ಅತ್ತೆಯ ಸಾವಿನ ಸುದ್ದಿ ಕೇಳಿ ಹೃದಯಾಘಾತದಿಂದ ಮೃತಪಟ್ಟ ಅಳಿಯ!

ಶಿವಮೊಗ್ಗ, ನ. 21: ಸೋದರತ್ತೆಯ ಸಾವಿನ ಸುದ್ದಿ ತಿಳಿದ ಅಳಿಯ ಹೃದಯಾಘಾತದಿಂದ ಮೃತಪಟ್ಟ ದಾರುಣ ಘಟನೆ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕು ಲಿಂಗನಮಕ್ಕಿ ಗ್ರಾಮದಲ್ಲಿ ನಡೆದಿದೆ. ಸೋದರತ್ತೆ ಲಕ್ಷ್ಮಮ್ಮ (58) ಹಾಗೂ ಅವರ ಅಳಿಯ ಗುಲ್ಫತ್ ಸಿಂಗ್ (45) ಮೃತಪಟ್ಟವರೆಂದು ಗುರುತಿಸಲಾಗಿದೆ. ಲಕ್ಷ್ಮಮ್ಮ ಅವರು ಭಾನುವಾರ ಬೆಂಗಳೂರಿನಲ್ಲಿರುವ ಸಂಬಂಧಿಕರೋರ್ವರ ಮನೆಗೆ, ಲಿಂಗನಮಕ್ಕಿಯಿಂದ ಕೆ.ಎಸ್.ಆರ್.ಟಿ.ಸಿ. ಬಸ್ ನಲ್ಲಿ ಹೊರಟಿದ್ದರು. ಗುಲ್ಫತ್ ಸಿಂಗ್ ಅವರೇ ಸೋದರತ್ತೆಯನ್ನು ಬಸ್ ನಲ್ಲಿ ಕುಳ್ಳರಿಸಿ ಬಂದಿದ್ದರು. ಬಸ್ ಆನಂದಪುರ ತಲುಪಿದ ವೇಳೆ, ಲಕ್ಷ್ಮಮ್ಮ ಅವರಿಗೆ ಹೃದಯಾಘಾತಕ್ಕೀಡಾಗಿ ಅಸುನೀಗಿದ್ದರು. ಈ ಕುರಿತಂತೆ ಬಸ್ ಸಿಬ್ಬಂದಿ ಲಕ್ಷ್ಮಮ್ಮ ಅವರ ಸಂಬಂಧಿಕರಿಗೆ ಮೊಬೈಲ್ ಫೋನ್ ಮೂಲಕ ಮಾಹಿತಿ ರವಾನಿಸಿದ್ದರು.ತಕ್ಷಣವೇ ಸಂಬಂಧಿಗಳು ಗುಲ್ಫತ್ ಸಿಂಗ್ ಅವರ ಮೊಬೈಲ್ ಫೋನ್ ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಲಿಂಗನಮಕ್ಕಿಯಿಂದ ನಡೆದುಕೊಂಡು ಮನೆಗೆ ಹಿಂದಿರುಗುತ್ತಿದ್ದ ಗುಲ್ಫತ್ ಸಿಂಗ್, ಸೋದರತ್ತೆಯ ಸಾವಿನ ಸುದ್ದಿ ಕೇಳಿ ಕುಸಿದು ಬಿದ್ದಿದ್ದಾರೆ. ಅವರು ಕೂಡ ಹೃದಯಾಘಾತಕ್ಕೊಳಗಾಗಿ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.