ಅತಿವೃಷ್ಠಿ, ಅನಾವೃಷ್ಠಿ ಸರ್ಕಾರ ನಿಕ್ಷ್ಯ

ಬೆಳಗಾವಿ,ಜು.೩೦:ರಾಜ್ಯದಲ್ಲಿ ಒಂದು ಕಡೆ ಅತಿವೃಷ್ಠಿ ಒಂದು ಕಡೆ ಬರದ ಛಾಯೆ ಇದೆ. ರಾಜ್ಯಸರ್ಕಾರ ಪರಿಹಾರ ಕಾರ್ಯಗಳತ್ತ ಗಮನ ಹರಿಸಿಲ್ಲ, ಯಾವ ಸಚಿವರು ಪ್ರವಾಹಪೀಡಿತ ಪ್ರದೇಶಗಳಿಗೆ ಭೇಟಿ ನೀಡಿಲ್ಲ. ಮುಖ್ಯಮಂತ್ರಿಗಳು ಸಚಿವರು ಹಾಗೂ ಶಾಸಕರುಗಳ ಸಮರ ಬಗೆಹರಿಸಲಷ್ಟೇ ಗಮನ ನೀಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟೀಕಿಸಿದ್ದಾರೆ.
ಬೆಳಗಾವಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಸುಮಾರು ೧೧ ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಇದೆ, ಉಳಿದ ಜಿಲ್ಲೆಗಳಲ್ಲಿ ಬರದ ಛಾಯೆ ಇದೆ. ರಾಜ್ಯಸರ್ಕಾರ ಈ ಬಗ್ಗೆ ಗಮನ ಕೊಡುತ್ತಿಲ್ಲ. ಮುಖ್ಯಮಂತ್ರಿಗಳು ವೀಡಿಯೊ ಸಂವಾದ ಮಾಡುವುದು ಬಿಟ್ಟರೆ ಯಾವುದೇ ಪರಿಹಾರ ಕಾರ್ಯಗಳು ನಡೆದಿಲ್ಲ ಎಂದು ಅವರು ಹೇಳಿದರು.
ಅತಿವೃಷ್ಠಿಯಿಂದ ಹಲವೆಡೆ ಮನೆಗಳಿಗೆ ಹಾನಿಯಾಗಿದೆ. ಜಾನುವಾರುಗಳ ಸಾವು ದೊಡ್ಡ ಪ್ರಮಾಣದಲ್ಲಿ ಆಗಿದೆ. ರಾಜ್ಯಸರ್ಕಾರ ಮನೆ ಕಳೆದುಕೊಂಡವರಿಗೆ ತಕ್ಷಣವೇ ೧೦ ಸಾವಿರ ರೂ. ಪರಿಹಾರ ಕೊಡಬೇಕು. ಆದರೆ, ಆ ಕೆಲಸ ಆಗಿಲ್ಲ ಎಂದರು.
ಬೆಳೆ ನಾಶವಾಗಿರುವ ಬಗ್ಗೆಯೂ ಪ್ರಾಥಮಿಕ ಸಮೀಕ್ಷೆ ಕೂಡ ನಡೆದಿಲ್ಲ. ದೊಡ್ಡ ಪ್ರಮಾಣದಲ್ಲಿ ಪ್ರಾಣಹಾನಿಯಾಗಿವೆ. ಇಷ್ಟಾದರೂ ಯಾವ ಸಚಿವರು ಪ್ರವಾಹಪೀಡಿತ ಪ್ರದೇಶಗಳಿಗೆ ಭೇಟಿ ನೀಡಿಲ್ಲ ಎಂದರು.
