ಅತಿ ಸೂಕ್ಷ್ಮ ಮತಗಟ್ಟೆಗಳಿಗೆ ವೀಕ್ಷಕರ ಭೇಟಿ:ಚುನಾವಣೆ ಕ್ಷೇತ್ರದ ಮತಗಟ್ಟೆ ಅಧಿಕಾರಿಗಳಿಗೆ ಅಂತಿಮ ತರಬೇತಿ

??

ಆಳಂದ: ಮೇ.3:ವಿಧಾನಸಭೆ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಸ್ಥಾಪಿಸಿದ ಅತಿ ಸೂಕ್ಷ್ಮ ಮತಗಟ್ಟೆಗಳಿಗೆ ಮಂಗಳವಾರ ಕ್ಷೇತ್ರದ ಚುನಾವಣಾ ವೀಕ್ಷರಾಗಿರುವ ಐಎಎಸ್ ಅಧಿಕಾರಿ ಮಿತಿಲೇಶ ಮಿಶ್ರಾ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿರು.

ಪಟ್ಟಣದಲ್ಲಿನ ಅತಿಸೂಕ್ಷ್ಮ ಮತಗಟ್ಟೆ ಕೇಂದ್ರ-3 ಹಾಗೂ ಕಡಗಂಚಿ, ಖಜೂರಿ ಮತ್ತು ಝಳಕೆ ಕೆ. ಗ್ರಾಮದಲ್ಲಿ ತಲಾವೊಂದು ಮತಗಟ್ಟೆಗೆ ಭೇಟಿ ನೀಡಿದರು.

ಮಾದನಹಿಪ್ಪರಗಾ ವಲಯದ ಝಳಕಿ ಕೆ. ಗ್ರಾಮದ ಅತಿಸೂಕ್ಷ್ಮ ಮತಗಟ್ಟೆಗೆ ಭೇಟಿ ನೀಡಿದ ಅವರು, ಪಾರದರ್ಶಕ ಮುಕ್ತ ಮತ್ತು ನ್ಯಾಯ ಸಮ್ಮತ ಚುನಾವಣೆ ನಿರ್ವಹಿಸಲು ಎಲ್ಲಾ ರೀತಿಯ ನಿಯಮಗಳನ್ನು ಅಧಿಕಾರಿಗಳು ಪಾಲಿಸಬೇಕು ಎಂದು ಹೇಳಿದರು.

ಲೈಜನ್ ಆಫಿಸರ್ ಸತೀಶಕುಮಾರ, ಕ್ಷೇತ್ರದ ಚುನಾವಣಾಧಿಕಾರಿ ಮಹಾಂತೇಶ ಮುಳಗುಂದ, ಸೆಕ್ಟರ್ ಅಧಿಕಾರಿ ಡಾ ಶಶಿಕಾಂತ ಕಂದಾಯ ಇಲಾಖೆಯ ಸಿಬ್ಬಂದಿಗಳು ಜೊತೆಯಲ್ಲಿದ್ದರು.

ಪಟ್ಟಣದಲ್ಲಿ ಸಹಾಯಕ ಕೃಷಿ ನಿರ್ದೇಶಕ ಕಚೇರಿಯಲ್ಲಿನ ಮತಗಟ್ಟೆ ಕೇಂದ್ರ ಹಾಗೂ ದಿಗಂಬರ ಜೈನ್ ಪಾಠ ಶಾಲೆಯ ಕೇಂದ್ರ ಸೇರಿ ಇನ್ನಿತರ ಮತಗಟ್ಟೆ ಕೇಂದ್ರಗಳಿಗೆ ವೀಕ್ಷಕರು ಭೇಟಿ ನೀಡಿ ಸ್ಥಳೀಯ ಅಧಿಕಾರಿಗಳಿಗೆ ಸಲಹೆ ಸೂಚನೆಗಳು ನೀಡಿದರು. ಈ ವೇಳೆ ಚುನಾವಣೆ ಕರ್ತವ್ಯಕ್ಕೆ ನಿಯೋಜಿತ ಪುರಸಭೆ ಮುಖ್ಯಾಧಿಕಾರಿ ಯಶೋಧಾ, ತೋಟಗಾರಿಕೆ ಸಹಾಯಕ ನಿರ್ದೇಶಕ ಶಂಕರಗೌಡ ಪಾಟೀಲ ಹಾಗೂ ಸಿಬ್ಬಂದಿಗಳು ಜೊತೆಯಲ್ಲಿದ್ದರು.

