ಅತಿವೃಷ್ಠಿ: ಎರಡನೇ ಪಟ್ಟಿಯಲ್ಲಿ ಸುಳ್ಯ ತಾಲೂಕು ಘೋಷಣೆ

ಸುಳ್ಯ, ನ.೬-ತಿಂಗಳ ಹಿಂದೆ ಸರಕಾರದಿಂದ ಬಿಡುಗಡೆಗೊಂಡಿದ್ದ ಅತಿವೃಷ್ಠಿ / ಪ್ರವಾಹ ಪೀಡಿತ ತಾಲೂಕು ಪಟ್ಟಿಯಲ್ಲಿ ಸುಳ್ಯವನ್ನು ಬಿಡಲಾಗಿದ್ದು, ಇದೀಗ ಮತ್ತೆ ಸೇರ್ಪಡೆಗೊಳಿಸಿ ಸರಕಾರದಿಂದ ಆದೇಶ ಮಾಡಲಾಗಿದೆ.
ಸರಕಾರ ಅತಿವೃಷ್ಠಿ /ಪ್ರವಾಹ ಪೀಡಿತ ಪಟ್ಟಿಗಳ ಹೆಸರನ್ನು ಕೆಲ ತಿಂಗಳ ಹಿಂದೆ ಘೋಷಣೆ ಮಾಡಿದ ಸಂದರ್ಭ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕನ್ನು ಹೊರತು ಪಡಿಸಿ ಉಳಿದ ಎಲ್ಲ ತಾಲೂಕುಗಳನ್ನು ಆ ಪಟ್ಟಿಯಲ್ಲಿ ಸೇರ್ಪಡೆ ಮಾಡಲಾಗಿತ್ತು.
ಸುಳ್ಯ ತಾಲೂಕಿನಲ್ಲಿ ಈ ಬಾರಿ ವಿಪರೀತ ಮಳೆಯಾಗಿದ್ದು ಕೃಷಿ ಸೇರಿದಂತೆ, ಮನೆಗಳಿಗೂ ಹಾನಿಯಾಗಿತ್ತು. ಅತಿವೃಷ್ಠಿ ಪಟ್ಟಿಯಲ್ಲಿ ಸುಳ್ಯ ಸೇರದಿದ್ದುದರಿಂದ ತಾಲೂಕಿನಲ್ಲಿ ಆದ ನಷ್ಟಗಳಿಗೂ ಪರಿಹಾರ ಸಿಗದ ಸ್ಥಿತಿ ಎದುರಾಗಿತ್ತು.
ಬಳಿಕ ಶಾಸಕ ಎಸ್.ಅಂಗಾರರು ಸರಕಾರಕ್ಕೆ ಪತ್ರ ಬರೆದು ಅತಿವೃಷ್ಠಿ ಪಟ್ಟಿಗೆ ಸುಳ್ಯ ತಾಲೂಕನ್ನು ಸೇರಿಸುವಂತೆ ಮನವಿ ಮಾಡಿಕೊಂಡಿದ್ದರು. ಅಧಿಕಾರಿಗಳು ಜಿಲ್ಲಾಧಿಕಾರಿಗಳ ಮೂಲಕ ಸರಕಾರಕ್ಕೆ ವರದಿ ನೀಡಿದ್ದರು. ಕಾಂಗ್ರೆಸ್ ಪಕ್ಷದ ವತಿಯಿಂದ ತಹಶೀಲ್ದಾರ್ ಮೂಲಕ ಸರಕಾರಕ್ಕೆ ಮನವಿ ಮಾಡಿಕೊಳ್ಳಲಾಗಿತ್ತು. ಇದೀಗ ಸುಳ್ಯ ತಾಲೂಕನ್ನು ಈ ಪಟ್ಟಿಗೆ ಸೇರ್ಪಡೆಗೊಳಿಸಿ ಕಂದಾಯ ಇಲಾಖೆಯ ಅಪರ ಕಾರ್ಯದರ್ಶಿ ಯವರು ಆದೇಶ ಮಾಡಿದ್ದಾರೆ.
