ಅತ್ತನೂರು:ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಿ- ಆರ್.ವಿ.ಎನ್

ಸಿರವಾರ.ಏ.೧೯- ಬಾಬಾ ಸಾಹೇಬ ಅಂಬೇಡ್ಕರ್ ರವರು ದಲಿತರ ಸೂರ್ಯ, ಭಾರತ ಕಂಡ ಅಪ್ರತಿಮ ನಾಯಕ. ಶಿಕ್ಷಣದ ಮೂಲಕ ಸಮಾನತೆ ತರಲು ಸಾಧ್ಯವಾಗುತ್ತದೆ ಎಂದು ತೊರಿಸಿಕೊಟ್ಟಿದ್ದಾರೆ ಆದರಿಂದ ಎಲ್ಲಾರೂ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಮಾನ್ವಿ ಶಾಸಕ ರಾಜಾ ವೆಂಕಟಪ್ಪ ನಾಯಕ ಅಭಿಪ್ರಾಯ ಪಟ್ಟರು.
ತಾಲೂಕಿನ ಅತ್ತನೂರು ಗ್ರಾಮದಲ್ಲಿ ಬಾನುವಾರ ಡಾ.ಬಿ.ಆರ್.ಅಂಬೇಡ್ಕರ್ ಯುವಕ ಮಂಡಳಿ ವತಿಯಿಂದ ಹಮ್ಮಿಕೊಂಡಿದ್ದ ಭಾರತ ರತ್ನ, ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ರವರ ೧೩೦ನೇ ಜಯಂತಿ ಹಾಗೂ ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನ್ ರಾಮ್ ಅವರ ಜಯಂತಿ ಅಂಗವಾಗಿ ಲವ್ಲಿ ಸ್ಟಾರ್ ಟೀಮ್ ವತಿಯಿಂದ ಹಮ್ಮಿಕೊಂಡಿದ್ದ ಕ್ರಿಕೆಟ್ ಟ್ರೋಫಿ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಅಂಬೇಡ್ಕರ್ ಅವರ ರಚನೆಯ ಸಂವಿಧಾನದಿಂದಲೇ ನಾವು ಇಲ್ಲಿ ಉಸಿರಾಡಲು ಸಾಧ್ಯವಾಗುತ್ತಿದೆ. ಒಂದು ವೇಳೆ ಅಂಬೇಡ್ಕರ್ ನಮ್ಮ ದೇಶದಲ್ಲಿ ಹುಟ್ಟದೇ ಇದ್ದಲ್ಲಿ ನಮ್ಮ ಪರಿಸ್ಥಿತಿ ಊಹಿಸಿಕೊಳ್ಳಲು ಸಹ ಸಾಧ್ಯವಾಗುತ್ತಿರಲಿಲ್ಲ.
ಸತತ ಪ್ರಯತ್ನದ ಮೂಲಕ ಯಶಸ್ಸು ಸಾಧ್ಯ. ಅಂಬೇಡ್ಕರ್ ಅವರು ನಮ್ಮ ದೇಶಕ್ಕೆ ನೀಡಿದ ಕೊಡುಗೆ ಅಪಾರವಾದದ್ದು. ಅವರ ತತ್ವ ಆದರ್ಶ ಇಂದಿನ ಯುವ ಪೀಳಿಗೆಗೆ ಮಾದರಿ. ಬಡತನ ಮತ್ತು ಹಸಿವನ್ನು ನೀಗಿಸಲು ಶಿಕ್ಷಣ ಅತ್ಯಂತ ಅವಶ್ಯಕ.
ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕೇವಲ ಒಂದೇ ಒಂದು ಸಮಾಜದ ಜನರ ಉದ್ಧಾರಕ್ಕಾಗಿ ಶ್ರಮಿಸಿದವರಲ್ಲ, ಇಡೀ ಸಮಾಜದ ಜನರ ಏಳ್ಗೆಗಾಗಿ ಹಗಲಿರುಳು ಶ್ರಮಿಸಿದ ಮಹಾನಾಯಕ.
ಕ್ರೀಡೆಗಳಲ್ಲಿ ಸೋಲು ಗೆಲುವು ಸಾಮಾನ್ಯ. ಎರಡನ್ನು ಸಮಾನವಾಗಿ ಸ್ವೀಕರಿಸಬೇಕು ಇಂದಿನ ಸೋಲೆ ಮುಂದಿನ ಗೆಲುವಿಗೆ ಕಾರಣವಾಗಲಿದೆ ಎಂದರು.