ಮತಗಟ್ಟೆ ಅಧಿಕಾರಿಗಳಿಗೆ ತರಬೇತಿ: ಕ್ಷೇತ್ರದ ಸಾರ್ವತ್ರಿಕ ಚುನಾವಣೆಯಯ 254 ಮತಗಟ್ಟೆಗಳಲ್ಲಿ ಅತಿ ಸೂಕ್ಷ್ಮ-6, ಸೂಕ್ಷ್ಮ 54 ಮತ್ತು ಸಾಮಾನ್ಯ ಮತಗಟ್ಟೆ ಸಂಖ್ಯೆ-194 ಒಳಗೊಂಡಿದ್ದು, ಈ ಮತಗಟ್ಟೆ ಕೇಂದ್ರಗಳಲ್ಲಿ ಚುನಾವಣಾ ಕಾರ್ಯನಿರ್ವಹಿಸಲು ಪಟ್ಟಣದ ಬಾಲಕರ ಜ್ಯೂನಿಯರ್ ಕಾಲೇಜಿನಲ್ಲಿ ಮಂಗಳವಾರ ಕ್ಷೇತ್ರದ ಚುನಾವಣೆಯ ಮತಗಟ್ಟೆ ಅಧಿಕಾರಿಗಳಿಗೆ ತರಬೇತಿ ನೀಡಲಾಯಿತು. ತರಬೇತಿಯಲ್ಲಿ ಮತಗಟ್ಟೆ ಅಧ್ಯಕ್ಷ ಅಧಿಕಾರಿಗಳ 289 ಹಾಗೂ ಸಹಾಯಕ ಅಧಿಕಾರಿಗಳು 289 ಸೇರಿ ಒಟ್ಟು 578 ಅಧಿಕಾರಿಗಳು ಅಲ್ಲದೆ ಅಧಿಕಾರಿಗಳನ್ನು ಮತಯಂತ್ರ ನಿರ್ವಹಣೆ ತರಬೇತಿ ನೀಡಲಾಯಿತು ಎಂದು ಚುನಾಣಾಧಿಕಾರಿ ಮಹಾಂತೇಶ ಮುಳಗುಂದ ಅವರು ವಿವರಿಸಿದ್ದಾರೆ.

ತರಬೇತಿಯಲ್ಲಿ ಸೆಕ್ಟರ್ ಆಫಿಸರ್ ಆಗಿರುವ ಜಿಪಂ ಎಇ ಲಿಂಗರಾಜ ಪೂಜಾರಿ, ಶಿಕ್ಷಣ ಇಲಾಖೆಯ ಜಟಿಂಗರಾಯ ಜಕ್ಕಾಪೂರೆ, ಸಮಾಜ ಕಲ್ಯಾಣಾಧಿಕಾರಿ ಮೋನಮ್ಮಾ ಸುತ್ತಾರ, ಪುರಸಭೆ ಮುಖ್ಯಾಧಿಕಾರಿ ಯಶೋಧಾ, ಜೆಸ್ಕಾಂನ ಮಾಣಿಕರಾವ್ ಕುಲಕರ್ಣಿ, ಪುಶು ಇಲಾಖೆಯ ಶ್ರೀಕಾಂತ ತಟ್ಟಿ, ಡಾ. ಮಹಾಂತೇಶ ಪಾಟೀಲ ಮತ್ತು ಬಸವರಾಜ ಕಾಶನಕರ್, ಉದಯಕುಮಾರ ಜಾಧವ ಸೇರಿದಂತೆ 22 ಮಂದಿ ಹಾಗೂ 11 ಜನ ಮಾಸ್ಟರ್ ತರಬೇತಿದಾರ ಮೂಲಕ ಮತಗಟ್ಟೆ ಅಧಿಕಾರಿ, ಸಹಾಯಕ ಅಧಿಕಾರಿಗಳಿಗೆ ಮತಯಂತ್ರ, ವಿವಿಪ್ಯಾಡ್ ನಿರ್ವಹಣೆ ಕುರಿತು ತರಬೇತಿ ನೀಡಲಾಯಿತು.

ಮೇ 2ರಿಂದ ಅಂಚೆ ಮತದಾನ: ಜಿಲ್ಲೆಯ 9 ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ನೌಕರರಿಗೆ ಅಂಚೆ ಮತದಾನ ಕೈಗೊಳ್ಳಲು ಮತಗಟ್ಟೆ ಸ್ಥಾಪಿಸಲಾಗಿದೆ. ಈ ಅಂಚೆ ಮತದಾನವು ಮೇ 2ರಿಂದ 6ರವರೆಗೆ ನಡೆಯಲಿದೆ. ಮೊದಲು ದಿನ ಅಂಚೆ ಮತಕೈಗೊಳ್ಳಲು ಅರ್ಜಿ ಸಲ್ಲಿಸಿದ್ದ ನೌಕರರು ಮತದಾನ ಕೈಗೊಂಡರು. ಕೆಎಸ್‍ಆರ್‍ಟಿಸಿ, ಆರೋಗ್ಯ, ಅಗ್ನಿಶಾಮಕ, ಪೊಲೀಸ್, ಹಾಗೂ ಚುನಾವಣೆ ಕರ್ತವ್ಯದಲ್ಲಿರುವ ಇನ್ನಿತರ ಇಲಾಖೆ ಇಲಾಖೆಯ ಸಿಬ್ಬಂದಿಗಳು ಅಂಚೆ ಮತದಾನ ಕೈಗೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ಮುಳಗುಂದ ಅವರು ತಿಳಿಸಿದ್ದಾರೆ.