ಅತಿವೃಷ್ಟಿ ಹಾನಿ ಪರಿಶೀಲನೆ

ಗದಗ, ಸೆ.17: ಗದಗ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮಹಮ್ಮದ್ ಮೊಹಸಿನ್ ಅವರು ಜಿಲ್ಲೆಯ ಹೊಂಬಳದಲ್ಲಿ ಶುಕ್ರವಾರ ಅತಿವೃಷ್ಟಿಯಿಂದ ಹಾನಿಗೊಳಗಾದ ರಸ್ತೆ, ಸೇತುವೆ ಹಾಗೂ ಬೆಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಅತಿಷ್ಟಿಯಿಂದ ಹಾನಿಗೊಳಗಾದ ಸಂತ್ರಸ್ತರಾದ ಅರ್ಹ ಎಲ್ಲ ಕುಟುಂಬಗಳಿಗೂ ಸಹ ಪರಿಹಾರ ದೊರೆಯಬೇಕು. ಪರಿಹಾರ ಕಾರ್ಯವನ್ನು ಚುರುಕುಗೊಳಿಸಲು ಅಧಿಕಾರಿಗಳಿಗೆ ಸ್ಥಳದಲ್ಲೇ ಆದೇಶಿಸಿದರು. ಬೆಳೆ ಸಮೀಕ್ಷೆಯ ವರದಿ ನಿಖರವಾಗಿರಲಿ ಎಂದರು.
ಜಿಲ್ಲಾಧಿಕಾರಿ ವೈಶಾಲಿ ಎಂ ಎಲ್ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಸುಶೀಲಾ ಬಿ ಅವರು ಹಾನಿ ಕುರಿತು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮಹಮ್ಮದ್ ಮೋಹಸಿನ್ ಅವರಿಗೆ ಮನವರಿಕೆ ಮಾಡಿಕೊಟ್ಟರು.
ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಅನ್ನಪೂರ್ಣ, ಕೃಷಿ ಜಂಟಿ ನಿರ್ದೇಶಕ ಜಿಯವುಲ್ಲಾ ಕೆ, ತೋಟಗಾರಿಕೆ ಇಲಾಖೆ ಉನಿರ್ದೇಶಕರಾದ ಶಶಿಕಾಂತ ಕೊಟಿಮನಿ, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರ ಪಿ.ಎಸ್. ಪಾಟೀಲ, ತಹಶೀಲ್ದಾರ ಕಿಶನ ಕಲಾಲ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಕಂದಾಯ ನೀರಿಕ್ಷಕರು, ಗ್ರಾಮ ಲೆಕ್ಕಾಧಿಕಾರಿಗಳು ಹಾಜರಿದ್ದರು.
ನಂತರ ಅವರು ಕಳಸಾಪೂರ ಗ್ರಾಮದಲ್ಲಿನ ಪಿಎಂಜಿ ಎಸ್ ವೈ ಹಾಗೂ ಪಂಚಾಯತ ರಾಜ್ ಇಲಾಖೆಯ ಹಾನಿಯಾದ ರಸ್ತೆ ಪರಿಶೀಲನೆ ಮಾಡಿ, ಶೀಘ್ರವೇ ತಾತ್ಕಾಲಿಕ ದುರಸ್ಥಿ ಕಾರ್ಯ ಕೈಗೊಳ್ಳಲು ಸೂಚನೆ ನೀಡಿದರು. ಇಲಾಖೆಯಲ್ಲಿರುವ ಅನುದಾನವನ್ನು ಬಳಸಿಕೊಂಡು ಜನ ಸಾಮಾನ್ಯರಿಗೆ ದೈನಂದಿನ ಸಾರಿಗೆ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ನಾಗಾವಿಯಲ್ಲಿನ ರಸ್ತೆ ಅಧಿಕವಾಗಿ ಹಾನಿಯಾಗಿರುವ ಬಗ್ಗೆ ವೀಕ್ಷಣೆ ನಡೆಸಿ ಶೀಘ್ರವೇ ತಾತ್ಕಾಲಿಕ ದುರಸ್ತಿ ಕಾರ್ಯ ಕೈಗೊಂಡು ಶಾಶ್ವತ ಕಾಮಗಾರಿ ನಿರ್ವಹಿಸಲು ಅಗತ್ಯದ ಪ್ರಸ್ತಾವನೆಯನ್ನು ಸಲ್ಲಿಸಿ ಕಾಮಗಾರಿಗೆ ತಗಲುವ ಅನುದಾನ ಪಡೆಯಲು ತಿಳಿಸಿದ ಅವರು ಮಳೆಯಿಂದಾಗಿ ಹಾನಿಗೊಳಗಾದ ಮನೆ ಹಾಗೂ ರೈತರ ಜಮೀನುಗಳಿಗೆ ತೆರಳಿ ಪರಿಶೀಲನೆ ಮಾಡಿದರು.