
ಬೆಂಗಳೂರು ಜ. ೧೪- ಸಚಿವ ಸಂಪುಟ ವಿಸ್ತರಣೆಯಾದ ಬೆನ್ನಲ್ಲೇ ಬಿಜೆಪಿಯನ್ನು ಭಿನ್ನಮತ ಸ್ಫೋಟಗೊಂಡು ನಾಯಕತ್ವದ ವಿರುದ್ಧ ಸಿಡಿದೆದ್ದ ಶಾಸಕರಿಗೆ ಖಡಕ್ ಎಚ್ಚರಿಕೆ ನೀಡಿರುವ ಮುಖ್ಯಮಂತ್ರಿ ಯಡಿಯೂರಪ್ಪನವರು ಯಾರು ಹಗುರವಾಗಿ ಮಾತನಾಡಬೇಡಿ ಬೇಕಿದ್ದರೆ ಹೈಕಮಾಂಡಿಗೆ ದೂರು ನೀಡಿ ಎಂದು ಎಂದು ಗುಡುಗಿದ್ದಾರೆ.
ಮಕರ ಸಂಕ್ರಾಂತಿಯ ಶುಭ ದಿನವಾದ ಇಂದು ತಮ್ಮ ಅಧಿಕೃತ ನಿವಾಸ ಕಾವೇರಿಯಲ್ಲಿ ಗೋ ಪೂಜೆ ನೆರವೇರಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಂಪುಟ ವಿಸ್ತರಣೆ ಆದನಂತರ ಹಲವು ಶಾಸಕರು ತರಹೇವಾರಿ ಮಾತುಗಳನ್ನು ಆಡುತ್ತಿರುವುದಕ್ಕೆ ಗರಂ ಆಗಿ ಪಕ್ಷದ ವರ್ಚಸ್ಸಿಗೆ ದಕ್ಕೆ ತರುವ ರೀತಿಯಲ್ಲಿ ಮಾತನಾಡುವುದು ಬೇಡ ಅಸಮಾಧಾನ ಅತೃಪ್ತಿ ಇದ್ದರೆ ದೆಹಲಿಗೆ ಹೋಗಿ ವರಿಷ್ಠರಿಗೆ ದೂರು ನೀಡಬಹುದು ಎಂದು ಹೇಳಿದರು.
ಪಕ್ಷದ ವರಿಷ್ಠರಿಗೆ ಸರಿ ಯಾವುದು ತಪ್ಪು ಯಾವುದು ಎಲ್ಲವೂ ಗೊತ್ತಿದೆ ಹಾಗಾಗಿ ಅಸಮಾಧಾನಗೊಂಡಿರುವರು ಬಾಯಿಗೆ ಬಂದಂಗೆ ಮಾತನಾಡುವುದನ್ನು ಬಿಟ್ಟು ವರಿಷ್ಠರಿಗೆ ದೂರು ನೀಡಲಿ ನನ್ನದೇನೂ ಅಭ್ಯಂತರವಿಲ್ಲ ಎಂದರು.
ಸಂಪುಟ ವಿಸ್ತರಣೆ ಎಲ್ಲವೂ ವರಿಷ್ಠರ ತೀರ್ಮಾನದಂತೆ ಆಗಿದೆ ಹಾಗಾಗಿ ಶಾಸಕರು ಹಗುರವಾಗಿ ಮಾತನಾಡಿ ಪಕ್ಷದ ವರ್ಚಸ್ಸಿಗೆ ಧಕ್ಕೆ ತರುವುದು ಬೇಡ ಎಂದು ಅವರು ಹೇಳಿದರು.
ಯಾವುದೇ ಅಸಮಾಧಾನ ಅತೃಪ್ತಿ ಇದ್ದರೆ ದೆಹಲಿ ನಾಯಕರನ್ನು ಭೇಟಿ ಮಾಡಿ ಎಲ್ಲವನ್ನು ಪರಿಹರಿಸಿಕೊಳ್ಳಿ ಸುಖಾಸುಮ್ಮನೆ ಮಾತನಾಡಬೇಡಿ ಎಂದು ಅವರು ನಾಯಕತ್ವದ ವಿರುದ್ಧ ಧ್ವನಿ ಎತ್ತಿರುವ ಕೆಲ ಶಾಸಕರಿಗೆ ನಯವಾಗಿಯೇ ಚಾಟಿ ಬೀಸಿದ್ದಾರೆ .
ಏನೇ ಬೆಳವಣಿಗೆಗಳು ಆದರು ವರಿಷ್ಠರು ಸೂಕ್ತ ಕ್ರಮ ಕೈಗೊಳ್ಳುತ್ತಾರೆ ತಾವು ಶಾಸಕರುಗಳು ಮಾತುಗಳಿಗೆ ಹೆಚ್ಚು ತಲೆಕೆಡಿಸಿಕೊಳ್ಳದೆ ಅಭಿವೃದ್ಧಿ ಕಾರ್ಯಗಳತ್ತ ಗಮನ ನೀಡುವುದಾಗಿ ಅವರು ಹೇಳಿದರು.