ಸುಳ್ಯ ನಗರದ ರಸ್ತೆ ಅಭಿವೃದ್ಧಿಗೆ ನಗರಾಭಿವೃದ್ಧಿ ಇಲಾಖೆಯಿಂದ ೨ ಕೋಟಿ ರೂ. ಅನುದಾನ
ಸುಳ್ಯ ನಗರ ಪಂಚಾಯತ್ ವ್ಯಾಪ್ತಿಯ ೧೦ ರಸ್ತೆ ಗಳ ಅಭಿವೃದ್ಧಿಗೆ ನಗರಾಭಿವೃದ್ಧಿ ಇಲಾಖೆಯಿಂದ ೨ ಕೋಟಿ ರೂ. (ಎಸ್‌ಎಫ್‌ಸಿ) ಅನುದಾನ ಬಿಡುಗಡೆಗೊಂಡಿರುವುದಾಗಿ ಶಾಸಕ ಎಸ್.ಅಂಗಾರ ತಿಳಿಸಿದ್ದಾರೆ. ಸುಳ್ಯ ಶಾರದಾ ಕಾಲೇಜಿನಿಂದ ಜೂನಿಯರ್ ಕಾಲೇಜು ರಸ್ತೆ ಅಭಿವೃದ್ಧಿ ರೂ. ೨೦ ಲಕ್ಷ, ಕೇರ್ಪಳ ದುರ್ಗಾಪರಮೇಶ್ವರಿ ಕಲಾ ಮಂದಿರದಿಂದ ಕೇರ್ಪಳ ಕಡೆ ರಸ್ತೆ ಹಾಗೂ ಕೇರ್ಪಳ ಬೂಡು ರಸ್ತೆ ಅಭಿವೃದ್ಧಿ ರೂ. ೨೦ ಲಕ್ಷ, ಕುರುಂಜಿಭಾಗ್ ಐಟಿಐ ಹಿಂಬದಿಯಿಂದ ದೊಡ್ಡಣ್ಣ ಬರೆಮೇಲು ಮನೆ ಕಡೆ ರಸ್ತೆ ಅಭಿವೃದ್ಧಿ ರೂ. ೨೦ ಲಕ್ಷ, ಸುಳ್ಯ ನ್ಯಾಯಾಲಯದ ಬಳಿಯಿಂದ ಕುರುಂಜಿಗುಡ್ಡೆ ಭಸ್ಮಡ್ಕ ರಸ್ತೆ ಅಭಿವೃದ್ಧಿ ರೂ. ೨೦ ಲಕ್ಷ, ಸೂರ್ತಿಲ ಅಂಗನವಾಡಿಯಿಂದ ತೀರ್ಥರಾಮ ಆಚಾರಿ ಮನೆ ಕಡೆ ರಸ್ತೆ ಮತ್ತು ಸೂರ್ತಿಲ ಪಿ.ಕೆ. ಉಮೇಶ್ ಮನೆ ಪಕ್ಕದ ರಸ್ತೆ ಅಭಿವೃದ್ಧಿ ರೂ. ೨೦ ಲಕ್ಷ, ಜಟ್ಟಿಪಳ್ಳ ಕಡೆಯಿಂದ ಪೆಲ್ತಡ್ಕ ಕಡೆ ಹೋಗುವ ರಸ್ತೆ ಅಭಿವೃದ್ಧಿ ರೂ. ೨೦ ಲಕ್ಷ, ಜಟ್ಟಿಪಳ್ಳ ಕೆಂಚಪ್ಪ ಭಂಡಾರಿ ಅಂಗಡಿಯಿಂದ ಜಟ್ಟಿಪಳ್ಳ ಕಟ್ಟೆಯವರೆಗೆ ರಸ್ತೆ ಅಭಿವೃದ್ಧಿ ರೂ. ೨೦ ಲಕ್ಷ, ಮಿಲಿಟರಿ ಗ್ರೌಂಡ್‌ನಿಂದ ಜಯನಗರ ರಸ್ತೆ ಅಭಿವೃದ್ಧಿ ರೂ. ೨೦ ಲಕ್ಷ, ಕೊಯಿಕುಳಿ ಮೂಡೆಕಲ್ಲು ರಸ್ತೆ ಅಭಿವೃದ್ಧಿಗೆ ರೂ. ೨೦ ಲಕ್ಷ, ಕುರುಂಜಿಗುಡ್ಡೆ ಒಳಾಂಗಣ
ಕ್ರೀಡಾಂಗಣಕ್ಕೆ ಹೋಗುವ ಎಡ ಮತ್ತು ಬಲ ರಸ್ತೆ ಅಭಿವೃದ್ಧಿಗೆ ೨೦ ಲಕ್ಷ ಬಿಡುಗಡೆಗೊಂಡಿದೆ ಎಂದು ಶಾಸಕರು ತಿಳಿಸಿದ್ದಾರೆ.