕು. ಇಂತಹ ಘಟನೆಗಳನ್ನು ಸಂಪೂರ್ಣವಾಗಿ ತಡೆಯಲು ಸರ್ಕಾರದ ಮುಖ್ಯಮಂತ್ರಿಗಳು ಹಾಗೂ ಗೃಹ ಮಂತ್ರಿಗಳು ಪೊಲೀಸ್ ಇಲಾಖೆಗೆ ಬೇಕಾದ ಸಂಪೂರ್ಣ ಸಹಕಾರ ನೀಡಿ, ಸರ್ಕಾರ ಮತ್ತು ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಬೆಂಗಳೂರು ಜಿಲ್ಲಾಧ್ಯಕ್ಷ ಜೆ.ಶ್ರೀನಿವಾಸ ಒತ್ತಾಯಿಸಿದ್ದಾರೆ.
ಇಂತಹ ಕ್ರೂರ ಘಟನೆಯಿಂದ ಮನನೊಂದಿರುವ ಪೋಷಕರಿಗೆ ಇಲಾಖೆ ಮತ್ತು ಸರ್ಕಾರ ಧೈರ್ಯ ಹೇಳಿ ಎಲ್ಲಾ ಸೂಕ್ತ ಸಹಕಾರವನ್ನು ಕೊಡಬೇಕೆಂದು ನಿಯೋಗ ಮನವಿ ಮಾಡಿತು. ಈ ವೇಳೆ ರಾಜ್ಯ ಉಪಾಧ್ಯಕ್ಷ ಕೆ.ಎನ್.ಜಗದೀಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.