ಕಲ್ಲೂರು ಜಿ. ಪಂ. ಸದಸ್ಯ ಮಹಾಂತೇಶ ಪಾಟೀಲ್ ಮಾತನಾಡಿ, ವಿಶ್ವದಲ್ಲೇ ಅತೀ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಎಂಬ ಹೆಗ್ಗಳಿಕೆ ಕೇವಲ ಭಾರತದ್ದು. ಆದರೆ, ಈ ಪ್ರಜಾಪ್ರಭುತ್ವಕ್ಕೆ ಮೂಲ ಆಧಾರವೇ ಬಾಬಾ ಸಾಹೇಬರ ರಚನೆಯ ಸಂವಿಧಾನ.
ನಮ್ಮ ದೇಶದ ಸಂವಿಧಾನಕ್ಕೆ ತನ್ನದೆ ಆದಂತಹ ಇತಿಹಾಸ, ಮಹತ್ವ ಹಾಗೂ ಲಿಖಿತ ಸ್ವರೂಪವಿದೆ. ಜಗತ್ತಿನಲ್ಲಿಯೇ ಅತಿದೊಡ್ಡ ಲಿಖಿತ ಸಂವಿಧಾನ ನಮ್ಮದು. ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರಿಂದ ರಚನೆಯಾಗಿರುವ ಸಂವಿಧಾನದಲ್ಲಿ, ಎಲ್ಲಾ ವರ್ಗಗಳ, ಎಲ್ಲ ಸ್ತರದ ಜನರ ಹಿತವಿದೆ. ಜೊತೆಗೆ ನಮ್ಮ ದೇಶದ ಪ್ರಜಾಪ್ರಭುತ್ವದ ಭದ್ರ ಬುನಾದಿಯೂ ನಮ್ಮ ಸಂವಿಧಾನ ಎಂದರು.
ಎಮ್.ಆರ್. ಭೇರಿ, ಜಂಬುನಾಥ ಯಾದವ್, ಭೀಮರಾಯ ಸ್ವಾಮಿ, ಶಿವಣ್ಣ ಆಲ್ಕೋಡ ಮಾತನಾಡಿದರು.
ಬಹುಮಾನ ವಿತರಣೆ: ಡಾ.ಬಿ.ಆರ್.ಅಂಬೇಡ್ಕರ್ ರವರ ಜಯಂತಿಯ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಮಹಾ ನಾಯಕ ಕ್ರಿಕೆಟ್ ಟ್ರೋಫಿ ಕ್ರಿಕೆಟ್ ಪಂದ್ಯದಲ್ಲಿ ವಿಜೇತರ ತಂಡಗಳಿಗೆ ಪ್ರಥಮ ಹಾಗೂ ದ್ವಿತೀಯ ಸ್ಥಾನಗಳಿಗೆ ಬಹುಮಾನ ಹಾಗೂ ಟ್ರೋಫಿ ನೀಡಲಾಯಿತು.
ಸನ್ಮಾನ: ನೂತನವಾಗಿ ಆಯ್ಕೆಯಾದ ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಮಾದಿಗ ಸಮುದಾಯದ ನೌಕರರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಜನಬಲ ಟೈಮ್ಸ್ ದಿನ ಪತ್ರಿಕೆಯ ಸಂಪಾದಕ ಅಂಬಣ್ಣ ಅರೋಲಿಕರ್, ರಾಜಾ ರಾಮಚಂದ್ರ ನಾಯಕ, ಪಿ.ರವಿ ಕುಮಾರ್, ನವೀನ್ ಪಾಟೀಲ್, ಪಕೀರಪ್ಪ, ಹನುಮಂತ ಮನ್ನಾಪುರಿ, ನರಸಪ್ಪ ದಂಡೋರಾ, ಅಬ್ರಾಹಂ ಹೊನ್ನಟಗಿ, ಬಸವರಾಜ ಭಂಡಾರಿ, ರಾಜು ಬೊಮ್ಮನಾಳ, ಹನುಮಂತ್ರಾಯ ಗಚ್ಚಿನಮನೆ, ಪೆದ್ದಯ್ಯ ನಾಯಕ, ಈರಣ್ಣ, ಆಂಜನೇಯ ಮಳ್ಳಿ, ಕೆಂಪಯ್ಯ, ಈರಪ್ಪ ನಾಯಕ ಸೇರಿದಂತೆ ಇನ್ನಿತರ ದಲಿತ ಮುಖಂಡರು ಉಪಸ್ಥಿತರಿದ್ದರು.
ಶಿಕ್ಷಕ ಬಸವರಾಜ ಜಗ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ದಿಡ್ಡಿ ಬಸವ ಬೇರಿ ಹಾಗೂ ವಿರುಪಾಕ್ಷಿ ಅವರು ಕಾರ್ಯಕ್ರಮ ನಿರೂಪಿಸಿದರೆ, ಹನುಮಂತ ಮಾಸ್ತರ ವಂದಿಸಿದರು.