ನವದೆಹಲಿ, ಏ.೧೮- ದರೋಡೆಕೋರ- ರಾಜಕಾರಣಿ ಅತೀಕ್ ಅಹ್ಮದ್ ಹಾಗೂ ಆತನ ಸಹೋದರ ಅಶ್ರಫ್ ಅವರನ್ನು ಪೊಲೀಸ್ ಬೆಂಗಾವಲಿನಲ್ಲಿ ಗುಂಡಿಕ್ಕಿ ಹತ್ಯೆಗೈದ ತನಿಖೆಗೆ ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಾಧೀಶರ ನೇತೃತ್ವದ ಸ್ವತಂತ್ರ ತಜ್ಞರ ಸಮಿತಿಯನ್ನು ರಚಿಸುವಂತೆ ಕೋರಿದ ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್ ಸಮ್ಮತಿ ಸೂಚಿಸಿದೆ.
ವಕೀಲ ವಿಶಾಲ್ ತಿವಾರಿ ಅವರು ಸಲ್ಲಿಸಿದ ಮನವಿಯಲ್ಲಿ ೨೦೧೭ ರಿಂದ ಉತ್ತರ ಪ್ರದೇಶದಲ್ಲಿ ನಡೆದ ೧೮೩ ಎನ್‌ಕೌಂಟರ್‌ಗಳ ಬಗ್ಗೆ ತನಿಖೆ ನಡೆಸಬೇಕು ಎಂದು ಕೋರಿದರು. ಅತೀಕ್ ಹಾಗೂ ಅಶ್ರಫ್ ಹತ್ಯೆಗಳ ತನಿಖೆಗೆ ಸ್ವತಂತ್ರ ತಜ್ಞರ ಸಮಿತಿಯನ್ನು ರಚಿಸುವಂತೆ ಮನವಿಯಲ್ಲಿ ಕೋರಲಾಗಿದೆ.ಇದಕ್ಕೆ ಸುಪ್ರೀಂ ಕೋರ್ಟ್ ಪ್ರತಿಕ್ರಿಯಿಸಿ, ವಿಚಾರಣೆಗೆ ಮುಂದಾಗಿದೆ ಎಂದು ಹೇಳಲಾಗುತ್ತಿದೆ.ಶನಿವಾರ ರಾತ್ರಿ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿರುವ ವೈದ್ಯಕೀಯ ಕಾಲೇಜಿಗೆ ತಪಾಸಣೆಗಾಗಿ ಪೊಲೀಸ್ ಸಿಬ್ಬಂದಿ ಬೆಂಗಾವಲಾಗಿ ಹೋಗುತ್ತಿದ್ದಾಗ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದಾಗ ಪತ್ರಕರ್ತರಂತೆ ಸೋಗು ಹಾಕಿದ್ದ ಮೂವರು ವ್ಯಕ್ತಿಗಳು ಕೈಕೋಳದಲ್ಲಿದ್ದ ಅಹ್ಮದ್ (೬೦) ಹಾಗೂ ಅಶ್ರಫ್ ಅವರನ್ನು ಗುಂಡಿಕ್ಕಿ ಕೊಂದಿದ್ದಾರೆ. ಮುಖ್ಯಮಂತ್ರಿ ಆದಿತ್ಯನಾಥ್ ನೇತೃತ್ವದ ಸರ್ಕಾರದ ಆರು ವರ್ಷಗಳಲ್ಲಿ ಎನ್‌ಕೌಂಟರ್‌ಗಳಲ್ಲಿ ೧೮೩ ಅಪರಾಧಿಗಳನ್ನು ಹೊಡೆದುರುಳಿಸಲಾಗಿದೆ. ಇದರಲ್ಲಿ ಅತೀಕ್ ಅಹ್ಮದ್ ಪುತ್ರ ಅಸದ್ ಹಾಗೂ ಆತನ ಸಹಚರರು ಸೇರಿದ್ದಾರೆ ಎಂದು ಉತ್ತರ ಪ್ರದೇಶ ಪೊಲೀಸರು ಹೇಳಿದ್ದಾರೆ.