ಅತ್ಯಾಚಾರ:ದುಷ್ಕರ್ಮಿಗಳ ಬಂಧನಕ್ಕೆ ಒತ್ತಾಯ

ಲಿಂಗಸುಗೂರು.ಏ.೦೨-ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣದಲ್ಲಿ ೧೪ ವರ್ಷದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗಿ ಕೊಲೆಗೈದ ದುಷ್ಕರ್ಮಿಗಳನ್ನು ಬಂಧಿಸಿ ಗಲ್ಲು ಶಿಕ್ಷೆಗೆ ಗುರಿ ಪಡಿಸಬೇಕೆಂದು ಒತ್ತಾಯಿಸಿ ಮಾದಿಗ ಮೀಸಲಾತಿ ಹೋರಾಟ ಸಮಿತಿ ಮುಖಂಡರು ಎಸಿ ಕಚೇರಿ ತಹಸೀಲ್ದಾರ್ ಶಮ್ ಶಾಲಂರಿಗೆ ಮನವಿ ಸಲ್ಲಿಸಿದರು.
ನರಗುಂದ ಪಟ್ಟಣದ ನಿವಾಸಿಯಾದ ವಿದ್ಯಾರ್ಥಿನಿಯನ್ನು ಒತ್ತಾಯ ಪೂರ್ವಕವಾಗಿ ರಾಮದುರ್ಗ ಪಟ್ಟಣಕ್ಕೆ ಕರೆದುಕೊಂಡು ಹೋಗಿ ಸಾಮೂಹಿಕ ಅತ್ಯಾಚಾರವೆಸಗಿ ಆಕೆಯ ಮೇಲೆ ಆಸಿಡ್ ಎರಚಿ ವಿಕೃತಗೊಳಿಸಿ ಕೊಲೆ ಮಾಡಿರುವುದು ನಾಗರಿಕ ಸಮಾಜ ತಲೆ ತಗ್ಗಿಸುವ ಘಟನೆಯಾಗಿದೆ. ಸರ್ಕಾರ ಇಂತಹ ದುಷ್ಕೃತ್ಯವೆಸಗಿದ ದುಷ್ಕರ್ಮಿಗಳನ್ನು ಬಂಧಿಸಿ ಗಲ್ಲು ಶಿಕ್ಷೆ ವಿಧಿಸಬೇಕು.
ನೊಂದ ವಿದ್ಯಾರ್ಥಿನಿ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು. ಮುಂದೆ ದಲಿತರ ಮೇಲೆ ಅನ್ಯಾಯ, ಅತ್ಯಾಚಾರ ನಡೆಯುವುದನ್ನು ತಡೆಗಟ್ಟಲು ಮುನ್ನೆಚ್ಚರಿಕೆ ಕ್ರಮ ವಹಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಸಮಿತಿ ತಾಲೂಕು ಗೌರವಾಧ್ಯಕ್ಷ ಬಸಪ್ಪ ಕೋಠ, ಪ್ರಧಾನ ಕಾರ್ಯದರ್ಶಿ ದೇವರಾಜ ಗೊರೇಬಾಳ, ಉಪಾಧ್ಯಕ್ಷ ನಿರುಪಾದಿ ಶೀಲಹಳ್ಳಿ, ಮುಖಂಡರಾದ ಶಶಿಕುಮಾರ, ಸಂಗಮೇಶ, ಸೋಮಪ್ಪ ಸೇರಿದಂತೆ ಇತರರು ಇದ್ದರು.