
ಕಲಬುರಗಿ,ಆ.6:ಡಿಜಿಟಲ್ ತಂತ್ರಜ್ಞಾನದ ಬಳಕೆ ಮಿತಿಮೀರಿದರೆ ಅಪಾಯ ತಪ್ಪಿದ್ದಲ್ಲ. ಅವಶ್ಯ ವಿದ್ದಷ್ಟು ಬಳಸಿದರೆ ಸೂಕ್ತ ಎಂದು ಕೆಬಿಎನ್ ವಿವಿಯ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಡಾ ನಮ್ರತಾ ರಾವುತ್ ಹೇಳಿದರು.
ಅವರು ರವಿವಾರ ನಗರದ ಶರಣಬಸವ ವಿವಿಯ ಗೋದುತಾಯಿ ಮಹಿಳಾ ಇಂಜಿನಿಯರಿಂಗ್ ಕಾಲೇಜ್ ನಲ್ಲಿ. ಮಾತೋಶ್ರೀ ಗೋದುತಾಯಿ ಅವ್ವಾ ವುಮೆನ್ಸ್ ಕ್ಲಬ್ ಘಟಕದ ವತಿಯಿಂದ ಇಂದು ಆಯೋಜಿಸಿದ್ದ ಡಿಜಿಟಲ್ ಅಡಿಕ್ಷನ್ ಕಾರ್ಯಕ್ರಮದಲ್ಲಿ ಮಾತನಾಡಿದರು. ಮೊಬೈಲ್ ನಮ್ಮನ್ನು ಪ್ರಜ್ಞಾಹೀನರನ್ನಾಗಿ ಮಾಡಿದೆ. ನಾವು ಅನವಶ್ಯಕವಾಗಿ ಕಾಲಹರಣ ಮಾಡುತ್ತಿದ್ದೇವೆ. ಎಲ್ಲ ವಯೋಮನದವರು ಮೊಬೈಲಿನ ದಾಸರೆಂದರೆ ತಪ್ಪಾಗಲಾರದು. ಸ್ವಯಂ ನಿಯಂತ್ರಣ ಒಂದೇ ದಾರಿಯಾಗಿದೆ. ತರ್ಕ ಬದ್ಧ ಯೋಚನ ಲಹರಿ ಮಾಡ್ಬೇಕಾಗುತ್ತೆ ಎಂದರು. ವಿದ್ಯಾರ್ಥಿಗಳು ಮಾಹಿತಿ ಕಲೆಹಾಕಲು ಸಾಧಾರಣ ಮೊಬೈಲ್ ಬಳಸಿದರೆ ಒಳ್ಳೇದು ಎಂದು ಅಭಿಪ್ರಾಯಪಟ್ಟರು.
ನಂತರ ಡಿಜಿಟಲ್ ಗೀಳಿನ ಬಗ್ಗೆ ಬೆಂಗಳೂರಿನ ಮನೋತಜ್ಞ ಭುಜಬಲಿ ಬೋಗಾರ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಮೊಬೈಲ್ ಗಳು ಹೆಚ್ಚುತ್ತಿರುವುದರಿಂದ ಏಕಾಗ್ರತೆ ನಿದ್ರಾಹೀನತೆ ಓದಿದ್ದು ನೆನಪಿನಲ್ಲಿ ಉಳಿಯದಿರುವುದು ಸೇರಿದಂತೆ ಹತ್ತಾರು ಮಾನಸಿಕ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಮೊಬೈಲ್ ನಲ್ಲಿ ವ್ಯಸನಿ ತಂತ್ರಜ್ಞಾನ ಅಡಿಕ್ಷನ್ ಟೆಕ್ನಾಲಜಿ ಅಳವಡಿಸಿರುತ್ತಾರೆ. ಇದೇ ಕಾರಣಕ್ಕೆ ಎಲ್ಲರೂ ಬೇಗ ಮೊಬೈಲ್ ವ್ಯಸನಿಗಳಾಗುತ್ತಿದ್ದಾರೆ. ಕಲರ್,ಸೈಜ್, ಫಾಂಟ್ ಹೀಗೆ ಮೊಬೈಲ್ ಬಳಸುವ ವೀಕ್ಷಕರ ಮನಸ್ಥಿತಿ ಅರಿತು ಅದನ್ನೇ ಮೊಬೈಲ್ ಮೂಲಕ ಉತ್ಪಾದಕರು ಕೊಡುತ್ತಾ ಹೋಗುತ್ತಾರೆ. ಮಕ್ಕಳನ್ನು ದಾರಿಗೆ ತರುವುದು ಪಾಲಕರ ಜವಾಬ್ದಾರಿ.ಮನೆಯಲ್ಲಿ ಪಾಲಕರು ಮೊಬೈಲ್ ನೋಡುತ್ತಾ ಕುಳಿತು, ಮೊಬೈಲ್ ಬಿಡಿ ಎಂದು ಮಕ್ಕಳಿಗೆ ಹೇಳಿದರೆ ನಡೆಯುವುದಿಲ್ಲ.ಮೊದಲು ನೀವು ನೋಡುವುದನ್ನು ನಿಲ್ಲಿಸಬೇಕು. ರಾತ್ರಿ ಮೊಬೈಲ್ ಬಳಕೆಯಿಂದ ನಿದ್ರಾಹೀನತೆ ಕಾಡುತ್ತದೆ. ಬದ್ಧತೆ ರೂಢಿಸಿಕೊಂಡು ದಿನದಲ್ಲಿ ಇಷ್ಟೇ ಹೊತ್ತು ಮೊಬೈಲ್ ನೋಡಬೇಕು ಎಂಬುದನ್ನು ನಿರ್ಧರಿಸಬೇಕು.ಬೆಳಿಗ್ಗೆ ಎದ್ದ ತಕ್ಷಣ ಮೊದಲು ಒಂದು ಗಂಟೆ ಮೊಬೈಲ್ ಅನ್ನು ಮುಟ್ಟಲೇಬಾರದು. ತಮ್ಮ ವಿದ್ಯಾಭ್ಯಾಸ, ಯೋಗ ಧ್ಯಾನಗಳನ್ನು ಮಾಡಬೇಕು. ಹಂತ ಹಂತವಾಗಿ ಮೊಬೈಲ್ ಬಳಕೆ ಅವಧಿ ಕಡಿಮೆ ಮಾಡುತ್ತಾ ಹೋಗಬೇಕು. ಪಾಲಕರು ಮಕ್ಕಳಿಗೆ ಟೈಮ್ ಟೇಬಲ್ ಹಾಕಬೇಕು. ಒಳ್ಳೆಯದಕ್ಕಾಗಿ ಮೊಬೈಲ್ ಅನ್ನು ಬಳಸಬೇಕೆಂದು ಪ್ರೀತಿಯಿಂದ ತಿಳಿ ಹೇಳಬೇಕು ಜೊತೆಗೆ, ದೈಹಿಕ ಚಟುವಟಿಕೆಗಳಿಗೆ ಹೆಚ್ಚು ಮಹತ್ವ ಕೊಡಬೇಕು.
