ಅತ್ಯಾಚಾರಿಗಳ ಶಿಕ್ಷೆಗೆ ಕಠಿಣ ಕಾನೂನು ಜಾರಿ

ಬೆಂಗಳೂರು, ಸೆ. ೨೪- ಅತ್ಯಾಚಾರಿಗಳು ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ತಡೆಗಟ್ಟಲು ಶಿಕ್ಷೆಯ ಪ್ರಮಾಣ ಹೆಚ್ಚಿಸಲು ಕಠಿಣ ಕಾನೂನು ತರುವ ಜೊತೆಗೆ ಅಗತ್ಯ ಕಾಯ್ದೆಗೆ ಅಗತ್ಯ ತಿದ್ದುಪಡಿ ತರಲಾಗುವುದು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ವಿಧಾನಪರಿಷತ್‌ನಲ್ಲಿಂದು ಹೇಳಿದರು.
ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ಜಾರಿಯಾಗಿ ಈ ಸಂಬಂಧ ಹೆದರಿಕೆ ಅಥವಾ ಭಯದ ವಾತಾವರಣ ಮೂಡದ ಹೊರತು ಇಂತಹವುದಕ್ಕೆ ಪರಿಹಾರ ಕಂಡುಕೊಳ್ಳುವುದು ಅಸಾಧ್ಯ. ಈಗಾಗಲೇ ಆನೇಕ ಕಾನೂನು ಕಾಯ್ದೆಗಳಿವೆ. ಆದರೂ ಇಂತಹ ಪ್ರಕರಣಗಳು ಮೇಲಿಂದ ಮೇಲೆ ನಡೆಯುತ್ತಿದ್ದು, ಇವುಗಳನ್ನು ಹತ್ತಿಕ್ಕಲು ಅಗತ್ಯ ತಿದ್ದುಪಡಿ ತರಲು ಸರ್ಕಾರ ಬದ್ಧವಾಗಿದೆ ಎಂದರು.
ರಾಜ್ಯದಲ್ಲಿ ಮಕ್ಕಳು ಮತ್ತು ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರ ಪ್ರಕರಣ ಮತ್ತು ಮೈಸೂರಿನ ಸಾಮೂಹಿಕ ಅತ್ಯಾಚಾರ ಪ್ರಕರಣ ಸಂಬಂಧ ಪ್ರತಿಪಕ್ಷದ ನಾಯಕ ಎಸ್.ಆರ್. ಪಾಟೀಲ್ ಹಾಗೂ ಭಾರತೀಶೆಟ್ಟಿ ಸೇರಿದಂತೆ ವಿವಿಧ ಸದಸ್ಯರು ಕಳೆದ ಎರಡು ದಿನಗಳ ಹಿಂದೆ ಪ್ರಸ್ತಾಪಿಸಿದ ವಿಷಯಕ್ಕೆ ಸರ್ಕಾರದ ಪರವಾಗಿ ಉತ್ತರ ನೀಡಿದ ಅವರು, ಕಾಯ್ದೆಗಳಿಗೆ ತಿದ್ದುಪಡಿ ತರುವ ಸಂಬಂಧ ಸರ್ಕಾರ ಕಾನೂನು ತಜ್ಞರೊಂದಿಗೆ ಚರ್ಚೆ ನಡೆಸಲಿದೆ. ಜತೆಗೆ ಅತ್ಯಾಚಾರಿಗಳಿಗೆ ಕಠಿಣ ಕಾನೂನು ಜಾರಿ ಮಾಡುವ ಕುರಿತು ಕಾನೂನು ಆಯೋಗದ ಮೂಲಕ ವರದಿ ತರಿಸಿಕೊಂಡು ಕೇಂದ್ರಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು ಹೇಳಿದರು.
ರಾಜ್ಯಾದ್ಯಂತ ಮಹಿಳೆಯರು ಮತ್ತು ಮಕ್ಕಳ ಮೇಲೆ ನಡೆಯುವ ಅತ್ಯಾಚಾರ, ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ಯಾರೂ ಸಮರ್ಥನೆ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದ ಅವರು, ಇಂತಹ ಪ್ರಕರಣಗಳಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿಯನ್ನು ಬಂಧಿಸಲಾಗಿದೆ. ಇದರಲ್ಲಿ ಯಾರನ್ನು ರ ಕ್ಷಣೆ ಮಾಡುವ ಉದ್ದೇಶ ಸರ್ಕಾರಕ್ಕೆ ಇಲ್ಲ. ನಿಯಮಗಳ ಪಾಲನೆ ವೇಳೆ ಒಂದಿಷ್ಟು ವಿಳಂಬವಾಗಿದೆ. ಪೊಲೀಸರು ಮಾರ್ಗಸೂಚಿಯ ಪ್ರಕಾರವೇ ಕೆಲಸ ಮಾಡಿದ್ದಾರೆ. ಅತಿ ಕಡಿಮೆ ಅವಧಿಯಲ್ಲಿ ಆರು ಮಂದಿಯನ್ನು ಬಂಧಿಸಿದ್ದಾರೆ. ಅವರಿಗೆ ಕಠಿಣ ಶಿಕ್ಷೆ ವಿಧಿಸುವ ಸಂಬಂಧ ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದರು.
