ಅತಿವೃಷ್ಟಿ ಹಾನಿ ಪರಿಹಾರ ನೀಡಲು ಸಿಎಂಗೆ ಸೂರ್ಯಕಾಂತ ಮನವಿ

ಬೀದರ:ನ.7: ಕಳೆದ ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳಲ್ಲಿ ಸುರಿದ ವ್ಯಾಪಕ ಮಳೆ ಹಾಗೂ ಪ್ರವಾಹದಿಂದ ಬೀದರ್ ತಾಲೂಕಿನಲ್ಲಿ ಆಗಿರುವ ಬೆಳೆಹಾನಿ ಸೇರಿದಂತೆ ವಿವಿಧ ಆಸ್ತಿಪಾಸ್ತಿ ಹಾನಿಗೆ ಸಂಬಂಧ ಸೂಕ್ತ ಪರಿಹಾರ ನೀಡುವಂತೆ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಸೂರ್ಯಕಾಂತ ನಾಗಮಾರಪಳ್ಳಿ ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಮಾಡಿಕೊಂಡಿದ್ದಾರೆ.

ಶುಕ್ರವಾರ ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಈ ಕುರಿತು ಮನವಿ ಪತ್ರ ಸಲ್ಲಿಸಿದ ಸೂರ್ಯಕಾಂತ ಅವರು, ಒಂದು ತಿಂಗಳ ಅವಧಿಯಲ್ಲಿಯೇ ಎರಡು ಸಲ ಅತಿವೃಷ್ಟಿಯಾಗಿರುವುದು ರೈತರನ್ನು, ಸಾರ್ವಜನಿಕರನ್ನು ಇನ್ನಿಲ್ಲದ ಸಂಕಷ್ಟಗಳಿಗೆ ಕಾರಣವಾಗಿದೆ. ಸಮೃದ್ಧವಾಗಿ ಬಂದಿದ್ದ ಹೊಲದಲ್ಲಿನ ಎಲ್ಲ ಬೆಳೆಗಳು ಬಹುತೇಕ ನೀರುಪಾಲಾಗಿ ರೈತ ವಲಯ ದಿಕ್ಕು ತೋಚದಂತಾಗಿದೆ. ನಿಸರ್ಗದ ಹೊಡೆತದಿಂದ ನಲುಗಿರುವ ರೈತರಿಗೆ ಆದಷ್ಟು ಬೇಗನೇ ಪರಿಹಾರ ಒದಗಿಸಿ, ಅವರ ನೆರವಿಗೆ ಬರಬೇಕು ಎಂದು ಕೋರಿದ್ದಾರೆ.

