ಅತಿವೃಷ್ಠಿ ಬೆಳೆ ಹಾನಿ:7ನೇ ಕಂತಿನಲ್ಲಿ 9.24 ಕೋಟಿ ರೂ. ಬೆಳೆ ಪರಿಹಾರಕ್ಕೆ ಡಿ.ಸಿ. ಅನುಮೋದನೆ

ಕಲಬುರಗಿ,ನ.18: ಪ್ರಸಕ್ತ 2022-23 ಮುಂಗಾರು ಹಂಗಾಮಿನಲ್ಲಿ ಅತಿವೃಷ್ಠಿಯಿಂದ ಹಾಳಾದ ಬೆಳೆಗಳಿಗೆ ಭೂಮಿ ತಂತ್ರಾಂಶದಲ್ಲಿ ದಾಖಲಾಗಿರುವವರ ಪೈಕಿ ಏಳನೇ ಹಂತದ ರೂಪದಲ್ಲಿ ಜಿಲ್ಲೆಯ 8,815 ರೈತರಿಗೆ 9.24 ಕೋಟಿ ರೂ. ಬೆಳೆ ಪರಿಹಾರ ಬಿಡುಗಡೆಗೆ ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ಶುಕ್ರವಾರ ಅನುಮೋದನೆ ನೀಡಿದ್ದಾರೆ.

ಕಳೆದ ಜುಲೈ-ಆಗಸ್ಟ್ ಮಾಹೆಯಲ್ಲಿ ಜಿಲ್ಲೆಯಲ್ಲಿ ಸುರಿದ ಮಳೆಯಿಂದಾಗಿ 1.70 ಲಕ್ಷ ಹೆಕ್ಟೇರ್ ಪ್ರದೇಶ ಬೆಳೆ ಹಾನಿಯನ್ನು ಜಂಟಿ ಸಮೀಕ್ಷೆ ಮೂಲಕ ಅಂದಾಜಿಸಿ, ಬೆಳೆ ಪರಿಹಾರಕ್ಕೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಈಗ ಅನುಮೋದನೆ ನೀಡಿದ ಪರಿಹಾರ 2 ದಿನದಲ್ಲಿ ರೈತರ ಖಾತೆಗೆ ಹಣ ಜಮೆ ಆಗಲಿದೆ.

ಇದೀಗ ಅನುಮೋದನೆ ನೀಡಿರುವುದು ಸೇರಿದಂತೆ ಒಟ್ಟಾರೆ 7 ಹಂತದಲ್ಲಿ 2,57,439 ರೈತರಿಗೆ 234.04 ಕೋಟಿ ರೂ. ಪರಿಹಾರ ನೀಡಿದಂತಾಗಿದೆ ಎಂದು ಡಿ.ಸಿ. ಯಶವಂತ ವಿ. ಗುರುಕರ್ ತಿಳಿಸಿದ್ದಾರೆ.