ಬರಪೀಡಿತ ಪ್ರದೇಶಗಳಲ್ಲಿ ಬೇರೆ ಬೆಳೆ ಬೆಳೆಯಲಿ ಬೀಜ, ಗೊಬ್ಬರ ಕೊಡುವ ಕೆಲಸ ಆಗಿಲ್ಲ, ಸರ್ಕಾರದವರು ಕೇವಲ ರಾಜಕಾರಣದಲ್ಲಿ ನಿರತರಾಗಿದ್ದಾರೆ. ತಮ್ಮ ಸ್ಥಾನ ಉಳಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ. ಮುಖ್ಯಮಂತ್ರಿಗಳು ಸಚಿವರು ಹಾಗೂ ಶಾಕರುಗಳ ಸಮರ ಬಗೆಹರಿಸುವುದರಲ್ಲೇ ಕಾಲ ಕಳೆಯುತ್ತಿದ್ದಾರೆ ಎಂದು ಟೀಕಿಸಿದರು. ಕೂಡಲೇ ಎಲ್ಲ ಸಚಿವರುಗಳು ಪ್ರವಾಹಪೀಡಿತ ಪ್ರದೇಶಗಳಿಗೆ ಭೇಟಿ ನೀಡಬೇಕು, ಮನೆ ಕಳೆದುಕೊಂಡವರಿಗೆ ೫ ಲಕ್ಷ ರೂ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಈ ಹಿಂದೆ ಪ್ರವಾಹ ಪರಿಸ್ಥಿತಿ ತಲೆದೋರಿದ್ದಾಗ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪರವರು, ಎಸ್‌ಡಿಆರ್‌ಎಫ್ ಪರಿಹಾರದ ಜತೆಗೆ ರಾಜ್ಯಸರ್ಕಾರದ ಪರಿಹಾರ ಸೇರಿಸಿ ೫ ಲಕ್ಷ ರೂ. ಕೊಡುವ ತೀರ್ಮಾನ ಮಾಡಿದ್ದೆವು. ಈಗಲೂ ಅದನ್ನು ಕಾಂಗ್ರೆಸ್ ಸರ್ಕಾರ ನೀಡಬೇಕು ಎಂದರು.
ಪ್ರವಾಹಪೀಡಿತ ಪ್ರದೇಶಗಳಿಗೆ ಭೇಟಿ ನೀಡದಿದ್ದರೆ ಸರ್ಕಾರ ಇದ್ದರೆಷ್ಟು ಬಿಟ್ಟರೆಷ್ಟು ಎಂದ ಬೊಮ್ಮಾಯಿರವರು, ಸಂಕಷ್ಟದಲ್ಲಿರುವವರ ನೆರವಿಗೆ ಈ ಸರ್ಕಾರ ಸ್ಪಂದಿಸಬೇಕು, ಇಲ್ಲದಿದ್ದರೆ ಬಡವರಿಗೆ ಅನ್ಯಾಯ ಮಾಡಿದಂತಾಗುತ್ತದೆ ಎಂದರು.
ವರ್ಗಾವಣೆ ದಂಧೆ
ಈ ಸರ್ಕಾರ ಸಂಪೂರ್ಣವಾಗಿ ವರ್ಗಾವಣೆ ದಂಧೆಯಲ್ಲಿ ತೊಡಗಿದೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲೂ ಇದೆಲ್ಲ ಪ್ರಸ್ತಾಪವಾಗಿದೆ. ವರ್ಗಾವಣೆ ದಂಧೆಯಲ್ಲಿ ಚೌಕಾಸಿ ನಡೆಯುತ್ತಿದೆ ಎಂದು ಆರೋಪಿಸಿದರು. ರಾಜ್ಯದಲ್ಲಿ ಸಮಾಜಘಾತುಕ ಶಕ್ತಿಗಳು ನಿರ್ಭಯವಾಗಿ ಓಡಾಡುತ್ತಿದ್ದಾರೆ. ಸರ್ಕಾರವೇ ಇದಕ್ಕೆ ಬೆಂಬಲ ನೀಡುತ್ತಿದೆ. ಕಾನೂನಿನ ಭಯ ಹೋಗಿದೆ. ಹೆಣ್ಣು ಮಕ್ಕಳ ಮೇಲೆ ಹಲ್ಲೆಯಾಗುತ್ತಿದೆ. ಪೊಲೀಸ್ ಅಧಿಕಾರಿಗಳ ಕೊಲೆಯಾಗುತ್ತಿದೆ. ಮತ್ತೊಂದೆಡೆ ಪೊಲೀಸರಿಗೆ ಅಮಾಯಕರ ಮೇಲೆ ಹಲ್ಲೆಯಾಗುತ್ತಿದೆ. ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಕುಸಿದಿದೆ. ಸರ್ಕಾರ ಕ್ರಮಕೈಗೊಳ್ಳದಿದ್ದರೆ ದಂಗೆ ಏಳುತ್ತಾರೆ ಎಂದರು.
ಸದ್ಯದಲ್ಲೇ ಅಧ್ಯಕ್ಷರ ನೇಮಕ
ರಾಜ್ಯ ಬಿಜೆಪಿಗೆ ಆದಷ್ಟು ಬೇಗ ರಾಜ್ಯಾಧ್ಯಕ್ಷರ ನೇಮಕವಾಗಲಿದೆ ಎಂದ ಅವರು ಲೋಕಸಭಾ ಚುನಾವಣೆ ತಯಾರಿ ನಡೆದಿದೆ. ಜಿಲ್ಲಾವಾರು ಸಭೆಗಳನ್ನು ಬಿಜೆಪಿ ಮಾಡುತ್ತಿದೆ ಎಂದರು.