ಮನುಷ್ಯನ ಬಲಮಿದುಳು ಕ್ರಿಯೇಟಿವಿಟಿ ಕೇಂದ್ರವಾಗಿದ್ದು ಪಾಠದ ಜೊತೆಗೆ ಕಲೆ ಸಾಹಿತ್ಯ ಸಂಗೀತ ಆಟ ಇದೆಲ್ಲವನ್ನು ವಿದ್ಯಾರ್ಥಿಗಳು ರೂಢಿಸಿಕೊಳ್ಳಬೇಕು. ಮೊಬೈಲನ್ನು ನಮ್ಮ ಜ್ಞಾನ ವಿಕಸನೆಗೆ ಅಗತ್ಯಕ್ಕೆ ತಕ್ಕಂತೆ ಮಾತ್ರ ಬಳಸುವ ವಿವೇಚನೆಯನ್ನು ಬೆಳೆಸಿಕೊಳ್ಳಬೇಕು.
ಡೊಪಮೈನ್, ಎಂಡೊರ್ಫಿನ್, ಆಕ್ಸಿಟೋಸಿನ್ ಮತ್ತು ಸೆರಾಟೋನಿನ್ ಎಂಬ ರಾಸಾಯನಿಕಗಳ ಪ್ರಮಾಣ ನಮ್ಮ ದೇಹದಲ್ಲಿ ಕಡಿಮೆಯಾದಾಗ ಒತ್ತಡಕ್ಕೆ ಒಳಗಾಗುತ್ತೇವೆ. ಆ ಒತ್ತಡದಿಂದ ಹೊರಬರಲು ಅತಿಯಾದ ಮೊಬೈಲ್ ಧೂಮಪಾನದಂತ ಚಟಗಳಿಗೆ ಮೊರೆ ಹೋಗುತ್ತೇವೆ. ಇದರಿಂದ ಹೊರ ಬರಬೇಕಾದರೆ ಈ ನಾಲ್ಕು ರಾಸಾಯನಿಕ ಪ್ರಮಾಣ ಹೆಚ್ಚಾಗಬೇಕು. ಹೀಗಾಗಿ ನಾವು ಪುಸ್ತಕ ಓದಬೇಕು ಕ್ರೀಡೆ ಮತ್ತು ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಇನ್ನೊಬ್ಬರಿಗೆ ಸಹಾಯ ಮಾಡಬೇಕು ಸಲಹೆ ಕೊಡಬೇಕು.ಪ್ರತಿದಿನ ಕುಟುಂಬದ ಸದಸ್ಯರೊಂದಿಗೆ ಸಮಯ ಮೀಸಲಿಟ್ಟು ಬೆರೆಯಬೇಕು. ಇದರಿಂದ ಮನಸ್ಸು ಉಲ್ಲಾಸಗೊಂಡು ರಾಸಾಯನಿಕ ಬಿಡುಗಡೆಗಳ ಪ್ರಮಾಣ ನಿಯಮಿತದಲ್ಲಿರುತ್ತದೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಶರಣಬಸವ ವಿವಿ ಡೀನ್ ಶ್ರೀಮತಿ ಲಕ್ಷ್ಮೀ ಮಾಕಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಪೂಜಾ ಪ್ರಾರ್ಥಿಸಿ ಸ್ವಾಗತಿಸಿದರೆ, ವಿದ್ಯಾಶ್ರೀ ಪರಿಚಯಿಸಿದರು.
ನೀಲಮ್ ವಂದಿಸಿದರೆ
,ಸ್ಮಿತಾ ನಿರೂಪಿಸಿದರು.ಐ ಎಸ್ ಟಿ ನಿಕಾಯದ ಮುಖ್ಯಸ್ಥೆ ಶೀತಲ್ ಸೇರಿದಂತೆ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಉಪಸ್ಥಿತರಿದ್ದರು.