ಅತ್ಯಾಚಾರಿಗಳಿಗೆ ಗಲ್ಲುಶಿಕ್ಷೆ ನೀಡಲು ಆಗ್ರಹಿಸಿ ಪ್ರತಿಭಟನೆ

ಸಂಜೆವಾಣಿ ವಾರ್ತೆ
ದಾವಣಗೆರೆ.ಆ.8;  : ಮಣಿಪುರದಲ್ಲಿ ಕುಕಿ ಸಮುದಾಯದ  ಮಹಿಳೆಯರನ್ನು ಬೆತ್ತಲೆ ಮಾಡಿ ರಾಕ್ಷಸಿ ಕೃತ್ಯದಿಂದ ಲೈಂಗಿಕ ದೌರ್ಜನ್ಯ ಎಸಗಿರುವ ದುಷ್ಕರ್ಮಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿ ಜೈಭೀಮ್ ಪ್ರಬುದ್ದ ಸೇನಾ ಸಮಿತಿ ಪದಾಧಿಕಾರಿಗಳು ನಗರದ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು ನಂತರ ಮೆರವಣಿಗೆಯ ಮೂಲಕ ಉಪವಿಭಾಗಾಧಿಕಾರಿ ಕಚೇರಿಗೆ ತೆರಳಿ  ಮನವಿ ಸಲ್ಲಿಸಿದರು.
ಈ ವೇಳೆ ಸಮಿತಿಯ ರಾಜ್ಯಾಧ್ಯಕ್ಷ ಜಿ.ಎನ್ ಸತ್ಯಪ್ಪ ಮಾತನಾಡಿ ದೇಶದಲ್ಲಿ ಆಗುತ್ತಿರುವ ಅನ್ಯಾಯಗಳು, ದೌರ್ಜನ್ಯಗಳಿಂದ ಮುಕ್ತಿ ಸಿಗಬೇಕಾದರೆ, ಕಠಿಣ ಕಾನೂನು ಜಾರಿಗೊಳಿಸಬೇಕು. ಅತ್ಯಾಚಾರಿಗಳಿಗೆ ಕಾನೂನು ರೀತಿ ಶಿಕ್ಷೆಯನ್ನು ನೀಡಬೇಕೆಂದು ಆಗ್ರಹಿಸಿದರು.ಮಣಿಪುರ ರಾಜ್ಯ ಜನಾಂಗೀಯ ಸಂಘರ್ಷ ಹಾಗೂ ಹಿಂಸಾಚಾರಗಳಿಂದ ನಲುಗಿ ಹೋಗಿದೆ. ಮಣಿಪುರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದರು.ಕುಕಿ ಸಮುದಾಯದ ಇಬ್ಬರು ಮಹಿಳೆಯರನ್ನು ಬೆತ್ತಲೆ ಮಾಡಿ, ಲೈಂಗಿಕ ದೌರ್ಜನ್ಯ ನಡೆಸಿರುವುದು ಮನುಕುಲವೇ ತಲೆತಗ್ಗಿಸುವಂತಹ ರಾಕ್ಷಸಿ ಕೃತ್ಯವಾಗಿದೆ. ಮಣಿಪುರ ರಾಜ್ಯದ ಮುಖ್ಯಮಂತ್ರಿ ಬೀರೇನ್‌ಸಿಂಗ್ ಸರ್ಕಾರವನ್ನು ವಜಾಗೊಳಿಸಿ,ರಾಷ್ಟ್ರಪತಿ ಆಡಳಿತ ಜಾರಿಗೊಳಿಸಬೇಕು.ಹಾಗೂ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆ, ವಿಟ್ಲದಲ್ಲಿ ದಲಿತ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆಗೆ ಒಳಪಡಿಸಬೇಕು. ಧರ್ಮಸ್ಥಳದಲ್ಲಿ ಸೌಜನ್ಯರ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆಯ ಆರೋಪಿಯ ಪತ್ತೆಗಾಗಿ ನಿಷ್ಪಕ್ಷಪಾತ ಉನ್ನತ ನ್ಯಾಯಾಂಗ ತನಿಖೆ ನಡೆಸುವಂತೆ ಇದೇ ವೇಳೆ ಒತ್ತಾಯಿಸಿದರು.  ದೇಶದಲ್ಲಿ ಮಹಿಳೆಯರಿಗೆ ಭದ್ರತೆಯಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿರುವುದಕ್ಕೆ ಕರ್ನಾಟಕ ರಾಜ್ಯದ, ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ ಮತಾಂದರು, ದಲಿತ ಅಪ್ರಾಪ್ತ ಬಾಲಕಿಯ ಮೇಲೆ  ಲೈಂಗಿಕ ಅತ್ಯಾಚಾರ ನಡೆಸಿದ್ದಾರೆ. ಇಂತಹ ಅಮಾನವೀಯ ಕೃತ್ಯಗಳು ದೇಶವ್ಯಾಪಿ ನಡೆಯುತ್ತಿದ್ದು ಮುಖ್ಯವಾಗಿ ದಲಿತ ವರ್ಗಗಳಿಗೆ ಯಾವುದೇ ರಕ್ಷಣೆಯಲ್ಲದಂತಾಗಿದೆ. ಮಣಿಪುರದಲ್ಲಿ ನಡೆದ ಆತ್ಯಾಚಾರಿಗಳಿಗೆ ಮತ್ತು ವಿಟ್ಲದಲ್ಲಿ ನಡೆದ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.