ಕಂದಾಯ ಹಾಗೂ ಕೃಷಿ ಇಲಾಖೆಯಿಂದ ನಡೆದಿರುವ ಜಂಟಿ ಸಮೀಕ್ಷೆಯಲ್ಲಿ ಸೆಪ್ಟೆಂಬರ್ 15ರಿಂದ 17ರವರೆಗೆ ಮತ್ತು ಅಕ್ಟೋಬರ್ 13, 14ರಂದು ಆಗಿರುವ ಅತಿವೃಷ್ಟಿಗೆ ಬೀದರ್ ತಾಲೂಕಿನಲ್ಲಿ 33359 ಹೆಕ್ಟೇರ್ ಪ್ರದೇಶದಲ್ಲಿನ ವಿವಿಧ ಬೆಳೆಗಳು ಹಾಳಾಗಿವೆ. ತಾಲೂಕಿನಲ್ಲಿ ಒಟ್ಟು ಬಿತ್ತನೆಯಾದ ಬೆಳೆಗಳಲ್ಲಿ ಶೇ. 70ರಷ್ಟು ಬೆಳೆಗಳು ಅತಿವೃಷ್ಟಿಯಿಂದ ನಾಶವಾಗಿವೆ. ಸೋಯಾಬೀನ್ ಬೆಳೆಯು ಅತಿ ಹೆಚ್ಚು 16265 ಹೆಕ್ಟೇರ್ ಪ್ರದೇಶದಲ್ಲಿನ ಹಾನಿಗೀಡಾಗಿದೆ. ಉದ್ದು, 3161 ಹೆಕ್ಟೇರ್, ಹೆಸರು 3681 ಹೆಕ್ಟೇರ್, ತೊಗರಿ 7535 ಹೆಕ್ಟೇರ್, ಜೋಳ 1325 ಹೆಕ್ಟೇರ್ ಹಾಗೂ ಕಬ್ಬು 1704 ಹೆಕ್ಟೇರ್ ಕ್ಷೇತ್ರದಲ್ಲಿ ನಾಶವಾಗಿದೆ. ಬೆಳೆಗಳೆಲ್ಲ ಹಾಳಾಗಿರುವ ಕಾರಣ ಕೈಗೆ ಬಂದು ತುತ್ತು ಬಾಯಿಗೆ ಇಲ್ಲ ಎಂಬಂತಾಗಿ ರೈತರು ಕಷ್ಟದಲ್ಲಿ ದಿನದೂಡುತ್ತಿದ್ದಾರೆ. ಇವರಿಗೆ ತುರ್ತಾಗಿ ಬೆಳೆ ಹಾನಿ ಪರಿಹಾರ ಒದಗಿಸಿ ಸಹಾಯಹಸ್ತ ಚಾಚಬೇಕು ಎಂದು ಗಮನ ಸೆಳೆದಿದ್ದಾರೆ.

ಅತಿವೃಷ್ಟಿಗೆ ಬೀದರ್ ತಾಲೂಕು ಮಾತ್ರವಲ್ಲ, ಇಡೀ ಜಿಲ್ಲೆಯೇ ನಲುಗಿದೆ. ಜಿಲ್ಲೆಯಲ್ಲಿ 2,49,258 ಹೆಕ್ಟೇರ್ ಪ್ರದೇಶದಲ್ಲಿನ ಬೆಳೆಗಳು ಹಾನಿಗೊಳಗಾಗಿವೆ. 9 ಜನ, 63 ಜಾನುವಾರು ಪ್ರಾಣಿ ಹಾನಿ ಸಂಭವಿಸಿದೆ. ಸುಮಾರು 1673 ಮನೆಗಳು ಕುಸಿದಿವೆ. ಅತಿವೃಷ್ಟಿಪೀಡಿತ ಜಿಲ್ಲೆಗೆ ಅನುದಾನ ಒದಗಿಸಿ ನೊಂದವರ ನೆರವಿಗೆ ಬರಬೇಕು ಎಂದು ಮುಖ್ಯಮಂತ್ರಿಗಳಿಗೆ ಮೊರೆಯಿಟ್ಟರು.

ಮನವಿ ಸ್ವೀಕರಿಸಿದ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ಈ ಬಗ್ಗೆ ಸೂಕ್ತ ಕ್ರಮಕ್ಕೆ ಕಂದಾಯ ಇಲಾಖೆ ಮತ್ತು ವಿಪತ್ತು ನಿರ್ವಹಣಾ ವಿಭಾಗಕ್ಕೆ ಸೂಚಿಸುವುದಾಗಿ ಹೇಳಿದರು. ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷರಾದ ಸುಭಾಷ ಕಲ್ಲೂರ್, ಡಾ. ಶೈಲೇಂದ್ರ ಬೆಲ್ದಾಳೆ, ಪ್ರಮುಖರಾದ ಬಾಬು ವಾಲಿ, ಬಾಬುರಾವ ಕಾರಬಾರಿ, ಸೋಮನಾಥ ಪಾಟೀಲ್, ಜಗನ್ನಾಥ ಸಿರಕಟನಳ್ಳಿ, ಮಲ್ಲೇಶ ಗಣಪುರ ಇತರರಿದ್ದರು.