ಅತಿವೃಷ್ಠಿ: ನಾನಾ ಹಳ್ಳಿಗಳಿಗೆ ಡಿ.ಸಿ ದಿಢೀರ್ ಭೇಟಿ: ಪರಿಶಿಲನೆ

ಬೀದರ:ಸೆ.16: ಅತಿವೃಷ್ಠಿಯಿಂದಾಗಿ ತೊಂದರೆಗೆ ಸಿಲುಕಿದ ಹುಮನಾಬಾದ್ ತಾಲೂಕಿನ ಬೋತಗಿ, ಅಲ್ಲೂರ, ನಿಂಬೂರ ಮತ್ತು ಸಿತಾಳಗೇರ ಗ್ರಾಮಗಳಿಗೆ ಜಿಲ್ಲಾಧಿಕಾರಿ ರಾಮಚಂದ್ರನ್ ಆರ್ ಅವರು ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ವಿಪರೀತ ಸುರಿದ ಮಳೆಯಿಂದಾಗಿ ಬೋತಗಿ-ಹಳ್ಳಿಖೇಡ್ ಮತ್ತು ಬೋತಗಿ-ಸಿತಾಳಗೇರಾ ಸೇತುವೆಗಳು ತುಂಬಿ ಹರಿಯುತ್ತಿರುವುದನ್ನು ಜಿಲ್ಲಾಧಿಕಾರಿಗಳು ವೀಕ್ಷಿಸಿದರು. ಸೇತುವೆ ತುಂಬಿ ಹರಿದು ಸಂಚಾರಕ್ಕೆ ತೊಂದರೆಯುಂಟಾಗಿದ್ದನ್ನು ಜಿಲ್ಲಾಧಿಕಾರಿಗಳು ಗಮನಿಸಿದರು.
ಈ ಹಿಂದೆ 2016ರಲ್ಲಿ ಈ ರೀತಿ ವಿಪರೀತ ಮಳೆ ಸುರಿದಿತ್ತು ಎಂಬುದು ಈ ಭಾಗದ ಜನರ ಅಭಿಪ್ರಾಯವಾಗಿದೆ. ವಿಪರೀತ ಮಳೆ ಸುರಿದು ಈ ಭಾಗದ 11 ಹಳ್ಳಿಗಳಲ್ಲಿನ ರಸ್ತೆಗಳು ಕೆಟ್ಟು ಹೋಗಿವೆ. ಹೊಲಗಳಿಗೆ ನೀರು ಹರಿದು ಹಾನಿಯಾಗಿದೆ ಎಂದು ಇದೆ ವೇಳೆ ತಹಸೀಲ್ದಾರರು ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದರು.
ಶಾಸಕರೊಂದಿಗೆ ಚರ್ಚೆ: ಹುಮಾನಾಬಾದ್ ಶಾಸಕ ರಾಜಶೇಖರ ಪಾಟೀಲ ಅವರೊಂದಿಗೆ ಇದೆ ವೇಳೆ ಜಿಲ್ಲಾಧಿಕಾರಿಗಳು ಅತಿವೃಷ್ಟಿಯಿಂದಾದ ಹಾನಿಯ ಬಗ್ಗೆ ಚರ್ಚಿಸಿದರು.
ಶಾಸಕರಲ್ಲಿ ಮನವಿ: ಅತಿವೃಷ್ಠಿಯಾದಾಗ ಈ ರೀತಿ ಸೇತುವೆ ಮೇಲೆ ನೀರು ಬಂದು ಸಂಚಾರಕ್ಕೆ ತೊಂದರೆಯಾಗುತ್ತಿದೆ. ಇದನ್ನು ಸರಿಪಡಿಸಿಕೊಡಬೇಕು ಎಂದು ಇದೆ ವೇಳೆ ಬೋತಗಿ ಗ್ರಾಮಸ್ಥರು ಶಾಸಕರಲ್ಲಿ ಮನವಿ ಮಾಡಿದರು. ಅತಿವೃಷ್ಠಿಯಿಂದಾದ ಹಾನಿಗೆ ಸಮರ್ಪಕ ಪರಿಹಾರ ನೀಡುವಂತೆ ಇದೆ ವೇಳೆ ವಿವಿಧ ಗ್ರಾಮಗಳ ಗ್ರಾಮಸ್ಥರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಲಕ್ಷ್ಮಣ್ ಈಶ್ವರ ಬುಳ್ಳಾ, ಹುಮಾನಾಬಾದ್ ತಾಪಂ ಅಧ್ಯಕ್ಷ ರಮೇಶ ಡಾಕುಳಗಿ, ಉಪಾಧ್ಯಕ್ಷೆ ಸುಗಂಧಾ ಅಣ್ಣೆಪ್ಪ, ತಹಸೀಲ್ದಾರ ನಾಗಯ್ಯ ಹಿರೇಮಠ ಹಾಗೂ ಇತರರು ಇದ್ದರು.