ಅತಿ ಹೆಚ್ಚು ಅಂಕಪಡೆದ ವಿದ್ಯಾರ್ಥಿಗಳಿಗೆ ಲ್ಯಾಪ್‍ಟ್ಯಾಪ್ ವಿತರಣೆ


ಸಂಜೆವಾಣಿ ವಾರ್ತೆ
ಸಿರಗುಪ್ಪ, ಜು.31: ಸರ್ಕಾರವು ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲು ಅನೇಕ ಸೌಲಭ್ಯಗಳನ್ನು ನೀಡುತ್ತಿದ್ದು, ಸೌಲಭ್ಯಗಳನ್ನು ಪಡೆದು ವಿದ್ಯಾಭ್ಯಾಸದ ಕಡೆ ಗಮನಕೊಟ್ಟು ಅತಿ ಹೆಚ್ಚು ಅಂಕ ಪಡೆದು ನಿಮ್ಮ ತಂದೆ ತಾಯಿಗಳಿಗೆ ಹಾಗೂ ತಾಲೂಕಿಗೆ ಕೀರ್ತಿ ತರಬೇಕೆಂದು ಶಾಸಕ ಎಂ.ಎಸ್.ಸೋಮಲಿಂಗಪ್ಪ ಹೇಳಿದರು.
 ನಗರದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಶಿಕ್ಷಣ ಇಲಾಖೆ ವತಿಯಿಂದ ನಡೆದ 2020-21ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಸರ್ಕಾರಿ ಶಾಲೆ ಅತಿ ಹೆಚ್ಚು ಅಂಕಪಡೆದ ವಿದ್ಯಾರ್ಥಿಗಳಿಗೆ ಶನಿವಾರ ಲ್ಯಾಪ್‍ಟ್ಯಾಪ್ ವಿತರಿಸಿ ಮಾತನಾಡಿದ ಅವರು ಇಂದು ಸ್ಮಾರ್ಟ್ ಫೋನ್‍ಗಳ ಬಳಕೆಯಿಂದಾಗಿ ವಿದ್ಯಾರ್ಥಿಗಳ ವಿದ್ಯಾಭ್ಯಾಸ ಹಾಳಾಗುತ್ತಿದೆ. ಫೋನ್‍ಗಳಿಂದ ಬಹಳಷ್ಟು ಜ್ಞಾನ ಪಡೆಯಲು ಅವಕಾಶವಿದ್ದರೂ ಇಂದು ದುರ್ಬಳಕೆಯೇ ಹೆಚ್ಚಾಗುತ್ತಿದೆ. ವಿದ್ಯಾರ್ಥಿಗಳು ಕೇವಲ ಶಿಕ್ಷಕರು ಹೇಳುವ ಪಾಠಗಳ ಕಡೆ ಮಾತ್ರ ಗಮನ ನೀಡಿ ಅವರ ಮಾರ್ಗದರ್ಶನದಲ್ಲಿ ಓದಿದರೆ ಉನ್ನತ ಮಟ್ಟಕ್ಕೆ ಬೆಳೆಯಲು ಸಾಧ್ಯ.
ಆದ್ದರಿಂದ ಪ್ರತಿಯೊಬ್ಬ ವಿದ್ಯಾರ್ಥಿಗಳು ವಿನಾ ಕಾರಣ ಅಲೆಯದೆ ಸಮಯ ವ್ಯರ್ಥಮಾಡದೆ ವಿದ್ಯಾಭ್ಯಾಸ ಮಾಡಬೇಕು. ಕೇವಲ ಪರೀಕ್ಷೆ ಸಮಯದಲ್ಲಿ ಓದಲು ಕುಳಿತರೆ ಸಾಲದು ಪ್ರತಿ ದಿನ ಓದಬೇಕೆಂದು ಸಲಹೆ ನೀಡಿದರು.
ಬಿ.ಇ.ಒ. ಪಿ.ಡಿ.ಭಜಂತ್ರಿ, ಬಿಆರ್‍ಪಿ ಯೋಗಾನಂದಯ್ಯ, ಮುಖ್ಯಗುರು ವೆಂಕಟೇಶ ಯಾದವ್, ಪ್ರಥಮ ದರ್ಜೆ ಸಹಾಯಕ ಪ್ರಹ್ಲಾದ, ಮುಖಂಡರಾದ ಆರ್.ಸಿ.ಪಂಪನಗೌಡ, ಎಂ.ವೀರೇಶ, ಮಹಾದೇವ, ಶಿವಗಣೇಶ ಹಾಗೂ ವಿದ್ಯಾರ್ಥಿಗಳು ಇದ್ದರು.

Attachments area