ಅತೃಪ್ತರಿಗೆ ಹೆದರಲಾರೆ : ಬಿಎಸ್‌ವೈ

ದಾವಣಗೆರೆ, ಜ. ೧೪- ಕೇಂದ್ರ ನಾಯಕರ ಅಪೇಕ್ಷೆ ಹಾಗೂ ಸೂಚನೆಯಂತೆ ಯಶಸ್ವಿಯಾಗಿ ಸಂಪುಟ ವಿಸ್ತರಣೆ ಮಾಡಿದ್ದೇನೆ. ಕೇಂದ್ರ ನಾಯಕರ ಆಶೀರ್ವಾದ ಇರುವವರೆಗೂ ಯಾರೂ ಏನೂ ಮಾಡಿಕೊಳ್ಳಲು ಆಗುವುದಿಲ್ಲ. ಯಾವುದಕ್ಕೂ ನಾನು ಹೆದರುವುದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪರೋಕ್ಷವಾಗಿ ಸಿ.ಡಿ. ಗುಮ್ಮ ವಿಚಾರಕ್ಕೆ ತಿರುಗೇಟು ನೀಡಿದ್ದಾರೆ.
ಹರಿಹರದಲ್ಲಿ ಇಂದು ನಡೆದಿರುವ ಹರ ಜಾತ್ರೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ ಅವರು ಇಲ್ಲಿನ ಜಿ.ಎಂ.ಐ.ಟಿ. ಕಾಲೇಜಿನ ಹೆಲಿಪ್ಯಾಡ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕೇಂದ್ರದ ನಾಯಕರು ಹೇಳಿದಂತೆ ಎರಡೂವರೆ ವರ್ಷ ಉತ್ತಮ ಆಡಳಿತ ನೀಡುತ್ತೇನೆ. ಕೇಂದ್ರದ ನಾಯಕರ ಆಶೀರ್ವಾದ ಇರುವುದರಿಂದ ಒಳ್ಳೆಯ ಆಡಳಿತ ನೀಡಲು ಯಾವುದೇ ತೊಂದರೆ ಇಲ್ಲ. ಯಾರು ಏನೂ ಬೇಕಾದರೂ ಮಾತನಾಡಿಕೊಳ್ಳಲಿ, ಏನೂ ಮಾಡಿಕೊಳ್ಳಲು ಆಗುವುದಿಲ್ಲ ಎಂದರು.
ಸಂಪುಟ ವಿಸ್ತರಣೆಯಾದ ಬೆನ್ನಲ್ಲೆ ಕೆಲವರು ಸಿ.ಡಿ. ವಿಚಾರ ಹರಿ ಬಿಟ್ಟಿರುವ ಬಗ್ಗೆ ಪರೋಕ್ಷವಾಗಿ ಪ್ರಸ್ತಾಪಿಸಿದ ಅವರು, ನಾನು ಯಾವುದಕ್ಕೂ ಹೆದರುವುದಿಲ್ಲ ಎಂದು ಗುಡುಗಿದರು.
ಕೇಂದ್ರ ನಾಯಕರ ಅಪೇಕ್ಷಯಂತೆ ಒಂದು ಸಚಿವ ಸ್ಥಾನ ಖಾಲಿ ಇಟ್ಟುಕೊಂಡು ಸಂಪುಟ ವಿಸ್ತರಣೆ ಮಾಡಿದ್ದೇನೆ. ೧೦-೧೨ ಶಾಸಕರು ಮಂತ್ರಿ ಮಾಡಿಲ್ಲ ಎಂದು ಆರೋಪ ಮಾಡುತ್ತಿದ್ದಾರೆ. ನನ್ನ ಇತಿ ಮಿತಿಯೊಳಗೆ ಏನು ಮಾಡಲು ಸಾಧ್ಯವೋ ಅದನ್ನೆಲ್ಲ ಮಾಡಿದ್ದೇನೆ ಎಂದರು.
ಮಂತ್ರಿ ಮಾಡಿಲ್ಲ ಎಂದು ಆರೋಪ ಮಾಡಿರುವವರು ಕೇಂದ್ರ ನಾಯಕರಿಗೆ ದೂರು ಕೊಡಲಿ. ಯಾರೂ ಅಡ್ಡಿ ಮಾಡಲ್ಲ ಎಂದ ಅವರು, ಬಹಿರಂಗ ಹೇಳಿಕೆ ಕೊಡುವ ಮೂಲಕ ಗೊಂದಲ ವಾತಾವರಣ ಸೃಷ್ಠಿಸಿ ಪಕ್ಷದ ಶಿಸ್ತಿಗೆ ಧಕ್ಕೆ ತರುವುದು ಬೇಡ ಎಂದರು.
ಸಂಪುಟ ವಿಸ್ತರಣೆಯಿಂದ ಅಸಮಾಧಾನಗೊಂಡಿರುವವರು ಬಹಿರಂಗ ಹೇಳಿಕೆ ನೀಡುವುದು ಸಲ್ಲದು. ಇದರಿಂದ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗುತ್ತದೆ ಎಂದು ಅವರು ಹೇಳಿದರು.
ಈ ತಿಂಗಳ ಕೊನೆಯಲ್ಲಿ ವಿಧಾನ ಮಂಡಲದ ಜಂಟಿ ಅಧಿವೇಶನ ನಡೆಯಲಿದೆ. ಮಾರ್ಚ್‌ನಲ್ಲಿ ಬಜೆಟ್ ಅಧಿವೇಶನ ಇದೆ. ಹಣಕಾಸಿನ ಇತಿಮಿತಿಯಲ್ಲಿ ರೈತಪರ ಬಜೆಟ್ ಮಂಡಿಸುತ್ತೇನೆ ಎಂದು ಅವರು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.
ಈ ಸಂದರ್ಭದಲ್ಲಿ ಕೇಂದ್ರದ ಮಾಜಿ ಸಚಿವ ಹಾಗೂ ಸಂಸದ ಜಿ.ಎಂ. ಸಿದ್ದೇಶ್ವರ್, ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜು, ಶಾಸಕ ರವೀಂದ್ರನಾಥ್ ಮತ್ತಿತರರು ಉಪಸ್ಥಿತರಿದ್ದರು.