ಇನ್ನು ತುಮಕೂರಿನ ಪ್ರಕರಣದಲ್ಲಿ ಯಾವುದೇ ಸಾಕ್ಷ್ಯಗಳು ಲಭ್ಯವಿಲ್ಲ. ಮಹಿಳೆ ದನ ಮೇಯಿಸುವಾಗ ಆಕೆಯ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಲಾಗಿದೆ. ಕರಿಮಣಿ ಬಿಟ್ಟು ತಾಳಿಯನ್ನು ಕದ್ದೊಯ್ದಿದ್ದಾರೆ. ಅತ್ಯಾಚಾರ ನಡೆದ ದಿನ ವ್ಯಕ್ತಿಯೊಬ್ಬ ಮಹಿಳೆ ಇದ್ದ ಸ್ವಲ್ಪ ದೂರದಲ್ಲೇ ವ್ಯಕ್ತಿ ಇದ್ದದನ್ನು ಜನ ಗಮನಿಸಿದ್ದಾರೆ. ಆದರೆ ಆತ ಯಾರು ಎನ್ನುವ ಮಾಹಿತಿ ಲಭ್ಯವಿಲ್ಲ. ಗಂಡ ಕೆಲಸಕ್ಕೆ ಹೋಗಿ ರಾತ್ರಿ ಮನೆಗೆ ಬಂದಾಗ ಅಮ್ಮ ಇನ್ನು ಮನೆಗೆ ಬಂದಿಲ್ಲ ಎಂದು ಮಗಳು ತಿಳಿಸಿದ ಸಂದರ್ಭದಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ. ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಈ ಪ್ರಕರಣದ ಸಂಬಂಧ ತಿಖೆ ನಡೆಸುತ್ತಿದ್ದಾರೆ ಎಂದರು.
ಮಹಿಳಾ ವಕೀಲರ ನೇಮಕ
ಪೋಕ್ಸೋ ಪ್ರಕರಣಗಳಡಿ ದಾಖಲಾಗುವ ವಿಚಾರಣೆಗಳಡಿ ಮಹಿಳಾ ವಕೀಲರನ್ನೇ ಸರ್ಕಾರದ ಪರವಾಗಿ ವಾದ ಮಂಡಿಸಲು ನೇಮಕ ಮಾಡಿಕೊಳ್ಳಲಾಗುವುದು ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು.
ಪುರುಷ ವಕೀಲರ ಮುಂದೆ ಸಂತ್ರಸ್ತೆ ಕೆಲವು ವಿಚಾರಗಳನ್ನು ಹಂಚಿಕೊಳ್ಳುವಾಗ ಮುಜುಗರವಾಗಬಹುದು ಎಂಬ ಏಕೈಕ ಉದ್ದೇಶದಿಂದ ಮಹಿಳಾ ವಕೀಲರನ್ನು ನೇಮಕ ಮಾಡಲು ಸರ್ಕಾರ ಮುಂದಾಗಿದೆ ಎಂದು ಹೇಳಿದರು.
ಪೋಕ್ಸೋ ಪ್ರಕರಣ ಸೇರಿದಂತೆ ಅತ್ಯಾಚಾರ ಪ್ರಕರಣಗಳನ್ನು ಶೀಘ್ರ ಗತಿಯಲ್ಲಿ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗುವಂತೆ ಸರ್ಕಾರ ನೋಡಿಕೊಳ್ಳಲಿದೆ ಎಂದು ಹೇಳಿದರು.
ಈ ಸಂಬಂಧ ಕಾನೂನು ತಜ್ಞರು ಸೇರಿದಂತೆ ಹಲವರ ಜತೆ ಚರ್ಚಿಸಿ ಯಾವೆಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು ಎನ್ನುವುದನ್ನು ನಿರ್ಧರಿಸಲಾಗುವುದು ಎಂದು ಹೇಳಿದರು.
ರಾಜ್ಯದ ಪ್ರವಾಸಿತಾಣ, ದೇವಸ್ಥಾನಗಳು, ಹುಡುಗ-ಹುಡುಗಿ ಭೇಟಿ ನೀಡುವಂತಹ ಸ್ಥಳಗಳಲ್ಲಿ ಪೊಲೀಸ್ ಕಾವಲು ಮತ್ತಷ್ಟು ಹೆಚ್ಚು ಮಾಡಲಾಗುವುದು. ಜತೆಗೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಬಿಗಿಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯಗಳಲ್ಲಿ ಯಾರು ಏಷ್ಟೇ ದೊಡ್ಡವರಾಗಿದ್ದರೂ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.